ದಲಿತರ ಹಣ ಗ್ಯಾರೆಂಟಿಗೆ

-ಮಹಮ್ಮದ್

ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನ ಗ್ಯಾರೆಂಟಿ ಯೋಜನೆಗಳಿಗೆ ಬಳಕೆ ಮಾಡುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಮೇಲ್ಮನೆಯಲ್ಲಿ ಪ್ರತಿಪಕ್ಷಗಳು ಸದನದ ಬಾವಿಗಿಳಿದು ಧರಣಿ ನಡೆಸಲಿದೆ.

ಬೆಳಗಾವಿ, ಡಿ.೮- ರಾಜ್ಯ ಸರ್ಕಾರದ ಐದು ಗ್ಯಾರೆಂಟಿ ಯೋಜನೆಗಳಿಗೆ ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂಬ ವಿಚಾರ ಮೇಲ್ಮನೆಯಲ್ಲಿ ಪ್ರತಿಧ್ವನಿಸಿತು. ಸರ್ಕಾರದ ಧೋರಣೆ ಖಂಡಿಸಿ ಪ್ರತಿಪಕ್ಷಗಳ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸಿದರು. ಸಭಾಪತಿಯವರು ಸೋಮವಾರ ಈ ವಿಷಯದ ಬಗ್ಗೆ ಅರ್ಧಗಂಟೆ ಚರ್ಚೆಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳ ಸದಸ್ಯರು ಧರಣಿ ಕೈಬಿಟ್ಟರು.
ವಿಧಾನ ಪರಿಷತ್ತಿನ ಪ್ರಶ್ನೋತ್ತರ ಕಲಾಪದಲ್ಲಿಂದು ಬಿಜೆಪಿ ಸದಸ್ಯ ಛಲವಾದಿ ನಾರಾಯಣಸ್ವಾಮಿ ಪ್ರಸ್ತಾಪಿಸಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಕಲ್ಯಾಣಕ್ಕಾಗಿ ಐದು ಗ್ಯಾರೆಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ, ಟಿಎಸ್‌ಪಿ ಹಣ ಬಳಕೆ ಮಾಡಲಾಗುತ್ತಿದೆ ಎಂದು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡರು.
ಇದಕ್ಕೆ ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಉತ್ತರಿಸಿ, ಎಸ್‌ಸಿಎಸ್‌ಪಿ, ಟಿಎಸ್‌ಪಿ ಅಧಿನಿಯಮ ೨೦೧೩ರ ಅನ್ವಯ ಪ.ಜಾತಿ, ಪ.ಪಂಗಡದವರಿಗೆ ನೇರವಾಗಿ ಪ್ರಯೋಜನವಾಗುವ ವೈಯಕ್ತಿಕ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಅನುದಾನ ಹಂಚಿಕೆ ಮಾಡಲು ಅವಕಾಶವಿದೆ.
ಈ ನಿಯಮದ ಅಡಿಯಲ್ಲಿ ಅನುಸೂಚಿತ ಜಾತಿ ಉಪಯೋಜನೆಗಳು ಹಾಗೂ ಬುಡಕಟ್ಟು ಉಪಯೋಜನೆಗಳ ಅಡಿಯಲ್ಲಿ ಇತರೆ ಸಮುದಾಯಗಳೊಂದಿಗೆ ಪ.ಜಾತಿ ಪ.ಪಂಗಡದ ವ್ಯಕ್ತಿಗಳು ಮತ್ತು ಕುಟುಂಬಗಳಿಗೆ ಪ್ರಯೋಜನ ಒದಗಿಸುವ ವಲಯಗಳಿಗೆ ನೀಡಬಹುದು.
ಇದು ಶಿಕ್ಷಣ, ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ಮುಂತಾದ ಸಾಮಾನ್ಯ ಸಾಮಾಜಿಕ ವಲಯದ ಯೋಜನೆಗಳನ್ನು ಎಸ್‌ಸಿಎಸ್‌ಪಿ-ಟಿಎಸ್‌ಪಿ ಕಾಯ್ದೆಯಡಿ ಸೇರಿಸಲು ಅವಕಾಶವಿರುತ್ತದೆ. ಹಾಗಾಗಿ, ಗ್ಯಾರೆಂಟಿ ಯೋಜನೆಗಳಿಗೆ ಯಾವುದೇ ಕಾರಣಕ್ಕೂ ಅನುದಾನ ಹಂಚಿಕೆ ಆಗಿಲ್ಲ ಎಂದು ವಿವರಿಸಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಾರಾಯಣಸ್ವಾಮಿ, ನಿಮಗೆ ನೀಡಿರುವ ಲಿಖಿತ ಉತ್ತರದಲ್ಲಿ ಗೃಹ ಲಕ್ಷ್ಮೀ, ಅನ್ನಭಾಗ್ಯ, ಗೃಹ ಜ್ಯೋತಿ, ಶಕ್ತಿ ಹಾಗೂ ಯುವ ನಿಧಿ ಯೋಜನೆಗಳಿಗೆ ಒಟ್ಟು ೧೦ ಸಾವಿರಕ್ಕೂ ಅಧಿಕ ಕೋಟಿ ರೂಪಾಯಿ ಬಳಕೆ ಮಾಡಿಕೊಂಡಿದ್ದಾರೆ ಎಂದು ತಿಳಿಸಲಾಗಿದೆ. ಇದು ಮರೆಮಾಚುವ ಪ್ರಯತ್ನ ಎಂದು ದೂರಿದರು.
