
(ಸಂಜೆವಾಣಿ ವಾರ್ತೆ)
ಬಳ್ಳಾರಿ, ಮೇ.03: ದೇಶದಲ್ಲು ದಲಿತರ ಏಳಿಗೆಗಾಗಿ ಶ್ರಮಿಸಿದವರನ್ನು ಬಿಜೆಪಿ ಪಕ್ಷ ಅಪಮಾನ ಮಾಡಿದೆ. ಅದಕ್ಕಾಗಿ ಪ್ರಸಕ್ತ ಚುನಾವಣೆಯಲ್ಲಿ ಆ ಪಕ್ಷಕ್ಕೆ ದಲಿತರು ತಕ್ಕ ಪಾಠ ಕಲಿಸಲಿದ್ದಾರೆಂದು ಕೆಪಿಸಿಸಿ ಪ್ರಚಾರ ಸಮಿತಿ ರಾಜ್ಯ ಉಪಾಧ್ಯಕ್ಷ ಬಿ.ಗೋಪಾಲ್ ಹೇಳಿದ್ದಾರೆ.
ಅವರು ಇಂದು ನಗರದಲ್ಲಿ ಸುದ್ದಿಗೋಷ್ಟಿ ನಡೆಸಿ. ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆಯ ಇತಿಹಾಸವನ್ನೇ ಬಿಜೆಪಿ ತಿರುಚಲು ಮುಂದಾಗಿದೆ, ದಲಿತರ ಅಭಿವೃದ್ಧಿಗಾಗಿ ಶ್ರಮಿಸಿದ ಅನೇಕ ಗಣ್ಯರ ಕುರಿತು ಪಠ್ಯದಲ್ಲಿ ಬದಲಾವಣೆ ಮಾಡಿ, ಜನರಲ್ಲಿ ಗೊಂದಲ ವನ್ನುಂಟು ಮಾಡಿದ್ದಾರೆ. ನ್ಯಾ.ಎ.ಜೆ.ಸದಾಶಿವ ಆಯೋಗ ವರದಿಯನ್ನು ಸಿದ್ದರಾಮಯ್ಯ ಅವರು ಅನುಷ್ಟಾನಕ್ಕೆ ತರಲಿಲ್ಲ ಎನ್ನುವ ಕೋಪದಿಂದ ಈ ಹಿಂದೆ ದಲಿತರು ಬಿಜೆಪಿ ಬೆಂಬಲಿಸಿದರು. 4 ವರ್ಷ ಕಳೆದರೂ ವರದಿ ಅನುಷ್ಟಾನಕ್ಕೆ ತರಲಿಲ್ಲ, ನಿರಂತರ 111 ದಿನಗಳ ಕಾಲ ಸರದಿ ಸತ್ಯಾಗ್ರಹ ನಡೆಸಿದ ಬಳಿಕ ಚುನಾವಣೆ ಸಂದರ್ಭದಲ್ಲಿ ವರದಿ ಅನುಷ್ಟಾನಗೊಳಿಸಲು ಮುಂದಾದರು. ಬಿಜೆಪಿ ಈಗಾಗಲೇ ವರದಿ ಅನುಷ್ಠಾನ ಮಾಡಿದ್ದೇವೆ ಎಂದು ದಲಿತ ಸಮುದಾಯದವರಲ್ಲಿ ಗೊಂದಲ ಮೂಡಿಸುತ್ತಿದ್ದಾರೆ. ಮೀಸಲಾತಿ ಹೆಚ್ಚಳ ಮಾಡಿರುವುದು ಸಂತಸ. ಆದರೆ, ಅದಕ್ಕ ತನ್ಬದೇ ಆದ ಮಾನದಂಡಗಳಿವೆ, ಸಂಸತ್ ನಲ್ಲಿ ಬಿಲ್ ಮಂಡನೆಯಾಗಬೇಕು, ಸೆಡೂಲ್ 9ಗೆ ಹೋಗಬೇಕು, ಇದ್ಯಾವುದೂ ನಡೆಯದೇ ಮಿಸಲಾತಿ ಹೆಚ್ಚಳ, ವರದಿ ಅನುಷ್ಠಾನ ಮಾಡಿದ್ದೇವೆ ಎನ್ನುವುದು ಶುದ್ದ ಸುಳ್ಳು ಎಂದರು.
ರಾಜ್ಯದ ಎಲ್ಲ ಕಡೆಗಳಲ್ಲೂ ಕಾಂಗ್ರೆಸ್ ಗೆ ಉತ್ತಮ ಬೆಂಬಲ ವ್ಯಕ್ತವಾಗಿದೆ. ಬಿಜೆಪಿ ದುರಾಡಳಿತಕ್ಕೆ ಬೇಸತ್ತು ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರು ಸೇರಿ ಕಾಂಗ್ರೆಸ್ ಗೆ ಬೆಂಬಲ ಸೂಚಿಸಿದ್ದು, ಮತ್ತಷ್ಟು ಶಕ್ತಿ ಬಂದಂತಾಗಿದೆ. ನಾವೂ ಎಲ್ಲರೂ ಚರ್ಚಿಸಿ ನಿರ್ಧಾರ ಕೈಗೊಂಡು ಕಾಂಗ್ರೆಸ್ ಬೆಂಬಲ ಸೂಚಿಸಿದ್ದೇವೆ ಎಂದರು.
ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದ ಬಳಿಕ ಎಸ್ಸಿ, ಎಸ್ಟಿ ವರ್ಗದವರ ಪರ ಒಂದೇ ಒಂದು ಯೋಜನೆಗಳು ಘೋಷಣೆಯಾಗಿಲ್ಲ, ಅವರ ಆಡಳಿತ ಅವಧಿಯಲ್ಲಿ ದೌರ್ಜನ್ಯ, ದಬ್ಬಾಳಿಕೆ ಮುಂದುವರೆದಿದ್ದು, ಕಡಿವಾಣ ಹಾಕಲು ಮುಂದಾಗಿಲ್ಲ. ಎಸ್ಸಿ, ಎಸ್ಟಿ ವರ್ಗದವರಿಗೆ ಮಂಜೂರಾದ ಅನುದಾನವನ್ನು ಪೂರ್ಣ ಪ್ರಮಾಣಲ್ಲಿ ಬಳಕೆ ಮಾಡಿಲ್ಲ ಸುಮಾರು 8080ಕೋಟಿ ರೂ. ಅನುದಾನ ಹಾಗೇ ಉಳಿದಿದೆ, ದಲಿತರನ್ನು ಸಂಪೂರ್ಣ ನಿರ್ಲಕ್ಷ್ಯ ವಹಿಸಿದೆ. ಎಸ್ಸಿ, ಎಸ್ಟಿ ವರ್ಗದವರ ಹಾಸ್ಟೆಲ್ ಗಳಲ್ಲಿ ಮಕ್ಕಳಿಗೆ ಕನಿಷ್ಟ ಸೌಲಭ್ಯಗಳಿಲ್ಲ, ಮಕ್ಕಳ ಕಾಟ್ ಗಳು ತುಕ್ಕು ಹಿಡಿದಿವೆ, ಸುಣ್ಣ ಬಣ್ಣ ಬಳಿದಿಲ್ಲ, ಅನುದಾನವನ್ನು ಸರ್ಕಾರ ಹಾಗೆ ಉಳಿಸಿಕೊಂಡಿದೆ ಎಂದು ಆರೋಪಿಸಿದರು.
ಕೆಪಿಸಿಸಿ ಪ್ರಚಾರ ಸಮಿತಿ ಸಹ ಅಧ್ಯಕ್ಷ ಸುದಾಮ್ ದಾಸ್, ನಾವೆಲ್ಲರೂ ಕಾಂಗ್ರೆಸ್ ನಲ್ಲಿ ಇದ್ದವರಲ್ಲ, ಜನವಿರೋದಿ ಸರ್ಕಾರವನ್ನು ಕಿತ್ತೆಸೆಯಲು ಈ ತೀರ್ಮಾನಕ್ಕೆ ಬಂದಿದ್ದೆವೆ, ಬಿಜೆಪಿ ಸರ್ಕಾರದ ಅವಧಿಯಲ್ಲಿ ಎಸ್ಸಿ, ಎಸ್ಟಿ ಜೀವನ ಕ್ರಮ ಸರಿಯಾಗಿಲ್ಲ, ಕಸಗುಡಿಸುವವರು ಎರಡು ಲಕ್ಷಕ್ಕೂ ಹೆಚ್ಚು ಜನರಿದ್ದು, ಇವರಿಗಾಗಿಯೇ ವಿಶೇಷ ಪ್ಯಾಕೇಜ್ ನೀಡಬೇಕು, ಅವರ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕಲ್ಪಿಸಬೇಕು, ಅವರಿಗೆ ಸುಸಜ್ಜಿತ ಮನೆಗಳನ್ನು ನಿರ್ಮಿಸಬೇಕು ಎಂದು ಬೇಡಿಕೆಗಳನ್ನು ಮುಂದಿಟ್ಟು ಕೊಂಡು ನಾವೆಲ್ಲರೂ ಸೇರಿ ಕಾಂಗ್ರೆಸ್ ಬೆಂಬಲಿಸಿದ್ದೇವೆ, ದಲಿತರು ಸೇರಿ ಎಲ್ಲ ವರ್ಗದವರು ಅಭಿವೃದ್ಧಿ ನಿರೀಕ್ಷಿಸಿ ಕಾಂಗ್ರೆಸ್ ಬೆಂಬಲಿಸಿ ಆರ್ಶಿವಾದಿಸಬೇಕು ಎಂದು ಮನವಿ ಮಾಡಿದರು.
ಜಿ.ಪಂ.ಮಾಜಿ ಸದಸ್ಯ ಎ.ಮಾನಯ್ಯ, ಮರೀಸ್, ನಾಗಣ್ಣನವರ್, ಎಲ್.ಮಾರೆಣ್ಣ, ಡಿ.ಸೂರಿ, ನರಸರಪ್ಪ, ಎಚ್.ಸಿದ್ದೇಶ್, ಗೋವರ್ಧನ, ವೀರಭದ್ರಪ್ಪ, ಗುರುದೇವ, ಫೊಟೋ ರಾಜ್, ವೆಂಕಟೇಶ ಮತ್ತಿತರರು ಇದ್ದರು.