ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆ ಸುಜಾತಾ ಮಂಡಲ್ ಖಾನ್ ವಿರುದ್ಧ ಕ್ರಮಕ್ಕೆ ಬಿಜೆಪಿ ಆಗ್ರಹ

ಹೊಸಪೇಟೆ ಏ18: ದಲಿತರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿರುವ ಪಶ್ಚಿಮ ಬಂಗಾಳದ ತೃಣಮೂಲ ಕಾಂಗ್ರೆಸ್‍ನ ನಾಯಕಿ ಸುಜಾತಾ ಮಂಡಲ್ ಖಾನ್ ಅವರ ವಿರುದ್ಧ ಕೂಡಲೇ ಕಾನೂನು ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಸ್ಥಳೀಯ ಬಿಜೆಪಿಯ ಎಸ್ಸಿ ಮೋರ್ಚಾ ರಾಜ್ಯಪಾಲರಿಗೆ ಮನವಿ ಸಲ್ಲಿಸಿದೆ.
ಈ ಕುರಿತು ಶನಿವಾರ ಸಂಜೆ ತಹಸೀಲ್ದಾರ್ ಎಚ್. ವಿಶ್ವನಾಥರ ಮೂಲಕ ರಾಜ್ಯಪಾಲ ವಜುಭಾಯಿ ರೂಡಾಭಾಯಿ ವಾಲಾ ಅವರಿಗೆ ಸಲ್ಲಿಸಿದ ಮನವಿಯಲ್ಲಿ ತೃಣಮೂಲ ಕಾಂಗ್ರೆಸ್‍ನ ನಾಯಕಿ ಸುಜಾತಾ ಮಂಡಲ್ ಖಾನ್ ಎಂಬವರು ಪ.ಜಾತಿಯವರಿಗೆ ಭಿಕ್ಷುಕರಿಗೆ ಹೋಲಿಕೆ ಮಾಡಿದ್ದಾರೆ. ದೇಶಕ್ಕೆ ಸಂವಿಧಾನ ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ 130ನೇ ಜನ್ಮದಿನ ಸಂಭ್ರಮವಾಗಿ ಆಚರಿಸುವ ಸಂದರ್ಭದಲ್ಲೇ ಈ ರೀತಿ ಕೀಳುಮಟ್ಟದ ಹೇಳಿಕೆ ನೀಡಿರುವುದು ಖಂಡನೀಯ. ಕೂಡಲೇ ಅವರ ವಿರುದ್ಧ ಕಾನೂನುಕ್ರಮ ಜರುಗಿಸಬೇಕು ಎಂದು ಒತ್ತಾಯಿಸಿದರು.
ಎಸ್ಸಿ ಮೋರ್ಚಾದ ಮಂಡಲ ಅಧ್ಯಕ್ಷ ರಾಘವೇಂದ್ರ ಬಿ., ಮುಖಂಡರಾದ ಜೀವರತ್ನಂ, ಎಸ್.ಎಚ್. ಮಲ್ಲಪ್ಪ, ಚನ್ನಕೇಶವ, ಚೌಡಪ್ಪ, ಯಲ್ಲಪ್ಪ, ಮಂಜುನಾಥ, ದಾದಾವಲಿ ಮತ್ತಿತರರಿದ್ದರು.