ದಲಿತರ ಮೇಲೆ ದೌರ್ಜನ್ಯ- ಅಧಿಕಾರಿಗಳ ಭೇಟಿ

ಸಿರವಾರ.ನ.೨-ತಾಲೂಕಿನ ಮಾಚನೂರು ಮತ್ತು ಶಾಖಪೂರ್ ಗ್ರಾಮದಲ್ಲಿ ದಲಿತ ಕುಟುಂಬಗಳ ಮೇಲೆ ದೌರ್ಜನ್ಯ ಮಾಡಲಾಗಿದೆ ಎಂಬ ಆರೋಪದ ಹಿನ್ನಲ್ಲೆಯಲ್ಲಿ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಸತೀಶ್ ಮತ್ತು ತಾಲೂಕ ಸಮಾಜ ಕಲ್ಯಾಣಾಧಿಕಾರಿ ರವೀಂದ್ರ ಗ್ರಾಮಗಳಿಗೆ ಭೇಟಿ ಕೊಟ್ಟು ಭಯಭೀತರಾಗಿರುವ ಮತ್ತು ದೌರ್ಜನ್ಯಕ್ಕೊಳಗಾದ ಮಾದಿಗ ಸಮುದಾಯದ ಕುಟುಂಬಗಳಿಗೆ ಸೂಕ್ತ ರಕ್ಷಣೆ ನೀಡುವ ಮತ್ತು ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಸೂಕ್ತ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದರು.
ಸುಮಾರು ಅರವತ್ತು ವರ್ಷಗಳಿಂದ ಸಾಗುವಳಿ ಮಾಡುತ್ತಿರುವ ಮಾದಿಗ ಸಮುದಾಯದ ಭೂಮಿಗಳಲ್ಲಿ ಬೆಳೆದಿರುವ ಹತ್ತಿ ಬೆಳೆಯನ್ನು ದನಕರುಗಳನ್ನು ಮೇಯಿಸುವ ಮುಖಾಂತರ ದೌರ್ಜನ್ಯ ಮಾಡುತ್ತಿರುವ ಮತ್ತು ಮಾದಿಗ ಸಮುದಾಯದ ಜನರನ್ನು ಒಕ್ಕಲೆಬ್ಬಿಸುವ ಕಿಡಿಗೇಡಿಗಳ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳುವಂತೆ ಪೊಲೀಸ್ ಇಲಾಖೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಭರವಸೆ ನೀಡಿ ಯಾವುದೇ ಕಾರಣಕ್ಕೂ ಭಯಭೀತರಾಗುವುದು ಬೇಡ ಎಂದು ಧೈರ್ಯ ತುಂಬಿದರು ಮತ್ತು ಗ್ರಾಮದ ಮಾದಿಗ ಸಮುದಾಯದ ಕುಟುಂಬಗಳು ಕಾನೂನು ರಕ್ಷಣೆ ನೀಡುವ ನಿಟ್ಟಿನಲ್ಲಿ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಮಾದಿಗ ಮಹಾಸಭಾದ ಜಿಲ್ಲಾ ಉಪಾಧ್ಯಕ್ಷರಾದ ಅರಳಪ್ಪ ಯದಲ ದಿನ್ನಿ, ಪ್ರಭುರಾಜ್ ಕೊಡ್ಲಿ ಬಸವರಾಜ ನಕ್ಕುಂದಿ ಇನ್ನು ಮುಂತಾದವರು ಉಪಸ್ಥಿತರಿದ್ದರು.