ದಲಿತ ಕಾಲನಿಗೆ ಭೇಟಿ ನೀಡಿದ ಪೇಜಾವರಶ್ರೀ


ಉಡುಪಿ, ಡಿ.೨೧- ರಾಮ ಮಂದಿರ ಜನಜಾಗೃತಿ ಅಭಿಯಾನ’ದ ಪ್ರಯುಕ್ತ ಪೇಜಾವರ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ನಿನ್ನೆ ಕೊಡವೂರು ಗ್ರಾಮದ ಪಾಳೆಕಟ್ಟೆ ಎಂಬಲ್ಲಿರುವ ದಲಿತರ ಕಾಲನಿಗೆ ಭೇಟಿ ನೀಡಿದರು.
ಸಾಮೂಹಿಕ ಭಜನೆಯೊಂದಿಗೆ ಸ್ವಾಮೀಜಿಯನ್ನು ಕಾಲನಿಯವರು ಬರ ಮಾಡಿಕೊಂಡರು. ಬಳಿಕ ಅಲ್ಲಿನ ಮಾಧವ ಕರ್ಕೇರ ಮತ್ತು ಸದಾನಂದ ಎಂಬವರ ಮನೆಗಳಿಗೆ ಭೇಟಿ ನೀಡಿದ ಸ್ವಾಮೀಜಿ, ರಾಮ ದೀಪಗಳನ್ನು ಬೆಳಗಿಸಿ ದರು. ಮನೆಯವರು ಸ್ವಾಮೀಜಿಗೆ ಫಲಪುಷ್ಟ ಸಹಿತ ಗೌರವ ಅರ್ಪಿಸಿದರು. ಅಲ್ಲಿಂದ ಕಾಲನಿಯಲ್ಲಿರುವ ಶ್ರೀಮೂಕಾಂಬಿಕಾ ಭಜನಾ ಮಂದಿರಕ್ಕೆ ತೆರಳಿದ ಸ್ವಾಮೀಜಿ, ಸಂದೇಶ ನೀಡಿದರು. ಬಳಿಕ ಮಾತನಾಡಿದ ಅವರು, ದೇಶದ ಎಲ್ಲ ಹಿಂದುಗಳು ಸೇರಿ ಅಯೋಧ್ಯೆಯಲ್ಲಿ ಸುಂದರ ರಾಮಮಂದಿರ ನಿರ್ಮಾಣ ಮಾಡಬೇಕಾಗಿದೆ. ಆ ಮೂಲಕ ಇದು ಎಲ್ಲರ ದೇವಸ್ಥಾನ ಆಗಬೇಕು. ಅದಕ್ಕಾಗಿ ನಿಧಿ ಸಂಗ್ರಹ ಕೂಡ ಮಾಡಬೇಕಾಗಿದೆ. ರಾಮ ಮಂದಿರ ನಿರ್ಮಾಣದ ಜೊತೆಗೆ ಹಿಂದು ಸಮಾಜ ಹಾಗೂ ದೇಶದ ಪುನಾರುತ್ಥಾನ ಆಗೇಬೇಕು ಎಂದರು. ಈ ಸಂದರ್ಭದಲ್ಲಿ ಸ್ಥಳೀಯ ನಗರಸಭಾ ಸದಸ್ಯ ವಿಜಯ ಕೊಡವೂರು, ಸಾಮಾಜಿಕ ಕಾರ್ಯಕರ್ತ ವಾಸುದೇವ ಭಟ್ ಪೆರಂಪಳ್ಳಿ, ವಿಹಿಂಪ ಜಿಲ್ಲಾಧ್ಯಕ್ಷ ವಿಷ್ಣುಮೂರ್ತಿ ಆಚಾರ್ಯ, ಶ್ರೀಮೂಕಾಂಬಿಕಾ ಭಜನಾ ಮಂದಿರದ ಅಧ್ಯಕ್ಷ ದಯಾ ಸಾಲ್ಯಾನ್, ಮಾಜಿ ಅಧ್ಯಕ್ಷ ಕೆ.ಮಾಧವ ಕರ್ಕೇರ, ಮುಖಂಡ ಜೀವನ್ ಪಾಳೆಕಟ್ಟೆ ಮೊದಲಾದವರು ಉಪಸ್ಥಿತರಿದ್ದರು.