ದರ್ಗಿ ಮೇಯರ್, ಪಿಸ್ತಿ ಉಪ ಮೇಯರ್ಕಲಬುರಗಿ ಮಹಾನಗರ ಪಾಲಿಕೆ ಬಿಜೆಪಿ ಮಡಿಲಿಗೆ-“ಕೈ” ಚೆಲ್ಲಿದ ಕಾಂಗ್ರೆಸ್

ಕಲಬುರಗಿ,ಮಾ.23-ತೀವ್ರ ಜಿದ್ದಾಜಿದ್ದಿಗೆ ಸಾಕ್ಷಿಯಾಗಿದ್ದ ಕಲಬುರಗಿ ಮಹಾನಗರ ಪಾಲಿಕೆಯ ಅಧಿಕಾರ ಗದ್ದುಗೆ ಹಿಡಿಯುವಲ್ಲಿ ಬಿಜೆಪಿ ಕೊನೆಗೂ ಯಶಸ್ವಿಯಾಗಿದೆ. ಮಹಾನಗರ ಪಾಲಿಕೆಯ ಅಧಿಕಾರದ ಗದ್ದುಗೆ ಹಿಡಿಯುವಲ್ಲಿ ಕಿಂಗ್ ಮೇಕರ್ ಆಗಿದ್ದ ಜೆಡಿಎಸ್ ಕಾಂಗ್ರೆಸ್‍ಗೆ ಬೆಂಬಲ ಸೂಚಿಸಿತ್ತು. ಆದರೆ, ಕೊನೆಗಳಿಗೆಯಲ್ಲಿ ವಾರ್ಡ್ ನಂಬರ್ 42ರ ಜೆಡಿಎಸ್ ಸದಸ್ಯ ಅಲಿಂ ಪಟೇಲ್ ಮತದಾನಕ್ಕೆ ಗೈರು ಹಾಜರಾದ ಹಿನ್ನೆಲೆಯಲ್ಲಿ ಮೇಯರ್ ಸ್ಥಾನಕ್ಕೇರಲು ಬಿಜೆಪಿಗೆ ಹಾದಿ ಸುಗಮವಾಯಿತು.
ಬಿಜೆಪಿಯ ವಿಶಾಲ ದರ್ಗಿ ಮೇಯರ್ ಆಗಿ, ಶಿವಾನಂದ ಪಿಸ್ತಿ ಉಪ ಮೇಯರ್ ಆಗಿ ಆಯ್ಕೆಯಾಗುವುದರ ಮೂಲಕ ಕಳೆದೊಂದು ವರ್ಷದಿಂದ ನಡೆದಿದ್ದ ಹಗ್ಗ ಜಗ್ಗಾಟಕ್ಕೆ ಕೊನೆಗೂ ತೆರೆಬಿದ್ದಂತಾಗಿದೆ.
ನಗರದ ಇಂದಿರಾ ಸ್ಮಾರಕ ಭವನ (ಟೌನ್ ಹಾಲ್)ದಲ್ಲಿ ಇಂದು ಬೆಳಿಗ್ಗೆ 12.30ಕ್ಕೆ ಪ್ರಾದೇಶಿಕ ಆಯುಕ್ತರೂ ಆದ ಚುನಾವಣಾಧಿಕಾರಿ ಕೃಷ್ಣ ಭಾಜಪೇಯಿ ಅವರ ನೇತೃತ್ವದಲ್ಲಿ ಮೇಯರ್ ಮತ್ತು ಉಪ ಮೇಯರ್ ಸ್ಥಾನಕ್ಕೆ ಚುನಾವಣೆ ನಡೆಯಿತು.
ಮೇಯರ್ ಸ್ಥಾನ ಪರಿಶಿಷ್ಟ ಜಾತಿ ಮತ್ತು ಉಪ ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು.

ಮೇಯರ್ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಿ.ಜೆ.ಪಿ. ಅಭ್ಯರ್ಥಿ ವಿಶಾಲ ಧರ್ಗಿ ಪರ 33 ಮತ್ತು ಪ್ರತಿಸ್ಪರ್ಧಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹೆಚ್. ಕಪನೂರ ಪರವಾಗಿ 32 ಮತಗಳ ಚಲಾವಣೆಯಾದವು. ಉಪ ಮೇಯರ್ ಸ್ಥಾನಕ್ಕೆ ಸ್ಫರ್ಧಿಸಿದ್ದ ಬಿ.ಜೆ.ಪಿ. ಅಭ್ಯರ್ಥಿ ಶಿವಾನಂದ ಡಿ. ಪಿಸ್ತಿ ಪರವಾಗಿ 33 ಮತ್ತು ಕಾಂಗ್ರೇಸ್ ಬೆಂಬಲಿತ ಜನತಾದಳ (ಜಾತ್ಯತೀತ) ಪಕ್ಷದ ಅಭ್ಯರ್ಥಿ ವಿಜಯಲಕ್ಷ್ಮೀ ರಮೇಶ ಸಿ. ಅವರ ಪರವಾಗಿ 32 ಮತ ಚಲಾವಣೆಗೊಂಡವು. ಸದಸ್ಯರು ಕೈ ಎತ್ತುವ ಮೂಲಕ ಮತದಾನ ಮಾಡಿದರು.

