ದಲಿತರನ್ನು ಹೊಡೆದಾಳುವ ರಾಷ್ಟ್ರೀಯ ಪಕ್ಷಗಳನ್ನು ನಂಬಬೇಡಿ

ಕೋಲಾರ,ಮಾ.೧೬- ಎರಡು ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ. ಒಂದೇ ನಾಣ್ಯದ ಎರಡು ಮುಖಗಳು ಚುನಾವಣೆ ಬಂದಿದೆ ಎಂದು ತಮ್ಮಗಳ ಸ್ವಾರ್ಥ ರಾಜಕಾರಣಕ್ಕಾಗಿ ದಲಿತರನ್ನ ಹೊಡೆದಾಳುವ ಕೆಲಸಕ್ಕೆ ಮುಂದಾಗುತ್ತಾರೆ. ಇಂತಹವರ ಬಗ್ಗೆ ದಲಿತರು ಎಚ್ಚೆತ್ತುಕೊಳ್ಳಬೇಕೆಂದು ರಾಜ್ಯ ಜೆಡಿಎಸ್‌ನ ಎಸ್ಸಿ ಘಟಕದ ಕಾರ್ಯದರ್ಶಿ ರಾಮಸಂದ್ರ ತಿರುಮಲೇಶ್ ಹೇಳಿದರು.
ತಾಲೂಕಿನ ನರಸಾಪುರ ಗ್ರಾಮದಲ್ಲಿ ಹೋಬಳಿ ಮಟ್ಟದ ಜೆಡಿಎಸ್ ಸಂಘಟನಾ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು ದಲಿತರ ಅಭಿವೃದ್ಧಿಗಾಗಿ ದುಡಿದಿರುವ ಏಕೈಕ ಪಕ್ಷ ಅದು ಪ್ರಾದೇಶಿಕ ಪಕ್ಷ ಜೆಡಿಎಸ್ ಮಾತ್ರ ಉಳಿದ ಪಕ್ಷಗಳು ಕೇವಲ ಚುನಾವಣೆಯ ಸಂದರ್ಭದಲ್ಲಿ ದಲಿತರ ಬಗ್ಗೆ ಮೊಸಳೆ ಕಣ್ಣೀರು ಸುರಿಸಿದ್ದು ಬಿಟ್ಟರೆ ದಲಿತರ ಅಭಿವೃದ್ಧಿ ವಿಚಾರದಲ್ಲಿ ಎರಡು ಪಕ್ಷಗಳ ಕೊಡುಗೆ ಶೂನ್ಯವಾಗಿದೆ ಜನ ಅರ್ಥಮಾಡಿಕೊಂಡು ಚುನಾವಣೆಯಲ್ಲಿ ದಲಿತರ ಪರವಾಗಿರುವ ಜೆಡಿಎಸ್ ಪಕ್ಷಕ್ಕೆ ಬೆಂಬಲಿಸುವಂತೆ ಮನವಿ ಮಾಡಿದರು.
ಜಿಲ್ಲೆಯಲ್ಲಿ ದಲಿತ ಸಂಘಟನೆಗಳ ಮುಖಂಡರು ತಮ್ಮ ಸ್ವಾರ್ಥ ಸಾಧನೆಗಾಗಿ ಜಿಲ್ಲೆಯ ದಲಿತರನ್ನು ಬಲಿಕೊಟ್ಟಿದ್ದಾರೆ ಚುನಾವಣೆ ಬಂದಾಗ ನಾವು ಎಲ್ಲರೂ ಒಂದಾಗಿದ್ದೇವೆ ಎಂದು ರಾಜಕೀಯ ಪಕ್ಷಗಳನ್ನು ಮರಳು ಮಾಡಿ ಅವರು ವೈಯಕ್ತಿಕವಾಗಿ ಬೆಳೆದಿದ್ದು ಬಿಟ್ಟರೆ ದಲಿತ ಸಮುದಾಯದ ಕಟ್ಟಕಡೆಯ ವ್ಯಕ್ತಿಯನ್ನು ಗುರುತಿಸಿ ಸೌಲಭ್ಯಗಳನ್ನು ಒದಗಿಸುವಲ್ಲಿ ಹಿರಿಯ ದಲಿತ ನಾಯಕರು ವಿಫಲವಾಗಿದ್ದಾರೆ ಎಂದರು.
