ದಲಿತರಿಗೆ ಕೋವಿಡ್ ಪರಿಹಾರ ವಿಶೇಷ ಪ್ಯಾಕೇಜ್ ಘೋಷಣೆಗೆ ಆಗ್ರಹ

ಕಲಬುರಗಿ,ಮೇ.15-ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ದಲಿ ಸಮುದಾಯಕ್ಕೆ ಕೋವಿಡ್ ಪರಿಹಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ನಗರದಲ್ಲಿಂದು ಪ್ರತಿಭಟನೆ ನಡೆಸಲಾಯಿತು.
ದೇಶದಲ್ಲಿ ಕೋವಿಡ್ ಎರಡನೇ ಅಲೆ, ಮೂರನೇ ಅಲೆ ಮುಂದುವರೆದಿದ್ದು, ಇದರಿಂದ ದಲಿತ ಸಮುದಾಯ ಆಹಾರ, ಆರೋಗ್ಯ ಮತ್ತು ಉದ್ಯೋಗವಿಲ್ಲದೆ ಸಂಕಷ್ಟ ಎದುರಿಸುವಂತಾಗಿದೆ. ಈ ಕಾರಣಕ್ಕಾಗಿ ಸರ್ಕಾರ ಬಿಪಿಎಲ್ ಕಾರ್ಡ್ ಹೊಂದಿರುವ ದಲಿತರಿಗೆ ಮತ್ತು ಇತರೆ ಬಡವರಿಗೆ ರೂ.10 ಸಾವಿರ ಪರಿಹಾರವನ್ನು ತಕ್ಷಣವೇ ನೀಡಬೇಕು, 10 ಕೆ.ಜಿ.ಅಕ್ಕಿ ಜೊತೆ ಅಗತ್ಯ ವಸ್ತುಗಳನ್ನು ವಿತರಿಸಬೇಕು, ದಲಿತ ವಿದ್ಯಾರ್ಥಿಗಳಿಗೆ ನೀಡಬೇಕಿದ್ದ ವಿದ್ಯಾರ್ಥಿ ವೇತನ ಮತ್ತು ಹಾಸ್ಟೆಲ್ ವಿದ್ಯಾರ್ಥಿಗಳ ಊಟಕ್ಕೆ ನೀಡುತ್ತಿದ್ದ ಹಣವನ್ನು ಲೆಕ್ಕ ಹಾಕಿ ನೀಡಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.