ದಲಿತರ ದೂರುಗಳಿಗೆ ಸ್ಪಂದಿಸಿ: ಡಿಸಿಪಿ

ಮಂಗಳೂರು, ಜು.೨೫- ದಲಿತರ ದೂರುಗಳನ್ನು ತಾಳ್ಮೆಯಿಂದ ಆಲಿಸಬೇಕು ಮತ್ತು ಸಮಸ್ಯೆಗೆ ಸ್ಪಂದಿಸುವ ಮನೋಭಾವ ಬೆಳೆಸಬೇಕು ಎಂದು ಮಂಗಳೂರು ನಗರ ಅಪರಾಧ ಮತ್ತು ಸಂಚಾರ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ನಗರದ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ರವಿವಾರ ನಡೆದ ಪರಿಶಿಷ್ಟ ಜಾತಿ ಮತ್ತು ಪಂಗಡದ ಜನರ ಮಾಸಿಕ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು. ದಲಿತರು ಠಾಣೆಗೆ ತೆರಳಿದಾಗ ಸರಿಯಾದ ಸ್ಪಂದನೆ ಸಿಗುತ್ತಿಲ್ಲ. ದಲಿತ ದೌರ್ಜನ್ಯ ಪ್ರಕರಣಗಳನ್ನು ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಾರೆ’ ಎಂದು ದಲಿತ ಸಂಘಟನೆಯ ಮುಖಂಡ ಚಂದ್ರು ಸಹಿತ ಹಲವು ಮುಖಂಡರು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ‘ಠಾಣೆಗೆ ದೂರು ನೀಡಲು ಬರುವವರನ್ನು ವಿನಾ ಕಾರಣ ಸತಾಯಿಸಬಾರದು. ಅವರನ್ನು ಕುಳ್ಳಿರಿಸಿ, ಅವಲ ಅಹವಾಲು ಕೇಳಿ ದೂರು ಸ್ವೀಕರಿಸಿ ತನಿಖೆ ಕೈಗೊಳ್ಳಬೇಕು. ದೂರು ನೀಡಲು ಬಂದವರಿಗೆ ಸ್ಪಂದಿಸದಿದ್ದರೆ ಅಂತಹ ಠಾಣಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು. ನಗರದ ಕಂಕನಾಡಿ ಮತ್ತಿತರ ಕಡೆಗಳಲ್ಲಿ ರಾತ್ರಿ ಗಸ್ತು ಇಲ್ಲದ ವೇಳೆ ಗಾಂಜಾ ಸೇವನೆ ಮತ್ತಿತರ ಪ್ರಕರಣಗಳು ನಡೆಯುತ್ತಿವೆ. ಇದನ್ನು ಪೊಲೀಸ್ ಇಲಾಖೆ ಗಂಭೀರ ಪರಿಗಣಿಸಬೇಕು ಎಂದು ದಲಿತ ಮುಖಂಡ ಅನಿಲ್ ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಡಿಸಿಪಿ ದಿನೇಶ್ ಕುಮಾರ್ ಗಾಂಜಾ ಸೇವನೆ ಪತ್ತೆಯಾದರೆ ೧೦ ಸಾವಿರ ರೂ. ದಂಡ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ. ನಗರ ಪ್ರದೇಶದಲ್ಲಿ ಗಾಂಜಾ ಸೇರಿದಂತೆ ಯಾವುದೇ ಚಟುವಟಿಕೆ ಕಂಡುಬಂದರೆ ಸಹಾಯವಾಣಿಗೆ (112) ಕರೆ ಮಾಡಬಹುದು. ಮಾಹಿತಿದಾರರ ಹೆಸರನ್ನು ಗೌಪ್ಯವಾಗಿರಿಸಲಾ ಗುವುದು ಎಂದರು. ಕೊಳವೆ ಬಾವಿ ಸಹಿತ ವಿವಿಧ ಯೋಜನೆಗಳ ಮಂಜೂರಾತಿಯ ಅಧಿಕಾರವನ್ನು ಜಿಲ್ಲಾಧಿಕಾರಿಯಿಂದ ಶಾಸಕರಿಗೆ ಸರಕಾರ ನೀಡಿದೆ. ಇದರಿಂದ ಫಲಾನುಭವಿಯ ಆಯ್ಕೆಯಲ್ಲಿ ರಾಜಕೀಯ ನುಸುಳುವ ಸಾಧ್ಯತೆ ಇದೆ. ಸುಳ್ಯದಲ್ಲಿ ಸಚಿವರೊಬ್ಬರ ಆಪ್ತ ಸಹಾಯಕ ತಮ್ಮ ಪಕ್ಷದ ಮತದಾರ ಅಲ್ಲ ಎನ್ನುವ ಕಾರಣಕ್ಕೆ ಅರ್ಹ ಫಲಾನುಭವಿಯನ್ನು ಸವಲತ್ತಿನಿಂದ ವಂಚಿಸಿದ್ದಾರೆ ಎಂಬ ಆರೋಪವಿದೆ. ಹಾಗಾಗಿ ಈ ಹಿಂದಿನಂತೆಯೇ ಜಿಲ್ಲಾಧಿಕಾರಿಗೆ ಫಲಾನುಭವಿಗಳ ಆಯ್ಕೆಯ ಜವಾಬ್ದಾರಿಯನ್ನು ನೀಡಬೇಕು ಎಂದು ಎಸ್‌ಪಿ ಆನಂದ ಆಗ್ರಹಿಸಿದರು. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ದಲಿತರಿಗೆ ಮೀಸಲಿಟ್ಟ ಕಾಮಗಾರಿ ಗುತ್ತಿಗೆಯನ್ನು ಹೊರ ಜಿಲ್ಲೆ, ಹೊರ ರಾಜ್ಯಗಳ ದಲಿತರಲ್ಲದವರು ಪಡೆದುಕೊಂಡು ವಂಚಿಸಿದ್ದಾರೆ. ನಕಲಿ ಜಾತಿ ಪ್ರಮಾಣಪತ್ರ ಪಡೆದ ಓರ್ವ ಗುತ್ತಿಗೆದಾರನನ್ನು ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಲಾಗಿದೆ. ಇಂತಹ ಇನ್ನೂ ಕೆಲವರು ಈ ಅಕ್ರಮದಲ್ಲಿ ಭಾಗಿಯಾಗಿದ್ದು ಅವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ದಲಿತ ಮುಖಂಡ ಎಸ್‌ಪಿ ಆನಂದ ಒತ್ತಾಯಿಸಿದರು. ಮಹಿಳೆಯೊಬ್ಬರು ಪರಿಶಿಷ್ಟ ಪಂಗಡದ ನಕಲಿ ಜಾತಿ ಪ್ರಮಾಣಪತ್ರ ಪಡೆದು ಕೆಐಒಸಿಎಲ್‌ನಲ್ಲಿ ಸುಮಾರು ೨೦ ವರ್ಷ ಉದ್ಯೋಗ ಮಾಡಿದ್ದರು. ಈ ವಿಚಾರ ಬಹಿರಂಗಗೊಂಡ ಬಳಿಕ ಅವರು ಉದ್ಯೋಗಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಈ ಬಗ್ಗೆ ತನಿಖೆ ನಡೆಸಿ ಸೂಕ್ತ ಕ್ರಮ ಜರಗಿಸಬೇಕು