ದರ್ಶನ್ ಜೊತೆ ನಾಯಕಿಯಾಗುವಾಸೆ ಮನದಾಸೆ ಬಿಚ್ಚಿಟ್ಟ `ಪುಷ್ಪವತಿ’ ಬೆಡಗಿ

•             ಚಿ.ಗೋ ರಮೇಶ್

ಅದೃಷ್ಠ ಅನ್ನುವುದೇ ಹಾಗೆ.. ಒಮ್ಮೆ ಬಂದರೆ ಬದುಕು ಬದಲಾಯಿಸಿ ಬಿಡುತ್ತದೆ. ಮೂರು ನಾಲ್ಕು ಚಿತ್ರಗಳಲ್ಲಿ ನಟಿಸಿಯೂ ಚಿತ್ರರಂಗದಲ್ಲಿ ಗುರುತಿಸಿಕೊಳ್ಳಲು ಪರದಾಡುತ್ತಿದ್ದ ನಟಿ ನಿಮಿಕಾ ರತ್ನಾಕರ್ ಅವರಿಗೆ “ಕ್ರಾಂತಿ” ಚಿತ್ರದ “ಪುಷ್ಪವತಿ” ಹಾಡು ಎಲ್ಲೆಡೆಯಿಂದ ಮೆಚ್ಚುಗೆಯ ಮಹಾಪೂರ ಹರಿದು ಬರವಂತೆ ಮಾಡಿದೆ.ರಾತ್ರಿ ಬೆಳಗಾಗುವುದರಲ್ಲಿ ಜನಪ್ರಿಯ ತಾರೆಯಾಗಿ ಹೊರಹೊಮ್ಮಿದ್ದಾರೆ.

ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರ ತನಕ ಹಾಡು ಇಷ್ಟಟ್ಟ ಪರಿಣಾಮ ಎಲ್ಲೆಡೆ ಗುರುತಿಸಿಕೊಳ್ಳುವಂತಾಗಿದೆ, ಚಿತ್ರರಂಗದಿಂದ ಹೊಸ ಹೊಸ ಅವಕಾಶಗಳು ಬರುತ್ತಿದ್ದು ಎಚ್ಚರಿಕೆ ಹೆಜ್ಜೆ ಇಡಲು ಮುಂದಾಗಿರುವ ನಿಮಿಕಾ ರತ್ನಾಕರ್ ಅವರಿಗೆ ಡಿ ಗ್ಲಾಮರ್ ಪಾತ್ರ ಮಾಡುವಾಸೆಯಂತೆ. ಎಲ್ಲರಿಗೂ ಇಷ್ಟವಾಗುವ ಪಾತ್ರವನ್ನು ಮಾಡುವ ಉದ್ದೇಶಹೊಂದಿದ್ದಾರೆ. ಅವಕಾಶ ಸಿಕ್ಕರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಯಾಗಿ ಕೆಲಸ ಮಾಡುವ ಆಸೆ ಇದೆ ಎಂದಿದ್ದಾರೆ,

ಹೊಸ ಚಿತ್ರಗಳ ಬಗ್ಗೆ ಮಾಹಿತಿ ಹಂಚಿಕೊಂಡ ನಿಮಿಕಾ ರತ್ನಾಕರ್, “ಕ್ರಾಂತಿ” ಚಿತ್ರದಲ್ಲಿ ನಟಿಸಿದ ಹಾಡು ಚಿತ್ರರಂಗದಲ್ಲಿ ಹಾಗು ಜನರು ಗುರುತಿಸುವಂತಾಯಿತು. ಇದಕ್ಕಾಗಿ ದರ್ಶನ್ ಸಾರ್ ಅವರಿಗೆ ಅಬಾರಿ.“ಪುಷ್ಪವತಿ”  ಹಾಡು ಬಿಡುಗಡೆಯಾದ ಮೇಲೆ ಮೂರು ನಾಲ್ಕು ತಿಂಗಳು ಈ ಹಾಡಿನ ಬಗ್ಗೆಯೇ ಎಲ್ಲರ ಮಾತುಕತೆ, ದೇಶ ವಿದೇಶಗಳಲ್ಲಿ ಹಾಡಿನ ಜನಪ್ರಿಯತೆಗೆ ಭಾಷೆ ಗೊತ್ತಿಲ್ಲದವರೂ ರೀಲ್ಸ್ ಮಾಡಿದ್ದು ಖುಷಿ ಇದೆ ಎಂದಿದ್ದಾರೆ.

ಚಿಕ್ಕ ಚಿಕ್ಕ ಮಕ್ಕಳು ಹಾಡು ಬಂದರೆ ಊಟ ಮಾಡೋದು, ಹಾಡು ಹಾಕಿದರೆ ಮಲಗುವುದು ಸೇರಿದಂತೆ ಅನೇಕ ವಿಷಯ ಕೇಳಿದ್ದೇನೆ. ಆಟೋ ಹಿಂದೆ ನನ್ನ ಪೋಟೊ ಹಾಕಿಕೊಂಡು ಓಡಾಡಿದ್ದಾರೆ. ಜೊತೆಗೆ ಚಿತ್ರರಂಗದಿಂದ, ದರ್ಶನ್ ಸಾರ್ ಅಭಿಮಾನಿಗಳಿಂದಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ಖುಷಿ ಹಂಚಿಕೊಂಡಿದ್ದಾರೆ.

