ದಲಿತರಿಗೆ ಸಿಎಂ ಪದವಿ ನೀಡಲು ಆಗ್ರಹ

ಕೋಲಾರ,ಮೇ,೧೭-ಕಾಂಗ್ರೆಸ್ ಪಕ್ಷವು ಇಲ್ಲಿಯವರಿಗೂ ದಲಿತ ಸಮುದಾಯಕ್ಕೆ ಮುಖ್ಯಮಂತ್ರಿಯ ಅವಕಾಶ ನೀಡಿಲ್ಲ ಪ್ರಸ್ತುತ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತದಿಂದ ಅಧಿಕಾರಕ್ಕೆ ಬಂದಿದ್ದು ದಲಿತ ಮುಖಂಡ ಹಾಗೂ ಕಾಂಗ್ರೆಸ್ ಪಕ್ಷದ ಕಟ್ಟಿ ಬೆಳೆಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆರನ್ನು ಮುಖ್ಯಮಂತ್ರಿ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ವರಿಷ್ಠರನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಅಧ್ಯಕ್ಷ ಡಾ.ಆರ್.ಅಶ್ವಥನಾರಾಯಣ ಅಂತ್ಯಜ ಒತ್ತಾಯಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದಲಿತರಿಗೆ ಸಿಎಂ ಪದವಿ ನೀಡದೆ ಹೋದರೆ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಶ್ರಮಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ರನ್ನು ಮುಖ್ಯಮಂತ್ರಿ ಮಾಡಬೇಕು ೨೦೦೬ ರಲ್ಲಿ ಜನತಾದಳದಿಂದ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದ ಸಿದ್ದರಾಮಯ್ಯ ಎರಡು ಬಾರಿ ವಿರೋಧ ಪಕ್ಷದ ನಾಯಕರಾಗಿ ೨೦೧೩ ರಲ್ಲಿ ಐದು ವರ್ಷಗಳ ಕಾಲ ಪೂರ್ಣ ಪ್ರಮಾಣದ ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ್ದಾರೆ.
ರಾಜ್ಯದಲ್ಲಿ ದಲಿತ ಮುಖ್ಯಮಂತ್ರಿ ಮಾಡುವಂತೆ ಹೋರಾಟ ನಡೆಸಿದ ಸಂದರ್ಭದಲ್ಲಿ ಮುಂದಿನ ಅವಧಿಗೆ ದಲಿತರಿಗೆ ಅವಕಾಶ ಮಾಡಿಕೊಡುವ ಆಶ್ವಾಸನೆ ನೀಡಿದ್ದು ಈ ಬಾರಿ ಡಾ.ಪರಮೇಶ್ವರ್, ಕೆ.ಹೆಚ್.ಮುನಿಯಪ್ಪ, ಹೆಚ್.ಸಿ.ಮಹಾದೇವಪ್ಪ, ಸತೀಶ್ ಜಾರಕಿಹೊಳಿ ಮುಂತಾದವರಿಗೆ ಮುಖ್ಯಮಂತ್ರಿ ಆಗುವ ಅವಕಾಶಗಳಿದ್ದರೂ ಸಿದ್ದರಾಮಯ್ಯ ತಪ್ಪಿಸಿದ್ದರು ಈಗಲೂ ತಾವೇ ಮುಖ್ಯಮಂತ್ರಿ ಆಗಬೇಕೆಂದು ಹಠ ಹಿಡಿದಿರುವುದು ಸರಿಯಲ್ಲ ಸಿದ್ದರಾಮಯ್ಯರಿಗೆ ಅಹಿಂದ ಎಂದರೆ ಕೇವಲ ಹಿಂದುಳಿದ ವರ್ಗಗಳಿಗೆ ಮಾತ್ರ ಅವಕಾಶ ನೀಡುವುದಲ್ಲದೆ
ಅಲ್ಪಸಂಖ್ಯಾತರಿಗೆ ಹಾಗೂ ದಲಿತರಿಗೂ ನ್ಯಾಯ ಒದಗಿಸುವ ಮನಸ್ಸು ಮಾಡಬೇಕೆಂದು ಆಗ್ರಹಿಸಿದರು.ಸಮ್ಮಿಶ್ರ ಸರ್ಕಾರದಲ್ಲಿ ಜೆಡಿಎಸ್ ಪಕ್ಷದ ಹೆಚ್.ಡಿ.ಕುಮಾರಸ್ವಾಮಿ ಡಾ.ಜಿ.ಪರಮೇಶ್ವರ್‌ರನ್ನು ಉಪ ಮುಖ್ಯಮಂತ್ರಿ ಮಾಡಿದ್ದರು, ಬಿ.ಎಸ್.ಯಡಿಯೂರಪ್ಪ ಗೋವಿಂದ ಕಾರಜೋಳರನ್ನು ಉಪ ಮುಖ್ಯಮಂತ್ರಿ ಮಾಡಿ ತಾವುಗಳು ದಲಿತ ಸಮುದಾಯದ ಪರ ಎಂದು ಸಾಬೀತು ಪಡಿಸಿದ್ದರು ಕನಿಷ್ಠ ಈ ಬಾರಿ ಕೆ.ಹೆಚ್.ಮುನಿಯಪ್ಪರನ್ನು ಉಪ ಮುಖ್ಯಮಂತ್ರಿ ಮಾಡಿ ಕೋಲಾರ ಜಿಲ್ಲೆಯ ಉಸ್ತುವಾರಿ ಸಚಿವರನ್ನಾಗಿ ಮಾಡಬೇಕೆಂದು ಕಾಂಗ್ರೆಸ್ ಪಕ್ಷದ ವರಿಷ್ಠರಲ್ಲಿ ಮಾಧ್ಯಮಗಳ ಮೂಲಕ ಒತ್ತಾಯಿಸಿದರು.
ರೈತ ಮುಖಂಡ ಬೆಗ್ಲಿ ರಾಮಚಂದ್ರಪ್ಪ, ಕದಸಂ ಸಮಿತಿಯ ಜಿಲ್ಲಾ ಸಂಘಟನಾ ಸಂಯೋಜಕ ವೈ.ಎಂ.ನಾರಾಯಣಸ್ವಾಮಿ ಯಲುವಹಳ್ಳಿ ಇದ್ದರು.