ಚುನಾವಣೆ ಬಂದಾಗ ಮಾತ್ರವೇ ದಲಿತರು ನೆನಪಿಗೆ ಬರುತ್ತಾರೆ ಉಳಿದ ದಿನಗಳಲ್ಲಿ ದಲಿತರು ಯಾರ ಕಣ್ಣಿಗೂ ಕಾಣಿಸುವುದಿಲ್ಲ ದಲಿತರವನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಂಡು ಕಾಂಗ್ರೆಸ್ ಮತ್ತು ಬಿಜೆಪಿ ರಾಜಕಾರಣ ಮಾಡುತ್ತಿದೆ. ಈ ಸಮುದಾಯವನ್ನು ಗುತ್ತಿಗೆ ತೆಗೆದುಕೊಂಡಂತೆ ಎರಡು ರಾಷ್ಟ್ರೀಯ ಪಕ್ಷಗಳು ಆಡುತ್ತಿದೆ. ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹಾಗೂ ಎಚ್ ಡಿ ಕುಮಾರಸ್ವಾಮಿ ದಲಿತರನ್ನು ಗುರುತಿಸಿ ಸ್ಥಾನಮಾನ ಕೊಟ್ಟಿದ್ದಾರೆ ಕಾಂಗ್ರೆಸ್ ಮತ್ತು ಬಿಜೆಪಿಗೆ ದಲಿತರ ಮತ ಬೇಕು, ಆದರೆ ಅವರ ಅಭಿವೃದ್ಧಿ ಬಗ್ಗೆ ಗಮನಹರಿಸಿಲ್ಲ. ಈ ಪಕ್ಷಗಳಿಗೆ ದಲಿತರ ಅಭಿವೃದ್ಧಿಗೆ ಶ್ರಮಿಸುವ ಇಚ್ಛಾಶಕ್ತಿ ಇಲ್ಲ ಎಂದರು.
ಸರಕಾರಗಳು ದಲಿತರ ಅಭಿವೃದ್ಧಿಗೆ ಅನೇಕ ಯೋಜನೆ, ಕಾರ್ಯಕ್ರಮಗಳನ್ನು ನೀಡಿದ್ದಾರೆ ಎಂದು ಪ್ರಚಾರ ಮಾಡುತ್ತಾರೆ ಯಾರ ಮನೆ ಬಾಗಿಲಿಗೆ ಸೌಲಭ್ಯ ಬಂದಿದೆ ಅಂತ ಪ್ರಶ್ನೆ ಮಾಡಬೇಕು ಇನ್ನೂ ಕೇವಲ ೬೦ ದಿನಗಳಲ್ಲಿ ಚುನಾವಣೆ ನಡೆಯುತ್ತದೆ ನಿರ್ಲಕ್ಷ್ಯ ತೋರಿದವರಿಗೆ ದಲಿತರು ತಕ್ಕ ಉತ್ತರ ನೀಡಬೇಕು
ಈ ಸಂದರ್ಭದಲ್ಲಿ ಬೆಳಮಾರನಹಳ್ಳಿ ಗ್ರಾಪಂ ಸದಸ್ಯ ವಿಜಯಕುಮಾರ್, ಮಾಜಿ ಸದಸ್ಯ ರಾಮಸಂದ್ರ ಹನುಮಂತರಾಯಪ್ಪ, ಖಾಜಿಕಲ್ಲಹಳ್ಳಿ ರಾಜಣ್ಣ, ಸುದರ್ಶನ್, ಬೆಳಮಾರನಹಳ್ಳಿ ರಾಜು, ಅಶೋಕ್ ಸೇರಿದಂತೆ ಹಿರಿಯ ಮತ್ತು ಕಿರಿಯ ದಲಿತ ಮುಖಂಡರು ಹಾಗೂ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಇದ್ದರು