ಈ ವೇಳೆ ಮಧ್ಯ ಪ್ರವೇಶಿಸಿದ ಪ್ರಿಯಾಂಕ್ ಖರ್ಗೆ, ಈ ಹಿಂದಿನ ಸರ್ಕಾರವೇ ಕೋವಿಡ್ ಸಂದರ್ಭದಲ್ಲಿ ಎಸ್‌ಸಿಎಸ್‌ಪಿ, ಟಿಎಸ್‌ಪಿ ಅನುದಾನ ಬಳಕೆ ಮಾಡಿಸಿಕೊಂಡಿದೆ ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಹಾದೇವಪ್ಪ, ಅನುದಾನ ದುರ್ಬಳಕೆ ಎಂಬ ಪ್ರಶ್ನೆ ಉದ್ಬವಿಸುವುದಿಲ್ಲ ಎಂದಾಗ ಕೆರಳಿದ ಪ್ರತಿಪಕ್ಷದ ಬಿಜೆಪಿ ಹಾಗೂ ಜೆಡಿಎಸ್ ಸದಸ್ಯರು, ಸದನದ ಬಾವಿಗಿಳಿದು ಧರಣಿ ನಡೆಸಿದರು. ಈ ಹಂತದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ ಅವರು ಸದನವನ್ನು ಹತ್ತು ನಿಮಿಷಗಳ ಕಾಲ ಕಲಾಪ ಮುಂದೂಡಿದರು.
ಬಳಿಕ ಕಲಾಪ ಆರಂಭವಾಗುವ ಮುನ್ನವೇ ಸದನದ ಬಾವಿಗಿಳಿಯಲ್ಲಿದ್ದ ಪ್ರತಿಪಕ್ಷ ಸದಸ್ಯರು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರ ಅಭಿವೃದ್ಧಿಗಾಗಿ ಮೀಸಲಿಟ್ಟಿರುವ ಹಣವನ್ನು ಗ್ಯಾರಂಟಿ ಯೋಜನೆಗಳಿಗಾಗಿ ಬಳಸುವ ಮೂಲಕ ರಾಜ್ಯ ಸರ್ಕಾರ ದಲಿತ ವಿರೋಧಿ ಧೋರಣೆ ಅನುಸರಿಸಿದೆ. ಬಿಜೆಪಿ ಸರ್ಕಾರವನ್ನು ದಲಿತ ವಿರೋಧಿ ಸರ್ಕಾರ ಎಂದು ಹೇಳಿದ್ದ ಕಾಂಗ್ರೆಸ್ ನಿಜವಾದ ದಲಿತ ವಿರೋಧಿ ಎಂದು ಘೋಷಣೆ ಕೂಗಿದರು.
ಈ ವೇಳೆ ಸಭಾಪತಿ ಹೊರಟ್ಟಿ ಅವರು, ಸಮಯದ ಅಭಾವ ಇದೆ. ಬರ ಹಾಗೂ ಉತ್ತರ ಕರ್ನಾಟಕ ಕುರಿತು ಚರ್ಚೆ ನಡೆಸಬೇಕು. ಗ್ಯಾರಂಟಿ ಯೋಜನೆ ಅನುದಾನ ಕುರಿತು ಚರ್ಚೆ ನಡೆಸಲು ಅರ್ಧ ಗಂಟೆ ಅವಕಾಶ ನೀಡಲಾಗುವುದು ಎಂದು ಹೇಳಿದರು.