ಎಂದು ಸದಾಶಿವ ಉರ್ವಸ್ಟೋರ್ ಒತ್ತಾಯಿಸಿದರು. ಕರ್ತವ್ಯ ನಿರತ ಸಂಚಾರ ಪೊಲೀಸರು ಸದಾ ಮೊಬೈಲ್‌ನಲ್ಲೇ ತಲ್ಲೀನರಾಗಿರುತ್ತಾರೆ. ಅಲ್ಲದೆ ಆಟೋ ರಿಕ್ಷಾ ಚಾಲಕರು, ಬಸ್ ಚಾಲಕರು ಮೊಬೈಲ್ ಬಳಕೆ ಮಾಡಿಕೊಂಡೇ ವಾಹನ ಚಲಾಯಿಸುತ್ತಿದ್ದಾರೆ. ಇದು ಅಪಘಾತಗಳಿಗೆ ಕಾರಣವಾಗುತ್ತಿದೆ ಎಂದು ದಲಿತ ಮುಖಂಡರು ಆರೋಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಡಿಸಿಪಿ ದಿನೇಶ್ ಕುಮಾರ್ ಇಂತಹ ಆರೋಪಗಳ ಪದೇ ಪದೇ ‘ಸಾರ್ವಜನಿಕರಿಂದ ಕೇಳಿಬರುತ್ತಿದೆ. ಕರ್ತವ್ಯ ವೇಳೆ ಅನಾವಶ್ಯಕವಾಗಿ ಮೊಬೈಲ್ ಬಳಸುವ ಸಿಬ್ಬಂದಿಯ ಮೊಬೈಲ್ ವಶಪಡಿಸಿ ಕೊಳ್ಳಬೇಕು’ ಎಂದು ತನ್ನ ಅಧೀನ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ವಾಹನ ಚಾಲಕರು ಮೊಬೈಲ್ ಬಳಕೆ ಸಹಿತ ಸಂಚಾರ ನಿಯಮ ಉಲ್ಲಂಘಿಸುತ್ತಿರುವುದು ಕಂಡುಬಂದರೆ ಸಾರ್ವಜನಿಕರು ಫೊಟೋ ತೆಗೆದು ಪೊಲೀಸರಿಗೆ ಕಳುಹಿಸಿದರೆ ಅವರ ವಿರುದ್ಧ ಕ್ರಮ ಕೈಗೊಳ್ಳಲು ಅನುಕೂಲವಾಗುತ್ತದೆ ಎಂದು ಡಿಸಿಪಿ ದಿನೇಶ್ ಕುಮಾರ್ ಹೇಳಿದರು. ಚೆಂಬುಗುಡ್ಡೆ ಸ್ಮಶಾನದ ಬಳಿ ಕೊರಗ ಸಮುದಾಯಕ್ಕೆ ಮೀಸಲಿಟ್ಟ ಜಾಗವನ್ನು ವ್ಯಕ್ತಿಯೊಬ್ಬರು ಮಾರಾಟ ಮಾಡಿದ್ದಾರೆ. ನಗರದ ಕೋಡಿಕಲ್, ಉರ್ವ ಮತ್ತಿಯರ ಗಾಂಜಾ ಮಾರಾಟ ಪ್ರಕರಣಗಳ ಹೆಚ್ಚಳವಾಗುತ್ತಿದೆ ಇತ್ಯಾದಿ ಆರೋಪಗಳಲ್ಲದೆ ನಗರದ ಜ್ಯೋತಿ ಬಳಿ ಅಂಬೇಡ್ಕರ್ ವೃತ್ತ ಶೀಘ್ರ ನಿರ್ಮಿಸಬೇಕು ಎಂದು ಸಭೆಯಲ್ಲಿ ಒತ್ತಾಯ ಕೇಳಿ ಬಂದವು. ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಅಂಶುಕುಮಾರ್ ಅಧ್ಯಕ್ಷತೆ ವಹಿಸಿದ್ದರು. ಚಂದ್ರ ಕುಮಾರ್, ಅನಿಲ್ ಉರ್ವಸ್ಟೋರ್, ವಿಶ್ವನಾಥ್, ಗಿರೀಶ್, ಅಮಲಾ ಜ್ಯೋತಿ, ಜಗದೀಶ್ ಪಾಂಡೇಶ್ವರ, ಸುನಿಲ್ ಗಂಜಿಮಠ ಅಹವಾಲುಗಳನ್ನು ಮಂಡಿಸಿದರು.