ದಲಿತ ಮುಖಂಡ ಪ್ರಸಾದ್ ಹತ್ಯೆ ಸಿಬಿಐ ತನಿಖೆಗೆ ವಿಜಯರಾಣಿ ಆಗ್ರಹ

ರಾಯಚೂರು.ನ.೦೭- ದಲಿತ ಮುಖಂಡ ಪ್ರಸಾದ್ ಬರ್ಬರ ಹತ್ಯೆಗೆ ಸುಫಾರಿ ನೀಡಿದ ಪ್ರಮುಖ ಆರೋಪಿಗಳನ್ನು ಪತ್ತೆ ಹಚ್ಚಲು ಈ ಪ್ರಕರಣ ಸಿಬಿಐ ತನಿಖೆಗೆ ಒಳಪಡಿಸುವುದರ ಮೂಲಕ ಇಂತಹ ಘಟನೆಗಳು ಮರುಕಳಿಸಿದಂತೆ ತಡೆಯಲು ಆರೋಪಿಗಳಿಗೆ ಗಲ್ಲು ಶಿಕ್ಷೆ ವಿಧಿಸಬೇಕೆಂದು ಮಹಾಶಕ್ತಿ ಮಹಿಳಾ ಸಬಲೀಕರಣ ಸಮತಿ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ವಿಜಯರಾಣಿ ಅವರು ಆಗ್ರಹಿಸಿದರು.
ಮದ್ಲಾಪುರ ಪ್ರಸಾದ್ ಕೊಲೆ ಹಿಂದೆ ಜಿಲ್ಲೆಯ ದೊಡ್ಡ ರಾಜಕೀಯ ಶಕ್ತಿಗಳ ಪ್ರಭಾವವಿದೆ. ಈ ಬಗ್ಗೆ ಸಿಬಿಐ ತನಿಖೆಯಿಂದ ಮಾತ್ರ ಎಲ್ಲಾ ಸತ್ಯಾಸತ್ಯ ಬಹಿರಂಗಗೊಳ್ಳಲಿವೆ. ಅ.೩೦ ಈ ಪ್ರಕರಣ ನಡೆದಿದ್ದು, ೧೨ ಜನರ ವಿರುದ್ಧ ದೂರು ದಾಖಲಿಸಿಕೊಳ್ಳಲಾಗಿದೆ. ಇಲ್ಲಿವರೆಗೆ ಕೇವಲ ನಾಲ್ವರನ್ನು ಮಾತ್ರ ಬಂಧಿಸಲಾಗಿದ್ದು, ಉಳಿದ ಎಂಟು ಜನರನ್ನು ಏಕೆ ಬಂಧಿಸಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಸಾದ ಒಬ್ಬ ಸಾಮಾಜಿಕ ಕಾರ್ಯಕರ್ತನಾಗಿದ್ದ, ಜನಪರ ಚಳುವಳಿಗಳಲ್ಲಿ ಮುಂದೆ ನಿಂತು ಹೋರಾಟ ಮಾಡುವಂತಹ ನಾಯಕನಾಗಿದ್ದ. ಯಾವುದೇ ಅಕ್ರಮ ಚಟುವಟಿಕೆಗಳಲ್ಲಿ ಪಾಲ್ಗೊಂಡ ವ್ಯಕ್ತಿಯಲ್ಲ. ಇವರ ಕೊಲೆ ಹಿಂದೆ ಅಕ್ರಮ ಅಕ್ಕಿ, ಮರಳು ಮಾಫಿಯಾಗಳ ವ್ಯಕ್ತಿಗಳ ಕೈವಾಡವಿದೆ ಎಂಬ ಮಾಹಿತಿ ನಮಗೆ ಲಭ್ಯವಾಗಿದೆ. ಜನಪರ ಚಳುವಳಿಗಳಲ್ಲಿ ಗುರುತಿಸಿಕೊಂಡ ಪ್ರಸಾದ ರಾಜಕೀಯ ಶಕ್ತಿಗಳ ಪ್ರಭಾವದಿಂದ ಪ್ರಸಾದ್ ಕೊಲೆ ಮಾಡಲಾಗಿದೆ. ಈ ಪ್ರಕರಣ ಸಿಬಿಐ ತನಿಖೆಗೆ ಒಳಪಡಿಸಬೇಕೆಂದು ಆಗ್ರಹಿಸಿದರು.
ಕರಿಯಪ್ಪ, ಪದ್ಮಾವತಿ, ಭಾಗ್ಯಮ್ಮ, ರೇಣುಕಾ, ಸಿರವಾರ ತಾಲೂಕು ಅಧ್ಯಕ್ಷ ಶಿವಮ್ಮ, ಕುಸ್ಮಾ ತಾಲೂಕು ಅಧ್ಯಕ್ಷರು ಪದಾಧಿಕಾರಿಗಳು ತನಿಖೆಗೆ ಒತ್ತಾಯಿಸಿದರು.