ದರ್ಶನ್ ಧ್ರುವನಾರಾಯಣರಿಂದ ಜನತಾದರ್ಶನ ಕಾರ್ಯಕ್ರಮ

ಸಂಜೆವಾಣಿ ವಾರ್ತೆ
ನಂಜನಗೂಡು: ಸೆ.26:- ಸಾರ್ವಜನಿಕರ ಸ್ಥಳೀಯ ಸಮಸ್ಯೆಗಳಿಗೆ ಸ್ಥಳದಲ್ಲಿ ಪರಿಹಾರ ನೀಡುವ ಸಲುವಾಗಿ ಪ್ರತಿ ಸೋಮವಾರ ನಗರದ ತಾಲೂಕು ಪಂಚಾಯಿತಿ ಕಟ್ಟಡದಲ್ಲಿರುವ ಶಾಸಕರ ಕಚೇರಿಯಲ್ಲಿ ಜನತಾದರ್ಶನ ಕಾರ್ಯಕ್ರಮವನ್ನು ನಡೆಸಲಾಗುವುದು ಎಂದು ಶಾಸಕ ದರ್ಶನ್ ಧ್ರುವನಾರಾಯಣ ಹೇಳಿದರು.
ಅವರು ಸೋಮವಾರ ತಾಲೂಕು ಆಡಳಿತ ಏರ್ಪಸಿದ್ಧ ಜನತಾದರ್ಶನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಿ ಮಾತನಾಡಿದರು. ಸಾರ್ವಜನಿಕರು ತಮ್ಮ ಗ್ರಾಮಗಳ ಸ್ಥಳೀಯ ಸಮಸ್ಯೆಗಳನ್ನು ಬಗೆಹರಿಸುವ ಸಲುವಾಗಿ ಶಾಸಕರನ್ನು ಹುಡುಕಿ ಮೈಸೂರಿಗೆ ಅಲೆಯುವುದನ್ನು ತಪ್ಪಿಸುವ ಸಲುವಾಗಿ, ಅಲ್ಲದೆ ಜನಸಾಮಾನ್ಯರ ಸ್ಥಳೀಯ ಸಮಸ್ಯೆಗಳನ್ನು ಪ್ರಾಮಾಣಿಕವಾಗಿ ಬಗೆಹರಿಸುವ ಸಲುವಾಗಿ ಈ ಜನತಾದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕರು ಪ್ರತಿ ಸೋಮವಾರ ಶಾಸಕರ ಕಚೇರಿಯಲ್ಲಿ ನನ್ನನ್ನು ಭೇಟಿಯಾಗಬಹುದು, ಜೊತೆಗೆ ಕಚೇರಿಗೆ ಬರಲು ಸಾಧ್ಯವಾಗದವರು ನನ್ನ ದೂರವಾಣಿ ಸಂಖ್ಯೆಗೆ ಅಥವಾ ಕಚೇರಿಯ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಮಸ್ಯೆಯನ್ನು ತಿಳಿಸಿ ಬಗೆಹರಿಸಿಕೊಳ್ಳಲು ಮುಂದಾಗಬೇಕು ಎಂದರು.
ಹೆಚ್ಚಾಗಿ ಗ್ರಾಮೀಣ ಭಾಗದಲ್ಲಿ ಮೂಲ ಸೌಕರ್ಯವನ್ನು ಒದಗಿಸುವಂತೆ, ರಸ್ತೆ, ಚರಂಡಿ ನಿರ್ಮಾಣ, ಸಮುದಾಯ ಭವನ ನಿರ್ಮಿಸಿ ಕೊಡುವಂತೆ ಅಹವಾಲು ಸಲ್ಲಿಸಿದ್ದಾರೆ. ಕೆಲ ಗ್ರಾಮಗಳಲ್ಲಿ ಚರಂಡಿ ಸ್ವಚ್ಛತೆ ಇಲ್ಲದೆ ಇರುವ ಬಗ್ಗೆ, ಸ್ಮಶಾನ ಅಭಿವೃದ್ಧಿ ಪಡಿಸುವಂತೆ ದೂರು ಕೇಳಿ ಬಂದಿದೆ, ಕಾಡಂಚಿನ ಗ್ರಾಮಗಳಲ್ಲಿ ಕಾಡುಪ್ರಾಣಿಗಳ ಹಾವಳಿಯನ್ನು ನಿಯಂತ್ರಿಸುವಂತೆ ಹೆಚ್ಚಾಗಿ ದೂರು ಕೇಳಿ ಬಂದಿದೆ. ತಾಲೂಕು ಮಟ್ಟದ ಅಧಿಕಾರಿಗಳ ಮಟ್ಟದಲ್ಲಿ ಪರಿಹಾರವಾಗುವಂತಹ ಕೆಲವು ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಲಾಗಿದೆ. ಕೆಲವು ಸಮಸ್ಯೆಗಳನ್ನು ಬಗೆಹರಿಸಲು ಕಾಲಾವಕಾಶ ಬೇಕಾಗಿದ್ದು ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ ಎಂದರು.
ಇದೇ ಸಂದರ್ಭದಲ್ಲಿ ಮಾಜಿ ಶಾಸಕ ಕಳಲೆ ಕೇಶವಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕುರಹಟ್ಟಿಮಹೇಶ್, ಸಿಎಂ ಶಂಕರ್, ಶ್ರೀಕಂಠನಾಯಕ, ಮುಖಂಡರಾದ ನಾಗರಾಜಯ್ಯ, ಕುಳ್ಳಯ್ಯ, ಸಿದ್ದಶೆಟ್ಟಿ, ನಾಗರಾಜು, ಕಳಲೆ ರಾಜೇಶ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್, ಎಪಿಎಂಸಿ ಮಾಜಿ ಅಧ್ಯಕ್ಷ ಮುದ್ದುಮಾದ ಶೆಟ್ಟಿ ಸೇರಿದಂತೆ ಹಲವಾರು ಪ್ರಮುಖರು ಇದ್ದರು.