ದಲಿತರ ಕುಟುಂಬಕ್ಕೆ ಪರಿಹಾರ ಘೋಷಣೆಗೆ ಡಿ ಹೆಚ್ ಎಸ್ ಸರ್ಕಾರಕ್ಕೆ ಒತ್ತಾಯ

ಕೂಡ್ಲಿಗಿ.ಜೂ. 9 :-ಕೊರೋನಾ ಸಂಕಷ್ಟದ ಸಮಯದಲ್ಲಿ ಕೂಲಿ ಕೆಲಸವಿಲ್ಲದೆ ಊಟಕ್ಕೂ ಪರದಾಡುವಂಥ ದಲಿತರ ಪ್ರತಿ ಕುಟುಂಬಕ್ಕೆ ಸರ್ಕಾರ 10 ಸಾವಿರ ರೂ. ಸೇರಿ ಆಹಾರದ ದಿನಸಿಯ ವಿಶೇಷ ಪ್ಯಾಕೇಜ್ ಘೋಷಿಸುವಂತೆ ಒತ್ತಾಯಿಸಿ ತಾಲೂಕಿನ ಕಾನಹೊಸಹಳ್ಳಿ ನಾಡ ಕಚೇರಿಗೆ ದಲಿತ ಹಕ್ಕುಗಳ ಸಮಿತಿ(ಡಿಎಚ್ ಎಸ್) ಕೂಡ್ಲಿಗಿ ತಾಲೂಕು ಘಟಕದ ಮುಖಂಡರು ಮಂಗಳವಾರ ಮನವಿ ಸಲ್ಲಿಸಿದರು. ದಲಿತ ಹಕ್ಕುಗಳ ಸಮಿತಿ ತಾಲೂಕು ಸಂಚಾಲಕ ಎಚ್.ಡಿ.ಚಂದ್ರಪ್ಪ ಮಾತನಾಡಿ, ಕೊರೋನಾ ಸೋಂಕಿನ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ಡೌನ್ ಘೋಷಿಸಿರುವುದರಿಂದ ದಲಿತರು‌ ಸೇರಿ ಕೂಲಿ ಕಾರ್ಮಿಕರು ಸಂಕಷ್ಟದಲ್ಲಿದ್ದಾರೆ. ದುಡಿದು ತಿನ್ನಲು ಕೆಲಸವೂ ಇಲ್ಲವಾಗಿದೆ. ಇದರಿಂದ ದಲಿತರ ಕುಟುಂಬಗಳು ದಿಕ್ಕುತೋಚದಂತಾಗಿವೆ. ಹೀಗಾಗಿ, ರಾಜ್ಯ ಸರ್ಕಾರ ದಲಿತರಿಗೆ ಪರಿಹಾರದ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ನೆರವಾಗಬೇಕು ಎಂದು ಆಗ್ರಹಿಸಿದರು.
ಮುಖಂಡ ಹೇಮಣ್ಣ ಮಾತನಾಡಿ, ಕೋವಿಡ್ ಸಂಬಂಧ ಸರ್ಕಾರ ಲಾಕ್ಡೌನ್ ಘೋಷಿಸಿರುವುದರಿಂದ ಬಡವರು, ದಲಿತರು ತೀವ್ರ ಸಂಕಷ್ಟದಲ್ಲಿದ್ದಾರೆ. ಸರ್ಕಾರ ನೆರವು ನೀಡುವುದರ ಜೊತೆಗೆ 2021-22ನೇ ಸಾಲಿನ ಎಸ್ಸಿ-ಎಸ್ಟಿ ಉಪಯೋಜನೆಗಳ ರಾಜ್ಯ ಬಜೆಟ್ ಅನುದಾನ 26,005 ಕೋಟಿ ರೂ.ಯನ್ನು ಬಿಡುಗಡೆಗೊಳಿಸಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಮುಂದಾಗಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮತ್ತು ಸಮಾಜ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವರಿಗೆ ಬರೆದ ಮನವಿಯನ್ನು ಕಾನಹೊಸಹಳ್ಳಿ ನಾಡ ಕಚೇರಿ ಉಪ ತಹಸೀಲ್ದಾರ್ ಚಂದ್ರಮೋಹನ್, ಕಂದಾಯ ನಿರೀಕ್ಷಕ ಮುರಳಿಕೃಷ್ಣ ಅವರಿಗೆ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಉಪ ತಹಸೀಲ್ದಾರ್ ಚಂದ್ರಮೋಹನ ಮಾತನಾಡಿ, ತಾವು ಸಲ್ಲಿಸಿರುವ ಮನವಿಯನ್ನು ಮೇಲಧಿಕಾರಿಗಳ ಮೂಲಕ ಸರ್ಕಾರಕ್ಕೆ ಕಳುಹಿಸಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ದಲಿತ ಹಕ್ಕುಗಳ ಸಮಿತಿ ತಾಲೂಕು ಘಟಕದ ಮುಖಂಡರಾದ ಬಸವರಾಜ, ಕಲ್ಲಹಳ್ಳಿ ಶಿವಣ್ಣ, ತಿಪ್ಪೇಸ್ವಾಮಿ, ಸಣ್ಣ ನಾಗರಾಜ್, ಹೊನ್ನಪ್ಪ, ಗ್ರಾಪಂ ಸದಸ್ಯ ಮಣ್ಣವರ್ ಹೊನ್ನೂರುಸ್ವಾಮಿ ಸೇರಿ ಇತರರಿದ್ದರು