ದಲಿತ ಮುಂಖಡನ ಮೇಲೆ ಹಲ್ಲೆ:ಗಡಿಪಾರಿಗೆ ಒತ್ತಾಯ

ದೇವದುರ್ಗ.ನ.೨೬-ಲಿಂಗಸುಗೂರು ತಾಲೂಕಿನ ಕಿಲ್ಲಾರಹಟ್ಟಿ ಗ್ರಾಮದ ದಲಿತ ಸಮುದಾಯದ ಬೈಲಪ್ಪನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡಲು ಒತ್ತಾಯಿಸಿ ಗಬ್ಬೂರು ನಾಡ ಕಚೇರಿ ಮುಂದೆ ಪ್ರಗತಿಪರ ಸಂಘಟನೆಗಳ ಒಕ್ಕೂಟ ಗುರುವಾರ ಪ್ರತಿಭಟನೆ ನಡೆಸಿತು.
ಬೈಲಪ್ಪರ ಮಗಳನ್ನು ಬೇರೆ ಸಮುದಾಯದ ಯುವಕ ಅಪಹರಣ ಮಾಡಿದ್ದಾರೆ. ಮಗಳನ್ನು ಹುಡುಕಿಕೊಡಿ ಎಂದು ಬೈಲಪ್ಪ ಮುದಗಲ್ ಠಾಣೆಗೆ ದೂರು ನೀಡಿದ್ದಾರೆ. ಈ ವಿಷಯ ಗಂಭೀರವಾಗಿ ಪರಿಗಣಿಸದ ಪಿಎಸ್‌ಐ, ಯುವತಿ ಕಾಣೆ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಾಗಿ ವರ್ಷ ಕಳೆದರೂ ಪೊಲೀಸರು ಯುವತಿ ಪತ್ತೆಹಚ್ಚಿಲ್ಲ. ಇದೇ ನೆಪದಲ್ಲಿ ಅನ್ಯ ಸಮುದಾಯದ ಜನರು ಗುಂಪು ಕಟ್ಟಿಕೊಂಡು ಬೈಲಪ್ಪನನ್ನು ಅರೆಬೆತ್ತಲೆಗೊಳಿಸಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಕೂಡಲೇ ಬೈಲಪ್ಪ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಿ ಗಡಿಪಾರು ಮಾಡಬೇಕು. ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿ, ೫೦ಲಕ್ಷ ರೂ. ಪರಿಹಾರ ನೀಡಬೇಕು. ಘಟನೆ ಕಾರಣವಾದ ಮುದಗಲ್ ಪಿಎಸ್‌ಐ, ಎಎಸ್‌ಐರನ್ನು ಸೇವೆಯಿಂದ ಅಮಾನತು ಮಾಡಬೇಕು. ಮುಂದೆಇಂಥ ಘಟನೆಗಳು ನಡೆಯದಂತೆ ಕಾನೂನು ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಮುಖಂಡರಾದ ಮಲ್ಲಪಗೌಡ ಮಾಪಾ, ರಾಜಪ್ಪ ಸಿರವಾರಕರ್, ಶಾಂತಕುಮಾರ ಹೊನ್ನಟಗಿ, ನರಸಪ್ಪ ಗಣೇಕಲ್, ಮಲ್ಲಪ್ಪ ಖಾನಾಪುರ, ಮರೆಪ್ಪ ಮಂದಕಲ್, ಜಾಕೂಬ್ ಬೊಮ್ಮನಾಳ, ಮಾರ್ತಂಡ ಗಬ್ಬೂರು, ಮುತ್ತುರಾಜ ಮ್ಯಾತ್ರಿ, ತುಕಾರಾಮ್ ಎನ್.ಗಣೇಕಲ್, ದಂಡಪ್ಪ ಹಿರೇಕೂಡ್ಲಿಗಿ, ತಾಯಪ್ಪ ಶಿರಡಿ, ಹುಲಿಗೆಪ್ಪ ಹೊನ್ನಟಗಿ, ರವಿಕುಮಾರ ಮರಡ್ಡಿ, ರಾಜಕುಮಾರ, ಹನುಮಂತ, ಲಿಂಗಪ್ಪ ಇತರರಿದ್ದರು.