ದಲಿತರ ಕೇರಿಗೆ ನೀರು ಹರಿಸುವಂತೆ ಮಾದಿಗ ದಂಡೋರ ಆಗ್ರಹ

ರಾಯಚೂರು, ಏ.೦೫- ಚಂದ್ರಬಂಡಾ ಗ್ರಾಮದ ದಲಿತರ ಕೇರಿಗೆ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸುವಂತೆ ಮಾದಿಗ ದಂಡೋರ ತಾಲೂಕು ಸಮತಿ ಪದಾಧಿಕಾರಿಗಳು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಧಿಕಾರಿಗಳಿಗೆ ಮನವಿ ಸಲ್ಲಿಸಿ ಆಗ್ರಹಿಸಿದರು. ತಾಲ್ಲೂಕಿನ ಚಂದ್ರಬಂಡಾ ಗ್ರಾಮ ಪಂಚಾಯತಿ ವ್ಯಾಪ್ತಿಗೆ ಬರುವ ಚಂದ್ರಬಂಡಾ ಗ್ರಾಮದ ದಲಿತರು ವಾಸ ಮಾಡುವ
ಕೇರಿಯಲ್ಲಿ ಕನಿಷ್ಠ ೧೫೦ಕ್ಕೂ ಅಧಿಕ ಮನೆಗಳಿದ್ದು, ದಲಿತರ ಕೇರಿಯಲ್ಲಿ ಕೇವಲ ನಾಲ್ಕು ೪ ನಳಗಳನ್ನು ಮಾತ್ರ ಅಳವಡಿಸಿದ್ದು, ಇದರಿಂದ ಕುಡಿಯುವ ನೀರಿನ ಸಮಸ್ಯೆ ದಿನ ದಿನಕ್ಕೆ ಹೆಚ್ಚಾಗಿದ್ದು ಬೇಸಿಗೆ ಆರಂಭದಲ್ಲಿ ಮತ್ತಿಷ್ಟು ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ.ದಲಿತರ ಕೇರಿಯಲ್ಲಿ ಕಲುಷಿತ ನೀರು ಪೂರೈಕೆ ಆಗುತ್ತಿದ್ದು. ಈ ಬಗ್ಗೆ ಪಿಡಿಓ ಗಮನಕ್ಕೆ ತಂದರೂ ಸಮಸ್ಯೆ ಸ್ಪಂದಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ದಲಿತರ ಕೇರಿಯ ೧೫೦ ಮನೆಗಳಿಗೆ ನೀರಿನ ಸಮಸ್ಯೆಯ ಬಗ್ಗೆ ಪರಿಹರಿಸುವಲ್ಲಿ ಪಿಡಿಓ ವಿಫಲರಾಗಿರುತ್ತಾರೆ. ಕುಡಿಯುವ ನೀರಿನಲ್ಲಿ ಜಂತು ಹುಳಗಳು ಪತ್ತೆಯಾಗುತ್ತಿವೆ ಆದರೂ ಪಂಚಾಯತಿ ಅಧ್ಯಕ್ಷರು ಮತ್ತು ಪಿಡಿಓ ನಿರ್ಲಕ್ಷ ತೋರುತ್ತಿದ್ದರೆ ಎಂದು ಆಕ್ರೋಶ ಹೊರಹಾಕಿದರು.ದಲಿತರ ಮನೆ ಮನೆಗೆ ನಳಗಳನ್ನು ಅಳವಡಿಸಿ ಶುದ್ಧ ಕುಡಿಯುವ ನೀರನ್ನು ಒದಗಿಸಲು ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳು ಹಾಗೂ ಅಧ್ಯಕ್ಷರು ಗ್ರಾಮ ಪಂಚಾಯತಿ ಚಂದ್ರಬಂಡಾ ಇವರಿಗೆ ಶೀಘ್ರ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕು ಇಲ್ಲವಾದಲ್ಲಿ ಕಾನೂನು ಹೋರಾಟ ಜೊತೆಗೆ ಬಹಿಷ್ಕಾರ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಗೋವಿಂದ ಈಟೇಕರ್, ಮಹೇಶ, ಅಂಜಿನಯ್ಯ, ಎಂ. ಬಿ ನರಸಿಂಹಲು, ಶ್ರೀಕೃಷ್ಣ, ಮಲ್ಲೇಶ, ನರೇಶ, ರಾಜು, ನರಸಿಂಹಲು ಸೇರಿದಂತೆ ಉಪಸ್ಥಿತರಿದ್ದರು.