
ಹುಬ್ಬಳ್ಳಿ,ಅ೧೨: ಹುಬ್ಬಳ್ಳಿಯ ಭುವನೇಶ್ವರಿ ನಗರದ ದಲಿತರ ಕಾಲೊನಿಯಲ್ಲಿ ಉಡುಪಿಯ ಪೇಜಾವರ ಮಠದ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ ಇಂದುಪಾದಯಾತ್ರೆ ನಡೆಸಿದರು.
ಪಾದಯಾತ್ರೆ ಆರಂಭವಾಗುತ್ತಿದ್ದಂತೆ ಭಕ್ತರು ಪುಷ್ಪವೃಷ್ಟಿಗೈದು ಭಕ್ತಿ ಸಮರ್ಪಿಸಿದರು. ಜೈ ಶ್ರೀರಾಮ್ ಘೋಷಣೆ ಕೂಗಿದರು.
ಬಳಿಕ ವಿಶ್ವ ಹಿಂದೂ ಪರಿಷತ್ ಹುಬ್ಬಳ್ಳಿ ಮಹಾನಗರದ ಧರ್ಮಚಾರಿ ಸಂಪರ್ಕ ಪ್ರಮುಖ ಯಲ್ಲಪ್ಪ ಬಾಗಲೋಟಿ ಅವರ ಮನೆಗೆ ಭೇಟಿ ನೀಡಿದರು. ವಿಶ್ವ ಹಿಂದೂ ಪರಿಷತ್ ಉತ್ತರ ಪ್ರಾಂತ ಪ್ರಚಾರಕ ಬಸವರಾಜ್ ಅವರು ಉಪಸ್ಥಿತರಿದ್ದರು.
ಕಾಲೊನಿಯ ಭುವನೇಶ್ವರಿ ದೇವಸ್ಥಾನಕ್ಕೆ ಭೇಟಿ ನೀಡಿದ ಶ್ರೀಗಳು ಪೂಜೆ ಸಲ್ಲಿಸಿದರು. ದೇವಸ್ಥಾನದಲ್ಲಿ ಮಾತನಾಡಿದ ಪೇಜಾವರ ಶ್ರೀಗಳು, ನಾವೆಲ್ಲರೂ ಸನಾತನ ಧರ್ಮೀಯರು. ರಾಮ ಆದರ್ಶ ಪುರುಷ. ಶತಮಾನಗಳ ಹೋರಾಟದ ಫಲವಾಗಿ ರಾಮಮಂದಿರ ನಿರ್ಮಾಣವಾಗುತ್ತಿದೆ ಎಂದರು.
ಜಗತ್ತೆಲ್ಲ ಸುಖವಾಗಿದಯೆಂದರೆ ರಾಮ ಕಾರಣ. ರಾವಣ ಕೆಟ್ಟ ಗುಣದ ಸಂಕೇತ. ಸುಖ, ಸಂತೋಷಕ್ಕೆ ರಾಮನ ಆರಾಧನೆ ಮಾಡೋಣ ಎಂದು ಹೇಳಿದರು.
ಇನ್ನೊಬ್ಬರನ್ನು ಬಡಿಯುತ್ತೇವೆ, ಕಡಿಯುತ್ತೇವೆ ಎನ್ನುವುದು ರಾವಣನ ಗುಣ. ಎಲ್ಲರೂ ರಾಮನ ಜಪ ಮಾಡೋಣ. ಮಕರ ಸಂಕ್ರಮಣದ ನಂತರ ರಾಮಮಂದಿರ ಉದ್ಘಾಟನೆ ಆಗಲಿದೆ. ಐದು ದೀಪಗಳನ್ನು ಬೆಳಗುವ ಮೂಲಕ ಎಲ್ಲರು ರಾಮನ ಆರಾಧನೆ ಮಾಡೋಣ ಎಂದರು.