ದಲಿತರ ಮೇಲೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ತುಮಕೂರು, ಸೆ. ೧೬- ದಲಿತರ ಮೇಲೆ ದೌರ್ಜನ್ಯ ನಡೆಸುವವರಿಗೆ ಮರಣ ದಂಡನೆ ಶಿಕ್ಷೆ ವಿಧಿಸಬೇಕು. ದೌರ್ಜನ್ಯ, ಅತ್ಯಾಚಾರ ಪ್ರಕರಣಗಳಲ್ಲಿ ತಕ್ಷಣವೇ ಪರಿಹಾರದ ಹಣ ವಿತರಿಸಬೇಕು ಹಾಗೂ ಒಳಮೀಸಲಾತಿ ಜಾರಿಗೊಳಿಸಬೇಕು ಎಂದು ಒತ್ತಾಯಿಸಿ ದಲಿತ ಸಂಘರ್ಷ ಸಮಿತಿ ವತಿಯಿಂದ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು.
ದಲಿತ ಸಂಘರ್ಷ ಸಮಿತಿ ಅಧ್ಯಕ್ಷ ಪಿ.ಎನ್.ರಾಮಯ್ಯ ಅವರ ನೇತೃತ್ವದಲ್ಲಿ ನೂರಾರು ಮಂದಿ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಜಮಾಯಿಸಿ ಜಿಲ್ಲಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಪಿ.ಎನ್.ರಾಮಯ್ಯ, ದೇಶದಲ್ಲಿ ಅದರಲ್ಲಿಯೂ ಕರ್ನಾಟಕದಲ್ಲಿ ಕಾನೂನು ಸುವ್ಯವಸ್ಥೆ ಕುಸಿದಿದೆ. ನಿರುದ್ಯೋಗ, ಬಡತನ, ಹಸಿವು ತಾಂಡವವಾಡುತ್ತಿದೆ. ಬಡವರು, ದಲಿತರು, ಕಾರ್ಮಿಕರ ಜೀವಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇತರರಿಗೆ ಸರಿ ಸಮಾನಾಗಿ ದೇವಾಲಯದ ಕಟ್ಟೆಯ ಮೇಲೆ ಕುಳಿತರು ಎಂಬ ಕಾರಣಕ್ಕೆ ಸಿಂದಗಿ ತಾಲ್ಲೂಕು ಬೂದಿಹಾಳ್‌ನ ದಲಿತ ಮುಖಂಡ ಅನಿಲ ಶರಣಪ್ಪ ಅವರನ್ನು ಕೊಲೆ ಮಾಡಲಾಯಿತು. ಹಿಪ್ಪರಗಿ ತಾಲ್ಲೂಕು ಸಂತಪುರದ ದಲಿತ ಹೆಣ್ಣು ಮಗಳಾದ ರೇಣುಕಮ್ಮನ ಮೇಲೆ ಅತ್ಯಾಚಾರ ವೆಸಗಿ ಕೊಲೆ ಮಾಡಲಾಯಿತು. ಗುಂಡ್ಲುಪೇಟೆ ವೀರಪುರದ ಪ್ರತಾಪ ರೇವಣ್ಣ ಎಂಬ ಯುವಕನನ್ನು ದೇವಾಲಯ ಪ್ರವೇಶಿಸಿದನೆಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ. ಈ ಹಿಂದೆಯೂ ಹಲವು ಇಂತಹದ್ದೇ ಪ್ರಕರಣ ರಾಜ್ಯದಲ್ಲಿ ಜರುಗಿದ್ದರೂ ಇದುವರೆಗೂ ಕೊಲೆಗಾರರಿಗೆ ಶಿಕ್ಷೆಯಾಗಿಲ್ಲ. ರಾಜಕೀಯ ಒತ್ತಡಗಳಿಗೆ ಮಣಿದು ಪ್ರಕರಣಗಳನ್ನು ಕೈಬಿಡಲಾಗುತ್ತಿದೆ. ಆದ್ದರಿಂದ ಸರ್ಕಾರ ಎಸ್.ಸಿ, ಎಸ್ಟಿ ದೌರ್ಜನ್ಯ ಪ್ರತಿಬಂಧಕ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿ, ಆರೋಪಿಗಳಿಗೆ ಮರಣದಂಡನೆ ವಿಧಿಸಬೇಕು ಹಾಗೂ ಹಲ್ಲೆಕೋರರ ಆಸ್ತಿ ಮುಟ್ಟುಗೋಲು ಹಾಕಿಕೊಂಡು ಅನ್ಯಾಯಕ್ಕೆ ಒಳಗಾದವರಿಗೆ ಪರಿಹಾರ ವಿತರಿಸಬೇಕು ಎಂದು ಆಗ್ರಹಿಸಿದರು.
