ದರ ಏರಿಕೆ : ಸಿ.ಎಂ. ಸ್ಪಷ್ಟನೆ

ಬೆಂಗಳೂರು, ಜು. ೧೮- ಮೊಸರು, ಹಪ್ಪಳ, ಉಪ್ಪಿನಕಾಯಿ ಅಕ್ಕಿ, ಮಂಡಕ್ಕಿ ಸೇರಿದಂತೆ ಅಗತ್ಯ ವಸ್ತುಗಳ ಮೇಲೆ ವಿಧಿಸಿರುವ ಶೇ. ೫ ರಷ್ಟು ಜಿಎಸ್‌ಟಿಯನ್ನು ಮರು ಪಾವತಿ ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ಈ ಯಾವುದೇ ವಸ್ತುಗಳ ಬೆಲೆ ಏರಿಕೆ ಮಾಡುವ ಅಗತ್ಯವಿಲ್ಲ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ವಿಧಾನಸೌಧದಲ್ಲಿಂದು ರಾಷ್ಟ್ರಪತಿ ಚುನಾವಣೆಗೆ ಮತದಾನ ಮಾಡಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಲು, ಮೊಸರು, ಅಕ್ಕಿ, ಮಂಡಕ್ಕಿ ಇವುಗಳನ್ನು ಯಾರು ಪ್ಯಾಕ್ ಮಾಡಿ ಮಾರಾಟ ಮಾಡುತ್ತಾರೋ ಅವರಿಗೆ ಮಾತ್ರ ಜಿಎಸ್‌ಟಿ ಹಾಕಿದ್ದೇವೆ. ಹಾಗೆಯೇ ಪ್ಯಾಕ್ ಮಾಡದೆ ಮಾರಾಟ ಮಾಡುವವರಿಗೆ ಜಿಎಸ್‌ಟಿ ಇಲ್ಲ ಎಂದು ಸ್ಪಷ್ಟಪಡಿಸಿದ್ದರು.
ಈ ಅಗತ್ಯ ವಸ್ತುಗಳಿಗೆ ಈಗ ವಿಧಿಸಿರುವ ಶೇ. ೫ರಷ್ಟು ಜಿಎಸ್‌ಟಿಯನ್ನು ವಾಪಸ್ ಪಡೆಯಲು ಅವಕಾಶವಿದೆ. ಬ್ರಾಂಡೆಡ್ ಉತ್ಪನ್ನಗಳಿಗೆ ಮಾತ್ರ ಈ ಜಿಎಸ್‌ಟಿ. ಇದನ್ನು ಮರು ಪಾವತಿ ಪಡೆದುಕೊಳ್ಳಲು ಜಿಎಸ್‌ಟಿ ಕೌನ್ಸಿಲ್ ಅವಕಾಶ ಕಲ್ಪಿಸಿದೆ. ಗ್ರಾಹಕರಿಗೆ ಜಿಎಸ್‌ಟಿ ತೆರಿಗೆ ವಿಧಿಸುವಂತಿಲ್ಲ. ಇದನ್ನು ಜಿಎಸ್‌ಟಿ ಕೌನ್ಸಿಲ್ ಮೂಲಕ ಎಲ್ಲರಿಗೂ ಸೂಚನೆ ಕಳುಹಿಸಿ ಏರಿಸಿರುವ ದರವನ್ನು ಇಳಿಸಲು ಕ್ರಮ ಕೈಗೊಳ್ಳುವುದಾಗಿ ಹೇಳಿದರು.
ಈ ಅಗತ್ಯ ವಸ್ತುಗಳ ಜಿಎಸ್‌ಟಿಯನ್ನು ಸಂಸ್ಥೆಗಳು ಗ್ರಾಹಕರಿಗೆ ಹಾಕಬಾರದು ಎಂಬ ಒಂದೇ ಕಾರಣಕ್ಕೆ ಮರು ಪಾವತಿಗೆ ಅವಕಾಶ ನೀಡಿದ್ದೇವೆ. ಹಾಗಾಗಿ ದರ ಹೆಚ್ಚಳ ಮಾಡುವ ಅವಶ್ಯಕತೆಯೇ ಇಲ್ಲ. ಶೇ. ೫ ರಷ್ಟು ಜಿಎಸ್‌ಟಿಯನ್ನು ವಾಪಸ್ ಪಡೆಯಬಹುದು. ಇದನ್ನು ಉತ್ಪನ್ನಗಳ ದರ ಏರಿಸಿರುವ ಎಲ್ಲರಿಗೂ ತಿಳಿಸುತ್ತೇವೆ. ದರ ಇಳಿಕೆಗೆ ಜಿಎಸ್‌ಟಿ ಮಂಡಳಿ ಮೂಲಕವೇ ಸೂಚನೆ ಕಳುಹಿಸುತ್ತೇವೆ ಎಂದು ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ ಹೇಳಿದರು.
ಗ್ರಾಹಕರಿಗೆ ಜಿಎಸ್‌ಟಿ ಹೊರೆ ಬೀಳುವುದಿಲ್ಲ. ಗೊಂದಲ ಮಾಡಿಕೊಂಡು ದರಗಳನ್ನು ಏರಿಸಲಾಗಿದೆ ಅಷ್ಟೆ. ಜಿಎಸ್‌ಟಿ ಮರು ಪಾವತಿಯಾದರೆ ಗ್ರಾಹಕರ ಮೇಲೆ ವಿಧಿಸಿರುವ ತೆರಿಗೆ ಹೊರೆಯೂ ಇಳಿಯುತ್ತದೆ. ವಿನಃ ಕಾರಣ ಗೊಂದಲ ಬೇಡ ಎಂದರು.