ದಲಿತರ ಅನುದಾನ ಕಿತ್ತುಕೊಳ್ಳುತ್ತಿರುವ ಕಾಂಗ್ರೆಸ್

ಸಂಜೆವಾಣಿ ವಾರ್ತೆ
ಮಳವಳ್ಳಿ: ಏ.10:- ದಲಿತ ಸಮುದಾಯ ಅಭಿವೃದ್ಧಿಗೆ ಎಚ್.ಡಿ.ದೇವೇಗೌಡ, ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಅನೇಕ ಕೊಡುಗೆಗಳನ್ನು ಅರಿತು ಲೋಕಸಭೆ ಚುನಾವಣೆ
ಯಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರಿಗೆ ದಲಿತ ಸಮುದಾಯ ಮತ ನೀಡಬೇಕು’ ಜೆಡಿಎಸ್ ಪರಿಶಿಷ್ಟ ಜಾತಿ ವಿಭಾಗದ ರಾಜ್ಯ ಘಟಕದ ಅಧ್ಯಕ್ಷ ಕೆ.ಅನ್ನದಾನಿ ಕರೆ ನೀಡಿದರು.
ಪಟ್ಟಣದ ಕನಕಪುರ ರಸ್ತೆಯ ಒಕ್ಕಲಿಗರ ಸಮುದಾಯ ಭವನದಲ್ಲಿ ಸೋಮವಾರ ನಡೆದ ಎಸ್ಸಿ- ಎಸ್ಟಿ ಕಾರ್ಯಕರ್ತರ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಿಜೆಪಿ ಮತ್ತು ಜೆಡಿಎಸ್‍ನ ವಿರೋಧ ಮಾಡುವುದಕ್ಕೆ ಕಾಂಗ್ರೆಸ್ಗೆ ಏನೂ ಇಲ್ಲ. ಯಾರೂ ಸಂವಿಧಾನ ಬದಲಾವಣೆ ಬಗ್ಗೆ ಹೇಳಿರುವ ಮಾತನ್ನೇ ಜನರಲ್ಲಿ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿದೆ. ಕಳೆದ 10 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ದಲಿತರಿಗೆ ಒಂದೇ ಒಂದು ವಿಶೇಷ ಯೋಜನೆ ನೀಡಿಲ್ಲ, ದಲಿತರ ಅಭಿವೃದ್ಧಿಗೆ ಇಟ್ಟಿರುವ 11 ಸಾವಿರ ಕೋಟಿ ಅನುದಾನವನ್ನು ಬೇರೆಕಡೆಗೆ ವರ್ಗಾವಣೆ ಮಾಡಿಕೊಂಡು ದಲಿತರಿಗೆ ಕಾಂಗ್ರೆಸ್ ಅನ್ಯಾಯ ಮಾಡುತ್ತಿದೆ ಎನ್ನುವುದನ್ನು ದಲಿತ ಸಮುದಾಯ ಅರ್ಥ ಮಾಡಿಕೊಳ್ಳಬೇಕಿದೆ’ ಎಂದರು.
ಡಾ.ಬಿ.ಆರ್.ಅಂಬೇಡ್ಕರ್ ಅವರಿಗೆ ಮೋಸ ಮಾಡಿದ್ದ ಕಾಂಗ್ರೆಸ್ಸಿಗರಿಗೆ ದಲಿತರ ಮತ ಕೇಳುವ ಹಕ್ಕಿಲ್ಲ. 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ 94 ಬಾರಿ ಸಂವಿಧಾನದ ತಿದ್ದುಪಡಿ ಮಾಡಿದೆ. ದಲಿತರ ಬಗ್ಗೆ ಅಪಾರ ಪ್ರೀತಿ ಇರುವಂತೆ ನಾಟಕವಾಡುವ ಶಾಸಕ ಮಲ್ಲಿಕಾರ್ಜುನ್ ಖರ್ಗೆ ಹಾಗೂ ಪರಮೇಶ್ವರ್ ಅವರಿಗೆ ಮುಖ್ಯಮಂತ್ರಿ ಸ್ಥಾನ ತಪ್ಪಿದಾಗ ಧ್ವನಿ ಎತ್ತಲಿಲ್ಲ ಎಂದು ಶಾಸಕರ ಹೆಸರು ಹೇಳದೆಯೇ ವಾಗ್ದಾಳಿ ನಡೆಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯ ಡಿ.ಎಸ್.ವೀರಯ್ಯ ಮಾತನಾಡಿ, ದಲಿತರ ಅಭಿವೃದ್ಧಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಅನೇಕ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿ ಎಚ್.ಡಿ.ಕುಮಾರಸ್ವಾಮಿ ಅವರು ಗೆದ್ದು ಕೇಂದ್ರದಲ್ಲಿ ಸಚಿವ ಸ್ಥಾನ ಅಲಂಕರಿಸಲಿದ್ದಾರೆ. ಜಿಲ್ಲೆಯ ಎಲ್ಲ ಸಮುದಾಯಗಳ ಜನರು ಮೈತ್ರಿಯ ಪರವಾಗಿದ್ದು, ಸರಳ ವ್ಯಕ್ತಿತ್ವದ ಉತ್ತಮ ಆಡಳಿತಗಾರ ಕುಮಾರಸ್ವಾಮಿ ಅವರನ್ನು ಎಲ್ಲರೂ ಬೆಂಬಲಿಸಬೇಕು ಎಂದು ಮನವಿ ಮಾಡಿದರು.
ಜೆಡಿಎಸ್ ಯುವ ಘಟಕದ ಅಧ್ಯಕ್ಷ ಬಿ.ರವಿ ಕಂಸಾಗರ ಮಾತನಾಡಿ, ‘ಕಾಂಗ್ರೆಸ್ ಪಕ್ಷವು ದಲಿತರನ್ನು ಬರೀ ಮತವಾಗಿ ಮಾತ್ರ ಪರಿಗಣಿಸುತ್ತಿದ್ದಾರೆ ಎಂದು ಹೇಳಿದರು.
ಬಿಜೆಪಿ ತಾಲ್ಲೂಕು ಘಟಕದ ಅಧ್ಯಕ್ಷ ಎಂ.ಎನ್.ಕೃಷ್ಣ, ಜೆಡಿಎಸ್ ಎಸ್ಸಿ ವಿಭಾಗದ ಜಿಲ್ಲಾ ಘಟಕದ ಅಧ್ಯಕ್ಷ ಸಾತನೂರು ಜಯರಾಮು, ಕಾಂತರಾಜು, ಚಿಕ್ಕಣ್ಣ, ದೇವರಾಜು, ಸಿ.ಕೆ.ಪಾಪಯ್ಯ, ಸುಹಾಷ್ ಮಹದೇವಯ್ಯ, ದೋರನಹಳ್ಳಿ ಕುಮಾರಸ್ವಾಮಿ, ಚಿಕ್ಕಣ್ಣ, ಸಿದ್ದರಾಜು, ಟಿ.ನಂದಕುಮಾರ್ ಇದ್ದರು.