ದಲಿತರ ಸಮಸ್ಯೆಗಳಿಗೆ ಕಾನೂನಾತ್ಮಕ ಪರಿಹಾರ

ಕುಣಿಗಲ್, ಜು. ೨೭- ದಲಿತರ ಸಮಸ್ಯೆಗಳಿಗೆ ಪೊಲೀಸ್ ಇಲಾಖೆಯು ಕಾನೂನಾತ್ಮಕ ರಕ್ಷಣೆ ಒದಗಿಸಲಾಗುವುದು ಎಂದು ಪೊಲೀಸ್ ಇನ್ಸ್‌ಪೆಕ್ಟರ್ ಗುರುಪ್ರಸಾದ್ ತಿಳಿಸಿದರು.
ಪಟ್ಟಣದ ಪೊಲೀಸ್ ಠಾಣೆ ವ್ಯಾಪ್ತಿಯ ದಲಿತರ ಕುಂದು ಕೊರತೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ದಲಿತರಿಗೆ ಕಾನೂನಾತ್ಮಕವಾಗಿ ರಕ್ಷಣೆ ನೀಡುವುದರೊಂದಿಗೆ ಇತ್ತೀಚೆಗೆ ಜಮೀನಿನ ವ್ಯಾಜ್ಯಗಳ ಸಮಸ್ಯೆ ಹೆಚ್ಚಾಗಿದ್ದು ಶಾಂತಿಯುತವಾಗಿ ಬಗೆಹರಿಸಿಕೊಳ್ಳಲು ಮುಂದಾಗಬೇಕು. ಪುರಸಭೆಯಲ್ಲಿ ಶೇ. ೨೪ ರ ಅನುದಾನ ಹಣವನ್ನು ಬೇರೆ ಉದ್ದೇಶಗಳಿಗೆ ಬಳಕೆ ಮಾಡುತ್ತಿರುವುದನ್ನು ತಪ್ಪಿಸಿ ಪರಿಶಿಷ್ಟ ಜಾತಿ ವರ್ಗಗಳ ನಿರುದ್ಯೋಗಿ ಯುವಕರಿಗೆ ತರಬೇತಿ ನೀಡುವಂತಹ ಕಾರ್ಯ ಕೈಗೊಳ್ಳಲು ಪುರಸಭೆಗೆ ಪತ್ರ ಬರೆಯುವಂತೆ ಕೋರಲಾಯಿತು.
ಪಟ್ಟಣದಲ್ಲಿ ದಿನೇ ದಿನೇ ಜನಸಂಖ್ಯೆ ಹೆಚ್ಚಾಗುತ್ತಿದ್ದು ಟ್ರಾಫಿಕ್ ಸಮಸ್ಯೆ ಉಂಟಾಗುತ್ತಿದೆ. ಕೂಡಲೇ ಈ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಿದರು.
ಸಭೆಯಲ್ಲಿ ದಲಿತ ಮುಖಂಡರಾದ ವಿ.ಶಿವಶಂಕರ್, ದಂಡೂರ ನರಸಿಂಹಮೂರ್ತಿ, ವರದರಾಜು, ಚಿಕ್ಕಣ್ಣ, ರಾಮಚಂದ್ರಯ್ಯ, ನರಸಿಂಹ ಪ್ರಸಾದ್, ದಲಿತ ನಾರಾಯಣ್, ಕೃಷ್ಣರಾಜು ಮತ್ತಿತರರು ಉಪಸ್ಥಿತರಿದ್ದರು.