ದರ್ಗಾ ಹುಂಡಿ ಒಡೆದು ಹಣ ಕದ್ದು ಪರಾರಿಯಾಗಲು ಯತ್ನ

ಕಲಬುರಗಿ,ಆ.9-ತಾಲ್ಲೂಕಿನ ಯಳವಂತಗಿ (ಕೆ) ಗ್ರಾಮದಲ್ಲಿರುವ ಅಪ್ಸಿಪೀರ ದರ್ಗಾದ ಹುಂಡಿ ಒಡೆದು ಅದರಲ್ಲಿದ್ದ 2000 ದಿಂದ 2,500 ರೂ.ವರೆಗಿನ ಹಣ ಕದ್ದು ಪರಾರಿಯಾಗಲು ಯತ್ನಿಸಿದ ಇಬ್ಬರನ್ನು ಸೆರೆ ಹಿಡದ ಗ್ರಾಮಸ್ಥರು ಅವರನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.
ಅಫಜಲಪುರ ತಾಲ್ಲೂಕಿನ ಅತನೂರ ಗ್ರಾಮದ ಸದ್ದಾಂ ಸೈಯದ್ ಅಲಿ ಶೇಖ್ (32) ಮತ್ತು ಮಹಿಬೂಬ್ ಶಹಾಬೂದ್ದಿನ್ (17) ಎಂಬುವವರನ್ನು ಪೊಲೀಸರಿಗೆ ಒಪ್ಪಿಸಲಾಗಿದೆ.
ಇವರು ಟಾಟಾ ಏಸ್ ವಾಹನದಲ್ಲಿ ಬಂದು ದರ್ಗಾದ ಹುಂಡಿ ಒಡೆದು ಅದರಲ್ಲಿದ್ದ ಹಣ ಕದ್ದುಕೊಂಡು ಪರಾರಿಯಾಗಲು ಯತ್ನಿಸಿದ್ದನ್ನು ದರ್ಗಾದ ಮುತಾವಲಿ ಜಿಲಾನಿ ಮುಲ್ಲಾ ಅವರು ನೋಡಿ ಗ್ರಾಮಸ್ಥರಿಗೆ ವಿಷಯ ತಿಳಿಸಿದ್ದು, ಗ್ರಾಮಸ್ಥರು ಅವರನ್ನು ಸೆರೆ ಹಿಡಿದು 112ಗೆ ಕರೆ ಮಾಡಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂಧ ಸಬ್ ಅರ್ಬನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.