೨೦೦೬ ರಲ್ಲಿ ಅಂದಿನ ಸರ್ಕಾರ ಪರಿಶಿಷ್ಟ ಜಾತಿ ಪಟ್ಟಿಯಲ್ಲಿರುವ ೧೦೧ ಜಾತಿಗಳಿಗೆ ಸಾಮಾಜಿಕ ನ್ಯಾಯ ಕಲ್ಪಿಸುವ ನಿಟ್ಟಿನಲ್ಲಿ ನ್ಯಾ.ಎ.ಜೆ.ಸದಾಶಿವ ಆಯೋಗವನ್ನು ನೇಮಕ ಮಾಡಿದ್ದು, ೨೦೧೧ ರಲ್ಲಿ ಸಮಿತಿ ವರದಿ ನೀಡಿದ್ದು, ೯ ವರ್ಷ ಕಳೆದರೂ ಇದುವರೆಗೂ ಸದನದಲ್ಲಿ ಚರ್ಚಿಸಿ ಕೇಂದ್ರಕ್ಕೆ ಶಿಫಾರಸ್ಸು ಮಾಡಿಲ್ಲ. ಚುನಾವಣೆ ಸಂದರ್ಭದಲ್ಲಿ ಕೇವಲ ಪ್ರಚಾರಕ್ಕಾಗಿ ಒಳಮೀಸಲಾತಿ ವಿಚಾರ ಪ್ರಸ್ತಾಪಿಸಿ ದಲಿತರ ಮತಗಳನ್ನು ಪಡೆಯುವ ಹುನ್ನಾರವನ್ನು ಇದುವರೆಗಿನ ರಾಜಕೀಯ ಪಕ್ಷಗಳು ಮಾಡುತ್ತಿವೆ. ಪ್ರಸ್ತುತ ಸುಪ್ರಿಂ ಕೋರ್ಟ್‌ನ ನಿರ್ದೇಶನವನ್ನು ಪಾಲಿಸುವ ನಿಟ್ಟಿನಲ್ಲಿ ಮುಂಬರುವ ಅಧಿವೇಶನದಲ್ಲಿ ಸದರಿ ವಿಚಾರವನ್ನು ಸದನದಲ್ಲಿ ಮಂಡಿಸಿ, ಕೇಂದ್ರಕ್ಕೆ ಶಿಫಾರಸ್ಸು ಕಳುಹಿಸಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಡಿಎಸ್‌ಎಸ್ ಕಾರ್ಮಿಕ ಘಟಕದ ಜಿಲ್ಲಾಧ್ಯಕ್ಷ ಹೆಚ್.ಬಿ. ರಮೇಶ್, ಗೌರವಾಧ್ಯಕ್ಷ ಸುರೇಶ್, ಗುಬ್ಬಿ ತಾಲ್ಲೂಕು ಅಧ್ಯಕ್ಷ ರಾಜೇಶ್, ಮಧುಗಿರಿ ತಾಲ್ಲೂಕು ಅಧ್ಯಕ್ಷ ಸಂಜೀವರಾಯಪ್ಪ, ವಿದ್ಯಾರ್ಥಿ ಘಟಕದ ಅಧ್ಯಕ್ಷ ಪ್ರಸಾದ್, ಚೇಳೂರು ವೆಂಕಟೇಶ್, ಹೊಸಹಳ್ಳಿ ಕೃಷ್ಣಪ್ಪ, ಅಖಿಲ ಭಾರತ ಅಂಬೇಡ್ಕರ ಪ್ರಚಾರ ಸಮಿತಿ ಜಿ.ಆರ್. ಸುರೇಶ್, ಎನ್.ಕೆ. ನಿಧಿಕುಮಾರ್ ಮತ್ತಿತರರು ಭಾಗವಹಿಸಿದ್ದರು.