ಕೋಲಾರ,ಮಾ,೨೩-ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧಿಸಿದರೆ ೭೦ ಸಾವಿರ ದಲಿತ ಮತದಾರರು ಬೆಂಬಲಿಸಿ ಗೆಲ್ಲಿಸಲಿದ್ದಾರೆಂದು ನಗರಸಭೆ ಸದಸ್ಯ ಅಂಬರೀಷ್ ಹೇಳಿಕೆ ನೀಡಿರುವುದನ್ನು ಖಂಡಿಸಿ ಮಾಜಿ ಸಚಿವ ವರ್ತೂರು ಪ್ರಕಾಶ್ ಬೆಂಬಲಿತ ದಲಿತ ಮುಖಂಡರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ನಗರದ ನಚಿಕೇತ ನಿಲಯದ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ ಸುದ್ದಿಗಾರರೊಂದಿಗೆ ತಾಪಂ ಮಾಜಿ ಅಧ್ಯಕ್ಷ ಸೂಲೂರು ಆಂಜಿನಪ್ಪ ಮಾತನಾಡಿ, ೭೦ ಸಾವಿರ ದಲಿತರು ನಿಮ್ಮ ಜತೆಗಿದ್ದಾರೆ. ನೀವು ಕೋಲಾರ ಕ್ಷೇತ್ರದಲ್ಲೇ ಸ್ಪರ್ಧಿಸಬೇಕೆಂದು ೪ ದಿನಗಳಿಂದ ಊಟ ಬಿಟ್ಟು ಕಾಯುತ್ತಿದ್ದಾರೆಂದು ದಲಿತ ಮುಖಂಡರಾದ ವಕ್ಕಲೇರಿ ರಾಜಪ್ಪ, ಅಂಬೇಡ್ಕರ್ ವಿರೋಧಿ ಅಂಬರೀಶ್ ಮಾತನಾಡಿರುವುದು ಖಂಡನೀಯವಾಗಿದ್ದು, ೭೦ ಸಾವಿರ ದಲಿತರನ್ನು ಸಿದ್ದರಾಮಯ್ಯ ಬಳಿ ಅಡ ಇಟ್ಟಿದ್ದೀರಾ ಎಂದು ಪ್ರಶ್ನಿಸಿದರು.
ದಲಿತರನ್ನು ಯಾಮಾರಿಸುವ ಕೆಲಸ ಕೈಬಿಡಬೇಕು. ಸಿದ್ದರಾಮಯ್ಯ ರಾಜ್ಯದ ನಾಯಕರು ೭೦ ಸಾವಿರ ಮತಗಳು ಯಾರ ಕಡೆ ಇದೆ ಎನ್ನುವುದನ್ನು ಅರಿತುಕೊಳ್ಳಲಿ, ವರ್ತೂರು ಪ್ರಕಾಶ್ ಕ್ಷೇತ್ರಕ್ಕೆ ಬಂದ ಬಳಿಕ ಗ್ರಾಪಂ ಇಂದ ಹಿಡಿದು ಎಲ್ಲ ಕ್ಷೇತ್ರಗಳಲ್ಲಿ ಅಧಿಕಾರ ಸಿಕ್ಕಿದೆ. ಹಾಗಾಗಿ ನಮ್ಮ ಬೆಂಬಲ ವರ್ತೂರು ಪ್ರಕಾಶ್‌ಗೆ ಹೊರತು ಸಿದ್ದರಾಮಯ್ಯರಿಗಲ್ಲ ಎಂದರು.
