ದಲಿತ ಮುಖಂಡ ಹತ್ಯೆ ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹ

ರಾಯಚೂರು.ಅ.೩೧- ಮಾನವಿ ತಾಲೂಕಿನ ಮದ್ಲಾಪೂರು ಗ್ರಾಮದ ದಲಿತ ಮುಖಂಡ ಪ್ರಸಾದ್ ಅವರನ್ನು ಹಾಡುಹಗಲೇ ಕೊಲೆಗೈದಿರುವ ಪ್ರಕರಣವನ್ನು ಉನ್ನತ ಪೊಲೀಸ್ ಅಧಿಕಾರಿಗಳಿಂದ ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಡಾ. ಬಿ ಆರ್ ಅಂಬೇಡ್ಕರ್ ಸೇನಾ ಸಮತಿ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಗೃಹ ಸಚಿವ ಪರಮೇಶ್ವರ ಅವರಿಗೆ ಮನವಿ ರವಾನಿಸಿ ಒತ್ತಾಯಿಸಿದರು.
ಭೀಕರವಾಗಿ ಹತ್ಯೆಗೈದ ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಆಗ್ರಹಿಸಿದರು.ರಾಜ್ಯದಲ್ಲಿ ದಲಿತರಿಗೆ ರಕ್ಷಣೆ ಇಲ್ಲದಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಕೊಲೆಯನ್ನು ಮಾಡಿದ್ದಾರೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಮೃತ ಪ್ರಸಾದ್ ದಲಿತ ಮುಖಂಡ ಹೋರಾಟರಾಗಿದ್ದು, ಮಾನವಿ ತಾಲೂಕಿನಲ್ಲಿ ದಲಿತರಿಗೆ ಅನ್ಯಾಯವಾದರೆ ದಲಿತರ ಪರವಾಗಿ ನಿಂತು ನ್ಯಾಯಕ್ಕಾಗಿ ಹೋರಾಟ ಮಾಡುತ್ತಾ ಬಡವರ ಪರವಾಗಿ ಧ್ವನಿ ಎತ್ತುತ್ತಿದ್ದರು ಹಾಗೂ ರಾಜಕೀಯದಲ್ಲಿ ಒಳ್ಳೆಯ ಹೆಸರು ಮಾಡಿದ್ದು, ಇವರ ಬೆಳವಣಿಗೆಯನ್ನು ಸಹಿಸಿಕೊಳ್ಳದೇ ಮಾನವಿ ತಾಲೂಕಿನ ಪ್ರಭಾವಿ ರಾಜಕಾರಣಿಗಳ ಕುಮ್ಮಕ್ಕಿನಿಂದ ನಿನ್ನೆ ಮೃತ ಪ್ರಸಾದ ಜಮೀನಿಗೆ ಭತ್ತದ ಗದ್ದೆಗೆ ನೀರು ಕಟ್ಟಲು ಬೈಕ್ ಮೇಲೆ ತೆರಳಿದಾಗ ಹೊಲದಲ್ಲಿ ಹೊಂಚು ಹಾಕುತ್ತಿದ್ದ ಮೂವರು ದುಷ್ಕರ್ಮಿಗಳು ಏಕಾಏಕಿಯಾಗಿ ಪ್ರಸಾದ್ ರವರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಬಣಕಲ್ ಕ್ಯಾಂಪ್‌ನಲ್ಲಿ ಬರ್ಬರವಾಗಿ ಹತ್ಯೆ ಮಾಡಿದ್ದಾರೆ ಎಂದು ಮಾಡಿದ್ದಾರೆ ಆರೋಪಿಸಿದರು.
ಪ್ರಸಾದ್ ರವರ ಕೊಲೆ ಪ್ರಕರಣವನ್ನು ಉನ್ನತ ಪೊಲೀಸ್ ಅಧಿಕಾರಿಗಳಿಂದ ತನಿಖೆ ಮಾಡಿಸಬೇಕು. ಆರೋಪಿಗಳಿಗೆ ಕಾನೂನು ಕಠಿಣ ಶಿಕ್ಷೆಯನ್ನು ನೀಡಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಸಮಾಜ ಕಲ್ಯಾಣ ಇಲಾಖೆಯಿಂದ ರೂ.೨೦, ಲಕ್ಷ ಪರಿಹಾರವನ್ನು ನೀಡಬೇಕು. ಪ್ರಸಾದ್ ಕುಟುಂಬದವರಿಗೆ ಸರಕಾರಿ ನೌಕರಿಯನ್ನು ನೀಡಬೇಕು. ಪ್ರಸಾದ್ ರವರ ಕುಟುಂಬ ಸದಸ್ಯರಿಗೆ ಕೊಲೆ ಪ್ರಕರಣ ಮುಗಿಯುವವರೆಗೆ ರಕ್ಷಣೆ ನೀಡಬೇಕು.ಈ ಸಂದರ್ಭದಲ್ಲಿ ಸೈಯದ್ ರಶೀದ್, ಆನಂದ ಏಗನೂರು, ಬಿ.ಸದಾನಂದ, ಆಂಜನೇಯ ಗುಂಜಳ್ಳಿ, ತಿಮ್ಮಪ್ಪ ಕಡಗೋಳ್,ಪರಮೇಶ ಯರಮರಸ್, ಸಿದ್ದಪ್ಪ ಮನ್ಸಲಾಪೂರು, ಯಲ್ಲಪ್ಪ ಮನ್ನಲಾಪೂರು ರಂಗಪ್ಪ ಅಸ್ಕಿಹಾಳ, ಜಂಬಣ್ಣರೆಡ್ಡಿ, ಎಂ ಗೋಪಿ ಸೇರಿದಂತೆ ಉಪಸ್ಥಿತರಿದ್ದರು.