ಇದಕ್ಕೆ ಧ್ವನಿಗೂಡಿಸಿದ ಸಚಿವ ಕೆ.ಎಚ್.ಮುನಿಯಪ್ಪ, ಸಭಾಪತಿ ಕಾಲಾವಕಾಶ ನೀಡುವುದಾಗಿ ಹೇಳಿದ್ದಾರೆ. ಪಕ್ಷಾತೀತವಾಗಿ ಎಲ್ಲರೂ ಸಮಯ ವ್ಯರ್ಥ ಮಾಡದೆ, ಬರ ಹಾಗೂ ಉತ್ತರ ಕರ್ನಾಟಕ ಕುರಿತು ಚರ್ಚೆ ನಡೆಸೋಣ ಎಂದರು.
ಸಭಾಪತಿ ಹೊರಟ್ಟಿಯವರು ಗ್ಯಾರೆಂಟಿ ಅನುದಾನ ಬಳಕೆ ಕುರಿತು ಸೋಮವಾರ ಅರ್ಧ ತಾಸು ಚರ್ಚೆಗೆ ಅವಕಾಶ ನೀಡಿದ ಹಿನ್ನೆಲೆಯಲ್ಲಿ ಪ್ರತಿಪಕ್ಷ ಸಂಪುಟ ಧರಣಿ ಕೈಬಿಟ್ಟರು.
ಬಳಿಕ ಬಿಜೆಪಿ ಸದಸ್ಯ ಕೋಟಾ ಶ್ರೀನಿವಾಸ ಪೂಜಾರಿ, ಭೋಜೇಗೌಡ, ತಿಪ್ಪೇಸ್ವಾಮಿ ಸೇರಿದಂತೆ ಪ್ರಮುಖರು ಮಾತನಾಡಿದರು.

ಕುರ್ಚಿಗೆ ಅಂಟಿಕೊಂಡಿಲ್ಲ ಹೊರಟ್ಟಿ
ನಾನು ಈ ಕುರ್ಚಿಗೆ ಅಂಟಿಕೊಂಡು ಕುಳಿತ್ತಿಲ್ಲ. ಈ ಕ್ಷಣವೇ ಬೇಕಾದರೂ ರಾಜೀನಾಮೆ ನೀಡುವೆ ಎಂದು ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿ ಮಾರ್ಮಿಕವಾಗಿ ಹೇಳಿದರು.
ವಿಧಾನ ಪರಿಷತ್ತಿನ ಕಲಾಪದಲ್ಲಿಂದು ರಾಜ್ಯ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಿಗೆ ದಲಿತರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎನ್ನುವ ವಿಚಾರಕ್ಕೆ ಮೇಲ್ಮನೆಯಲ್ಲಿ ವಿಪಕ್ಷದ ಸದಸ್ಯರು ಸದನದ ಬಾವಿಗಿಳಿದು ಧರಣಿ ನಡೆಸುತ್ತಿದ್ದ ಸಂದರ್ಭದಲ್ಲಿ ಪೀಠದಿಂದ ಎದ್ದು ನಿಂತು ಪ್ರಸ್ತಾಪಿಸಿದ ಅವರು, ಇದೇ ರೀತಿ ಪದ್ಧತಿ ಮುಂದುವರೆಸಿದರೆ ಸುಗಮ ಕಲಾಪ, ಸದನ ನಡೆಸುವುದು ಬೇಡ ಎಂದು ಅನಿಸುತ್ತಿದೆ ಎಂದರು.
ಪ್ರಶ್ನೋತ್ತರ ವೇಳೆಯಲ್ಲಿ ಚರ್ಚೆಗೆ ಅವಕಾಶ ನೀಡಲು ಸಾಧ್ಯವೇ ಇಲ್ಲ. ಆದರೂ, ಈ ವಿಷಯದ ಗಂಭೀರವನ್ನು ಅರೆತು ಸೋಮವಾರ ಅರ್ಧ ಗಂಟೆ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ.ಹಾಗಾಗಿ, ಧರಣಿ ಕೈಬಿಟ್ಟು ಹೊರಬಣ್ಣಿ ಎಂದು ರೂಲಿಂಗ್ ನೀಡಿದರು. ಆದರೂ, ವಿಪಕ್ಷ ಸದಸ್ಯರು ಸದನದ ಬಾವಿಯಲ್ಲಿಯೇ ಇದ್ದ ಕಾರಣಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಸ್ಥಾನದಲ್ಲಿ ನನಗೂ ಸಾಕಾಗಿದೆ. ನಾನು ಈ ಕುರ್ಚಿಗಾಗಿ ಅಂಟಿಕೊಂಡಿಲ್ಲ, ಈ ಕ್ಷಣವೇ ರಾಜೀನಾಮೆ ನೀಡಿ ಮನೆಗೆ ಹೋಗುವೇ ಎಂದರು ತಿಳಿಸಿದರು.