ಫೀನಿಕ್ಸ್‍ನಲ್ಲಿ ವಿಭಿನ್ನ ಪಾತ್ರ

ಹಿರಿಯ ನಿರ್ದೇಶಕ ಓಂ ಪ್ರಕಾಶ್ ರಾವ್ ಜೊತೆ “ಫೀನಿಕ್ಸ್”  ಚಿತ್ರದಲ್ಲಿ ಮೂರು ನಾಯಕಿಯರಲ್ಲಿ ಲೀಡ್ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ.ಮಹಿಳಾ ಪ್ರಧಾನ ಚಿತ್ರ. ಕಥೆ ಕೇಳಿ ಥ್ರಿಲ್ಲರ್ ಆಗಿದ್ದೇನೆ. ಹೀಗಾಗಿ ನಟಿಸಲು ಒಪ್ಪಿಕೊಂಡಿದ್ದೇನೆ. ಈ ರೀತಿಯ ಪಾತ್ರ ಹೊಸದು. ಈ ಹಿಂದೆ “ತ್ರಿಶೂಲಂ” ಚಿತ್ರದಲ್ಲಿ ನಟಿಸಿದ್ದೇನೆ. ಉಪೇಂದ್ರ ಜೊತೆ ನಾಯಕಿ. ರವಿಚಂದ್ರನ್ ಇದ್ದಾರೆ. ಬಿಡುಗಡೆಯಾದ ಬಳಿಕ ದೊಡ್ಡ ಬ್ರೇಕ್ ಸಿಗಬಹುದು ಎನ್ನುವ ನಂಬಿಕೆ ಇದೆ. ಇದೀಗ ಓಂ ಪ್ರಕಾಶ್ ರಾವ್ ಅವರೊಂದಿಗೆ ನನ್ನ ಎರಡನೇ ಚಿತ್ರ. ಚಿತ್ರದಲ್ಲಿ ನಟಿಸಲು ಕಾತುರದಿಂದ ಇದ್ದೇನೆ. ಇನ್ನೂ ಯಾವಾಗ ಚಿತ್ರ ಆರಂಭ ಎನ್ನುವುದು ಇನ್ನು ತಿಳಿದಿಲ್ಲ- -ನಿಮಿಕಾ ರತ್ನಾಕರ್, ನಟಿ

ಬಾಸ್ ಜೊತೆ ನಟಿಸುವಾಸೆ

“ಪುಷ್ಪವತಿ” ಹಾಡಿನ ಬಳಿಕ ಅಭಿಮಾನಿಗಳು ಡಿ ಬಾಸ್ ಜೊತೆ ಯಾವಾಗ ನಾಯಕಿಯಾಗಿ ನಟಿಸುತ್ತೀರಾ ಎಂದು ಸಾಮಾಜಿಕ ಜಾಲತಾಣದಲ್ಲಿ ಕೇಳುತ್ತಿದ್ದಾರೆ. ಈ ವಿಷಯವನ್ನೂ ದರ್ಶನ್ ಸಾರ್ ಅವರ ಗಮನಕ್ಕೆ ತಂದಿದ್ದೇನೆ. ಒಳ್ಳೆಯ ಕಥೆ, ಪಾತ್ರ ಸಿಕ್ಕರೆ ನೋಡೋಣ. ನನಗಂತೂ ಅವರ ಜೊತೆ ನಟಿಸುವ ಆಸೆ ಇದೆ. ನೋಡಬೇಕು ಎಲ್ಲವೂ ಕಥೆಯ ಮೇಲೆ ಅವಲಂಬಿತವಾಗಿದೆ ಅಲ್ಲವೇ ಎಂದಿದ್ದಾರೆ ನಟಿ ನಿಮಿಕಾ ರತ್ನಾಕರ್.

ಡಿ ಗ್ಲಾಮರ್ ಪಾತ್ರ ಇಷ್ಟ

ಚಿತ್ರರಂಗದಲ್ಲಿ ಬಹು ದೊಡ್ಡ ಸಾಧನೆ ಮಾಡುವ ಕಸನು ಕಟ್ಟಿಕೊಂಡವಳು, ಇಂತಹುದೇ ಪಾತ್ರ ಎಂದು ಕಟ್ಟು ಬೀಳುವುದಿಲ್ಲ.ಬದಲಾಗಿ ಸಿಕ್ಕ ಎಲ್ಲಾ ಉತ್ತಮ ಅವಕಾಶಗಳಲ್ಲಿ ಮತ್ತು ಚಿತ್ರಗಳಲ್ಲಿ ನಟಿಸಬೇಕು ಎನ್ನುವ ಆಸೆ ಇದೆ. ಅದರಲ್ಲಿಯೂ ವಿಶೇಷವಾಗಿ ಡಿ ಗ್ಲಾಮರ್ ಪಾತ್ರ ಜೊತೆಗೆ ಜನರು ಗುರುತಿಸುವ ಪಾತ್ರದಲ್ಲಿ ನಟಿಸುವ ಗುರಿ ಇದೆ. ಉತ್ತಮ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುವ ಕಡೆಗೆ ಗಮನ ಹರಿಸಿದ್ದೇನೆ. ಅಳೆದು ತೂಗಿ ಒಳ್ಳೆಯ ಪಾತ್ರಗಳನ್ನೇ ಆಯ್ಕೆ ಮಾಡಿಕೊಳ್ಳುವೆ ಎಂದಿದ್ದಾರೆ ನಟಿ ನಿಮಿಕಾ ರತ್ನಾಕರ್