ಜಿಪಂ ಮಾಜಿ ಸದಸ್ಯ ಅರುಣ್ ಪ್ರಸಾದ್ ಮಾತನಾಡಿ, ಇತ್ತೀಚೆಗೆ ಘಟಬಂಧನ್ ಮುಖಂಡರ ಹೇಳಿಕೆಗಳು ಮಿತಿಮೀರಿದೆ. ೭೦ ಸಾವಿರ ದಲಿತರೂ ಅವರ ಜತೆಗಿದ್ದಾರಾ ವರ್ತೂರು ಪ್ರಕಾಶ್ ಸಿದ್ದರಾಮಯ್ಯಗೆ ಸವಾಲು ಹಾಕಿದ್ದಾರೆ, ಅವರು ಉತ್ತರ ನೀಡಲಿ. ಅದನ್ನು ಬಿಟ್ಟು ಬಾಯಿಗೆ ಬಂದಂತೆ ಮಾತನಾಡುವುದು ಸರಿಯಲ್ಲ. ಮಿಸ್ಟರ್ ಅಂಬರೀಶ್ ನೀನು ಅಂಬೇಡ್ಕರ್ ವಿರುದ್ಧ ಧಿಕ್ಕಾರ ಕೂಗಿದಾಗಲೇ ನಿನ್ನ ಗಂಡಸ್ತನ ಮುಗಿಸುತ್ತಿದ್ದೇವು. ವರ್ತೂರು ಪ್ರಕಾಶ್ ಸೂಚನೆಯಿಂದಾಗಿ ಸುಮ್ಮನೆ ಇದ್ದೇವೆ. ವರ್ತೂರು ಪ್ರಕಾಶ್‌ಗಾಗಿ ಬೇಕಿದ್ದರೆ ಕತ್ತು ಕೊಯ್ದುಕೊಳ್ತೇವೆ ನಾವು. ನಿನ್ನಂತೆ ನಾನು ನಾಟಕ ಮಾಡಲ್ಲ, ದಲಿತರ ಬಗ್ಗೆ ಮಾತನಾಡುವ ಮುನ್ನ ಎಚ್ಚರಿಕೆಯಿರಲಿ ಎಂದರು.
ಜಿಪಂ ಮಾಜಿ ಸದಸ್ಯೆ ರೂಪಶ್ರೀ ಮಂಜು ಮಾತನಾಡಿ, ನಾವು ಜನಪ್ರತಿನಿಧಿಗಳು ಕೇವಲ ೧ ಮತದಿಂದ ಗೆದ್ದು ಬಂದಿಲ್ಲ. ಸಾವಿರಾರು ಮಂದಿ ಮತ ಹಾಕಿ ಗೆಲ್ಲಿಸಿದ್ದಾರೆ. ಆದರೆ ತಾನೇ ಮುಖಂಡ ಎಂದು ಘೋಷಿಸಿಕೊಂಡು ಮನಬಂದಂತೆ ಮಾತನಾಡುವ ಅಂಬರೀಶ್ ನಮ್ಮ ಸಮಾಜದಲ್ಲಿ ಹುಟ್ಟಿರುವುದೇ ಕರ್ಮ ಎಂದು ಕಿಡಿಕಾರಿದರು.
ವಾಲ್ಮೀಕಿ ಸಮುದಾಯದ ಮುಖಂಡ ಬಂಕ್ ಮಂಜುನಾಥ್, ೭೦ ಸಾವಿರ ದಲಿತರು ಸಿದ್ದರಾಮಯ್ಯ ಪರ ಎಂದು ಹೇಳಿದ್ದೀರಿ. ಆದರೆ, ಅಷ್ಟೂ ಜನರು ಕ್ಷೇತ್ರದಲ್ಲಿನಾ, ಜಿಲ್ಲೆಯಲ್ಲಿನಾ, ರಾಜ್ಯದಲ್ಲಿನಾ ಎನ್ನುವುದನ್ನು ಸಾಭೀತುಪಡಿಸಿ ಎಂದು ನಗರಸಭೆ ಸದಸ್ಯ ಅಂಬರೀಷ್‌ಗೆ ಸವಾಲು ಹಾಕಿ, ಎಲ್ಲರೂ ಕಾಂಗ್ರೆಸ್ ಗೆ ಬೆಂಬಲ ಎಂದು ಹೇಳ್ತೀರಿ ಯಾರು ಗ್ಯಾರಂಟಿ ಕೊಟ್ಟಿದ್ದಾರೆ ಎಂದು ಪ್ರಶ್ನಿಸಿದರು.
ರಾಜಕಾರಣ ರಾಜಕಾರಣದಂತೆಯೇ ಇರಲಿ. ಅದನ್ನು ಬಿಟ್ಟು ಬೇರೆ ಬೇರೆ ರೀತಿ ಮತನಾಡೋದು ಸರಿಯಲ್ಲ. ವರ್ತೂರು ಪರ ದಲಿತರು ಎನ್ನುವುದಕ್ಕೆ ನಾವೆಲ್ಲ ಜೀವಂತ ಸಾಕ್ಷಿ. ಆದರೆ ದಲಿತ ವಿರೋಧಿ ಎಂದು ವರ್ತೂರು ಪ್ರಕಾಶ್‌ರನ್ನು ಯಾವ ಲೆಕ್ಕದಲ್ಲಿ ಅಂತೀರಾ ಸಿದ್ದರಾಮಯ್ಯ ಬರಲಿ ಸ್ವಾಗತಿಸುತ್ತೇವೆ ನಮಗೆ ಭಯವಿಲ್ಲ ಎಂದರು.