ದಲಿತರ ಉದ್ಧಾರ ಬಿಜೆಪಿಯಿಂದ ಮಾತ್ರ ಸಾಧ್ಯಃ ರಮೇಶ ಜಿಗಜಿಣಗಿ

ವಿಜಯಪುರ, ಡಿ.7-ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ದೇಶದ ಮೇಧಾವಿ ವ್ಯಕ್ತಿ ಅಷ್ಟೇ ಅಲ್ಲ, ಅವರೋಬ್ಬ ಅಸಾಮಾನ್ಯ ಪಂಡಿತ, ಸಮಾನತೆಯ ಹರಿಕಾರ, ಅಂತಹ ವ್ಯಕ್ತಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಕಾಂಗ್ರೆಸ್ ಅವರನ್ನು ಉದ್ದೇಶ ಪೂರ್ವಕವಾಗಿ ಮೋಸದಿಂದ ಸೋಲಿಸಿ ಇದು ಕೇವಲ ಅಂಬೇಡ್ಕರ್ ಅವರಿಗೆ ಮಾಡಿದ ಮೋಸವಲ್ಲ ದೇಶದ ಸಮಸ್ತ ದಲಿತರಿಗೆ ಮಾಡಿದ ಮೋಸ ಎಂದು ಸಂಸದ ರಮೇಶ ಜಿಗಜಿಣಗಿ ಹೇಳಿದರು.
ನಗರದ ವಿಜಯಪುರ ನಗರದ ಭಾರತೀಯ ಜನತಾ ಪಾರ್ಟಿ ಕಛೇರಿಯಲ್ಲಿ ಬಿಜೆಪಿ ಜಿಲ್ಲಾ ಎಸ್ಸಿ ಮೋರ್ಚಾವತಿಯಿಂದ ಆಯೋಜಿಸಿದ ಅಂಬೇಡ್ಕ್‍ರ ಅವರ ಪರಿನಿರ್ವಾಣ ದಿನವನ್ನು ಅಂಬೇಡ್ಕರ ಅವರ ಭಾವ ಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿ ಅವರು ಮಾತನಾಡಿದರು.
ಇದೇ ಸಂದರ್ಭದಲ್ಲಿ ಮಾತನಾಡುತ್ತಾ ಅವರು, ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ನಿಧನ ಹೊಂದಿದಾಗ ಅಂದು ಅಧಿಕಾರದಲ್ಲಿದ್ದ ಕಾಂಗ್ರೆಸ್ ಅವರ ಸಮಾಧಿ ನಿರ್ಮಿಸಲು ಜಾಗ ನೀಡಲಿಲ್ಲ. ಇಷ್ಟು ದಿನಗಳ ವರೆಗೆ ದಲಿತರನ್ನು ಕೆವಲ ಓಟ್‍ಬ್ಯಾಂಕಗಾಗಿ ಬಳಸಿಕೊಂಡಿತು. ಇಂದು ಬಿಜೆಪಿ ಸರ್ಕಾರ ಅಂಬೇಡ್ಕರ್ ಬೆಳೆದ ಮನೆ, ಗ್ರಂಥಾಲಯ ಸೇರಿದಂತೆ ಅವರು ಹೆಚ್ಚು ಬಳಸಿಕೊಂಡಂತಹ ಪಂಚ ಸ್ಥಳಗಳನ್ನು ಅಭಿವೃದ್ಧಿಪಡಿಸಿದೆ. ಪಕ್ಷದಲ್ಲಿ ದಲಿತರಿಗೆ ಉನ್ನತ ಹುದ್ದೆಗಳನ್ನು ನೀಡಿದೆ ಹಾಗಾಗಿ ಬಿಜೆಪಿಯಿಂದ ಮಾತ್ರ ಸಮಾನತೆ ಸಾಧ್ಯ ಎಂದರು.
