ದಲಿತರು- ಪ್ರಬಲ ಕೋಮಿನ ವೈಷಮ್ಯ ದೇವಾಲಯಕ್ಕೆ ಬೀಗ

ವಿಲ್ಲುಪುರಂ,ಜೂ.೭-೨೧ನೇ ಶತಮಾನದಲ್ಲೂ ಅಸ್ಪೃಶ್ಯತೆಗೆ ಇಂಬು ನೀಡುವಂತೆ ಗ್ರಾಮೀಣ ಭಾಗದಲ್ಲಿ ದಲಿತರಿಗೆ ಇಂದಿಗೂ ದೇವಸ್ಥಾನಗಳಲ್ಲಿ ಪ್ರವೇಶ ನಿರಾಕರಿಸುತ್ತಿರುವುದು ದೇಶದ ಹಲವು ಭಾಗಗಳಲ್ಲಿ ನಡೆಯುತ್ತಲೇ ಇದೆ.ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ದ್ರೌಪದಿ ಅಮ್ಮನ್ ದೇವಾಲಯದಲ್ಲಿ ಪ್ರಬಲ ಜಾತಿ ಮತ್ತು ದಲಿತರ ನಡುವೆ ಭಿನ್ನಾಭಿಪ್ರಾಯಗಳು ಕಾಣಿಸಿಕೊಂಡಿದ್ದು, ಈ ವರ್ಷದ ಏಪ್ರಿಲ್ ನಲ್ಲಿ ದಲಿತರಿಗೆ ದೇವಾಲಯಕ್ಕೆ ಪ್ರವೇಶ ನಿರಾಕರಿಸಲಾಗಿತ್ತು.ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಮೇಲ್ಪಾಡಿ ಬಳಿಯಿರುವ ದ್ರೌಪದಿ ಅಮ್ಮನವರ ದೇವಸ್ಥಾನದಲ್ಲಿ ಪ್ರಬಲ ಜಾತಿ ಮತ್ತು ದಲಿತರ ನಡುವಿನ ವೈಷಮ್ಯ ಮುಂದುವರಿದಿದ್ದರೂ, ಕಾನೂನು ಸುವ್ಯವಸ್ಥೆ ಸಮಸ್ಯೆಗೆ ಹೆದರಿದ ಜಿಲ್ಲಾ ಅಧಿಕಾರಿಗಳು ಇಂದು ದೇವಸ್ಥಾನಕ್ಕೆ ಬೀಗ ಜಡಿದಿದ್ದಾರೆ.ಈ ವರ್ಷದ ಏಪ್ರಿಲ್ ನಲ್ಲಿ ದಲಿತರಿಗೆ ದೇವಾಲಯಕ್ಕೆ ಪ್ರವೇಶ ನಿರಾಕರಣೆ ಮಾಡಿದ ನಂತರ ವಿವಾದ ಭುಗಿಲೆದ್ದಿತ್ತು.ಈ ಬಿಕ್ಕಟ್ಟನ್ನು ನಿವಾರಿಸಲು ಜಿಲ್ಲಾಡಳಿತ ಹಲವು ಸುತ್ತಿನ ಮಾತುಕತೆ ನಡೆಸಿದರೂ ಸೌಹಾರ್ದಯುತ ಪರಿಹಾರ ಕಂಡುಕೊಳ್ಳಲು ಸಾಧ್ಯವಾಗಿಲ್ಲ. ಹಿಂದೂ ಧಾರ್ಮಿಕ ದತ್ತಿ ಇಲಾಖೆಯ ಆಶ್ರಯದಲ್ಲಿ ಈ ದೇವಸ್ಥಾನ ನಡೆಯುತ್ತಿದೆ.ದ್ರೌಪದಿ, ಪಾಂಚಾಲದ ರಾಜ ದ್ರುಪದನ ಮಗಳು ಮತ್ತು ಮಹಾಭಾರತದ ಮಹಾಕಾವ್ಯದಲ್ಲಿ ಪ್ರಮುಖ ಸ್ತ್ರೀ ಪಾತ್ರವಾಗಿದೆ, ಅಲ್ಲಿ ಅವಳು ಪಂಚ ಪಾಂಡವರ ಪತ್ನಿ. ಜನರು ದ್ರೌಪದಿಯನ್ನು ದೇವತೆಯಾಗಿ, ಗ್ರಾಮ ದೇವತೆಯಾಗಿ ಮತ್ತು ಕುಲದೇವತೆಯಾಗಿ ಪೂಜಿಸುತ್ತಾರೆ. ತಮಿಳುನಾಡಿನಾದ್ಯಂತ ಇರುವ ಹಳ್ಳಿಗರ ಸಾಂಸ್ಕೃತಿಕ ಜೀವನದಲ್ಲಿ ದ್ರೌಪದಿ ಪ್ರಮುಖ ಸ್ಥಾನವನ್ನು ಪಡೆದಿದ್ದಾಳೆ. ದ್ರೌಪದಿ ಅಮ್ಮನ್ ಆರಾಧನೆಗಾಗಿ ಪ್ರಬಲ ಮತ್ತು ದಲಿತ ಸಮುದಾಯದಗಳ ಮಧ್ಯೆ ಘರ್ಷಣೆಗಳು ನಡೆದು ವಿಕೋಪಕ್ಕೆ ಹೋದ ಘಟನೆಗಳು ಸಾಕಷ್ಟು ಸಂಭವಿಸಿವೆ.