ಹೆಚ್ಚಿನ ಮತ ಪಡೆದ ವಿಶಾಲ ಧರ್ಗಿ ಮತ್ತು ಶಿವಾನಂದ ಡಿ. ಪಿಸ್ತಿ ಅವರು ಕ್ರಮವಾಗಿ ಮೇಯರ್, ಉಪ ಮೇಯರ್ ಆಗಿ ಚುನಾಯಿತರಾಗಿದ್ದಾರೆ ಎಂದು ಚುನಾವಣಾಧಿಕಾರಿಯಾಗಿರುವ ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತ ಕೃಷ್ಣ ಬಾಜಪೇಯಿ ಘೋಷಿಸಿ ನೂತನ ಮೇಯರ್-ಉಪ ಮೇಯರ್ ಅವರಿಗೆ ಹೂಗುಚ್ಛ ನೀಡಿ ಶುಭ ಕೋರಿದರು.

ಕಲಬುರಗಿ ಮಹಾನಗರ ಪಾಲಿಕೆಯ 21ನೇ ಅವಧಿಯ ಮೇಯರ್ ಸ್ಥಾನ ಪರಿಶಿಷ್ಟ ಜಾತಿಗೆ ಮತ್ತು ಉಪ-ಮೇಯರ್ ಸ್ಥಾನ ಸಾಮಾನ್ಯ ವರ್ಗಕ್ಕೆ ಮೀಸಲಾಗಿತ್ತು. ಚುನಾವಣೆಯ ಮತದಾನಕ್ಕೂ ಮುನ್ನ ನೂತನ ಪಾಲಿಕೆ ಸದಸ್ಯರಿಗೆ ಕೌನ್ಸಿಲ್ ಸೆಕ್ರೆಟರಿ ಶ್ರೀಯಾಂಕಾ ಧನಶ್ರೀ ಅವರು ಸದಸ್ಯತ್ವದ ಪ್ರತಿಜ್ಞಾ ವಿಧಿ ಬೋಧಿಸಿದರು.

ಚುನಾವಣಾ ಪ್ರಕ್ರಿಯೆ ಆರಂಭಕ್ಕೂ ಮುನ್ನ ಪಾಲಿಕೆ ಸದಸ್ಯರು, ಕ್ಷೇತ್ರದ ಸಂಸದರು, ಶಾಸಕರು ಒಳಗೊಂಡಂತೆ 65 ಸದಸ್ಯರು ಸಭೆಯಲ್ಲಿ ಹಾಜರಿರುವುದನ್ನು ಮತದಾರರಿಗೆ ಚುನಾವಣಾಧಿಕಾರಿಗಳು ತಿಳಿಸಿ, ಸಭೆಗೆ ಕೋರಂ ಇರುವುದರಿಂದ ಚುನಾವಣಾ ಪ್ರಕ್ರಿಯೆ ಆರಂಭಿಸಿದರು. ಇದೇ ಸಂದರ್ಭದಲ್ಲಿ ಮೇಯರ್ ಚುನಾವಣೆಗೆ ನಾಮಪತ್ರ ಸಲ್ಲಿಸಿದ್ದ ಕೃಷ್ಣಾ ನಾಯಕ್ ತಮ್ಮ ನಾಮಪತ್ರ ವಾಪಸ್ ಪಡೆದುಕೊಂಡರು.

ಮತದಾನ ಪ್ರಕ್ರಿಯೆಯಲ್ಲಿ ಸಂಸದ ಡಾ.ಉಮೇಶ ಜಾಧವ, ಶಾಸಕರಾದ ದತ್ತಾತ್ರೇಯ ಪಾಟೀಲ ರೇವೂರ, ಬಸವರಾಜ ಮತ್ತಿಮೂಡ, ಖನೀಜ್ ಫಾತಿಮಾ, ವಿಧಾನ ಪರಿಷತ್ ಶಾಸಕರಾದ ಸುನೀಲ ವಲ್ಯಾಪುರೆ, ಶಶೀಲ ಜಿ. ನಮೋಶಿ, ಬಿ.ಜಿ.ಪಾಟೀಲ, ಚಂದ್ರಶೇಖರ ಪಾಟೀಲ ಹುಮನಾಬಾದ, ಲೇಹರ್ ಸಿಂಗ್, ಭಾರತಿ ಶೆಟ್ಟಿ, ಸಾಯಬಣ್ಣಾ ತಳವಾರ, ರಘುನಾಥ ಮಲ್ಕಾಪುರೆ, ಮುನಿರಾಜು ಗೌಡ ಸೇರಿದಂತೆ ಚುನಾಯಿತ ನೂತನ ಪಾಲಿಕೆ ಸದಸ್ಯರು ಭಾಗವಹಿಸಿದ್ದರು.

ಮಹಾನಗರ ಪಾಲಿಕೆ ಆಯುಕ್ತ ಭುವನೇಶ ಪಾಟೀಲ ದೇವಿದಾಸ್, ಅಪರ ಪ್ರಾದೇಶಿಕ ಆಯುಕ್ತೆ ಪ್ರಮೀಳಾ, ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತೆ ಮಮತಾ ಕುಮಾರಿ, ಕಲಬುರಗಿ ತಹಸೀಲ್ದಾರ ಮಧುರಾಜ ಸೇರಿದಂತೆ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳು ಇದ್ದರು. ಚುನಾವಣೆ ಹಿನ್ನೆಲೆಯಲ್ಲಿ ಡಿ.ಸಿ.ಪಿ. ಅಡ್ಡೂರು ಶ್ರೀನಿವಾಸಲು ನೇತೃತ್ವದಲ್ಲಿ ಪೊಲೀಸ್ ಪಡೆ ಇಂದಿರಾ ಸ್ಮಾರಕ ಭವನ ಸುತ್ತ ಭದ್ರತೆ ನೀಡಿತು. ಮತದಾನ ಪ್ರಕ್ರಿಯೆಯೂ ಶಾಂತಿಯುತವಾಗಿ ನಡೆಯಿತು.