ಇಷ್ಟು ದಿನ ದಲಿತರಿಗೆ ಮೋಸ ಮಾಡುತ್ತಲೇ ಬಂದಿದ್ದ ಕಾಂಗ್ರೆಸ್ ಇಂದು ಮೂಲೆಗುಂಪಾಗಿದೆ. ದಲಿತರಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಒದಗಿಸಲು ಬಿಜೆಪಿ ಕಂಕಣ ಬದ್ಧವಾಗಿದೆ . ನಮ್ಮ ಸಮುದಾಯ ಇನ್ನು ಜಾಗೃತವಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಎಸ್ಸಿ ಮೋರ್ಚಾ ಜಿಲ್ಲಾಧ್ಯಕ್ಷ ಗೋಪಾಲ ಘಟಕಾಂಬಳೆ ಮಾತನಾಡಿ, ಡಾ. ಬಾಬಾ ಸಹೇಬ್ ದಲಿತರು, ಹಿಂದುಳಿದವರ ಉದ್ಧಾರಕ್ಕಾಗಿಯೇ ತಮ್ಮ ಪ್ರಾಣ ತ್ಯಾಗಮಾಡಿದ್ದಾರೆ. ಕಾಂಗ್ರೆಸ್ ದಲಿತರನ್ನು ಬೇರ್ಪಡಿಸಿ ದೇಶ ಒಡೆಯುವ ಹುನ್ನಾರ ಮಾಡಿತ್ತು. ಆದರೆ ಡಾ. ಬಾಬಾ ಸಾಹೇಬ್ ಅಂಬೇಡ್ಕರ ಸಮಾನತೆ ಸಾರಿ ದೇಶವನ್ನು ಒಂದು ಮಾಡಿದರು. ಬಾಬಾ ಸಾಹೇಬ್ ಕೇವಲ ದಲಿತ ನಾಯಕ ಅಲ್ಲ ಸಮಸ್ತ ದೇಶದ ನಾಯಕರಾಗಿದ್ದಾರೆ. ಕಾಂಗ್ರೆಸ್ ಮಾಡಿದ ಅನ್ಯಾಯವನ್ನು ನಾವು ಜನತೆ ಮುಂದೆ ಹೇಳಬೇಕು ಎಂದರು.
ಬಿಜೆಪಿ ಮುಖಂಡರಾದ ಚಿದಾನಂದ ಚಲವಾದಿ ಮಾತನಾಡಿ, ದೇಶಕ್ಕೆ ಡಾ. ಬಿ.ಆರ್. ಅಂಬೇಡ್ಕರ್ ಅವರ ಕೊಡುಗೆ ಅಪಾರವಾಗಿದ್ದು, ಸಂವಿಧಾನದ ಮೂಲಕ ಎಲ್ಲಾ ಜಾತಿಯವರಿಗೆ ಡಾ. ಅಂಬೇಡ್ಕರ್ ಅವರು ಸಾಮಾಜಿಕ ನ್ಯಾಯ ದೊರಕಿಸಿಕೊಟ್ಟಿದ್ದಾರೆ. ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ತತ್ವ ಮತ್ತು ಆದರ್ಶಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ ಕೂಚಬಾಳ, ಪ್ರಕಾಶ ಅಕ್ಕಲಕೋಟ, ಚಂದ್ರಶೇಖರ ಕವಟಗಿ, ಭೀಮಾಶಂಕರ ಹದನೂರ, ಮಳುಗೌಡ ಪಾಟೀಲ್, ಶ್ರೀನಿವಾಸ ಕಂದಗಲ್, ಗೀತಾ ಕುಗನೂರ, ವಿಠ್ಠಲ ನಡುವಿನಕೇರಿ, ವಿಜಯ ಜೋಶಿ, ಪಾಫುಸಿಂಗ ರಜಪೂತ, ಕಾಂತು ಸಿಂದೆ, ಮಲ್ಲು ಕಲಾದಗಿ, ವಿನಾಯಕ ದಹಿಂಡೆ, ಸದಾಶಿವ ಚಲವಾದಿ, ಶರಣ ಬಸು ಕುಂಬಾರ, ಉದಯ ಕನ್ನೋಳ್ಳಿ, ಭಾರತಿ ಭುಂಯ್ಯಾರ, ಸಂಗಮೇಶ ಉಕ್ಕಲಿ, ಸಂತೋಷ ನಿಂಬರಗಿ, ಸಂದೀಪ ಪಾಟೀಲ ಸೇರಿದಂತೆ ಮುಂತಾದವರು ಉಪಸ್ಥಿತರಿದ್ದರು.