
ಕೋಲಾರ,ಮಾ,೨೪- ಜಿಲ್ಲೆಯಲ್ಲಿ ದೊಡ್ಡ ಮಟ್ಟದ ದರೋಡೆ ನಡೆಸಲು ಸಿದ್ಧತೆ ನಡೆಸಿದ್ದಂತಹ ಇರಾನಿ ಗ್ಯಾಂಗ್‌ನ ಆರು ಮಂದಿಯನ್ನು ಬಂಧಿಸುವಲ್ಲಿ ಜಿಲ್ಲಾ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೋಲಾರದಿಂದ ಬಂಗಾರಪೇಟೆ ರಸ್ತೆಯಲ್ಲಿ ದರೋಡೆ ಮಾಡಲು ಮಾರಕಾಸ್ತ್ರಗಳೊಂದಿಗೆ ಸಿದ್ಧವಾಗಿದ್ದಂತಹ ಇರಾನಿ ಗ್ಯಾಂಗ್ ಸದಸ್ಯರನ್ನು ಜಿಲ್ಲಾ ಪೊಲೀಸರ ತಂಡವು ಬಂಧಿಸಿದ್ದು, ಸುಮಾರು ೧೩.೫೦ ಲಕ್ಷ ಮೌಲ್ಯದ ಚಿನ್ನಾಭರಣ ಹಾಗೂ ಬೈಕ್ ವಶಪಡಿಸಿಕೊಂಡಿದ್ದಾರೆ.
ಇರಾನಿ ಗ್ಯಾಂಗ್ ಬಂಧನದ ಕುರಿತಂತೆ ಗುರುವಾರ ಸುದ್ದಿಗೋಷ್ಠಿ ನಡೆಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ ಅವರು, ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಮೋಸ ಹಾಗೂ ಸರಗಳ್ಳತನದಲ್ಲಿ ತೊಡಗಿದ್ದ ಇರಾನಿ ಗ್ಯಾಂಗ್‌ನ ಆರು ಸದಸ್ಯರನ್ನು ಬಂಧಿಸಿದ್ದು ಉಳಿದವರ ಪತ್ತೆಗೆ ತನಿಖೆ ನಡೆಸಲಾಗುತ್ತಿದೆ ಎಂದು ಹೇಳಿದರು.
ಆಂಧ್ರಪ್ರದೇಶದ ಅನಂತಪುರಂ ಜಿಲ್ಲೆಯ ಗುಂತಕಲ್ ಮೂಲದ ಐದಾರು ಮಂದಿ ಕುಖ್ಯಾತ ಇರಾನಿ ಗ್ಯಾಂಗ್‌ನ ಸದಸ್ಯರಲ್ಲಿ ಒಬ್ಬರು ಪೊಲೀಸ್ ಅಧಿಕಾರಿಯಂತೆ ಮತ್ತೊಬ್ಬ ಸಿಬ್ಬಂದಿಯಂತೆ ನಟಿಸಿ ತಮ್ಮನ್ನು ಪೊಲೀಸರು ಎಂದು ಸಾರ್ವಜನಿಕರ ಬಳಿಪರಿಚಯಿಸಿಕೊಳ್ಳುತ್ತಿದ್ದರು. ಬಳಿಕ ಮಹಿಳೆಯರನ್ನು ಆ ಅಧಿಕಾರಿ ಬಳಿ ಕರೆದುಕೊಂಡು ಬಂದು ಮುಂದೆ ಕಳ್ಳತನವಾಗಿದೆ, ಕೊಲೆಯಾಗಿದೆ, ಗಲಾಟೆಯಾಗುತ್ತಿದೆ ಎಂದು ಹೇಳಿ ನಿಮ್ಮ ಒಡವೆಗಳನ್ನು ಬಿಚ್ಚಿಕೊಡಿ ನಾವು ಸುರಕ್ಷಿತವಾಗಿ ಕವರಿನಲ್ಲಿ ಹಾಕಿಕೊಡುತ್ತೇವೆಂದು ನಂಬಿಸಿ ಅವರು ಧರಿಸಿದ್ದಂತಹ ಮಾಂಗಲ್ಯ ಸರ, ಉಂಗುರಗಳು, ಓಲೆಗಳನ್ನು ಬಿಚ್ಚಿಸಿ ಒಡವೆಗಳನ್ನು ಕವರಿನಲ್ಲಿ ಹಾಕುವಂತೆ ನಟಿಸಿ ಅವರ ಗಮನ ಬೇರೆಡೆ ಸೆಳೆದು ಪರಾಗಿಯಾಗುತ್ತಿದ್ದರು ಎಂದು ಮಾಹಿತಿ ನೀಡಿದರು.
ಇದರೊಂದಿಗೆ ಕರ್ನಾಟಕ, ಆಂಧ್ರಪ್ರದೇಶದ ಸೇರಿದಂತೆ ಹಲವೆಡೆಗಳಲ್ಲಿ ಒಬ್ಬಂಟಿಯಾಗಿ ಓಡಾಡುವ ಮಹಿಳೆಯರ ಕತ್ತಿನಲ್ಲಿದ್ದ ಚಿನ್ನದ ಸರಗಳನ್ನು ಕಿತ್ತುಕೊಂಡು ಹೋಗಿದ್ದಂತಹ ಅಬ್ಬಾಸ್ ಅಲಿ, ರಫೀಸ್ ಹುಸೇನ್, ಅಬ್ಬಾಸ್ ಅಲಿ, ಮೊಹಮ್ಮದ್ ಅಲಿ, ಖೈಬರ್ ಸಾದೀಕ್ ಜಾಫರಿ, ಅಲಿ ಹೈದರ್ ಎಂಬುವರನ್ನು ಬಂಧಿಸಲಾಗಿದೆ ಎಂದು ನಾರಾಯಣ ಅವರು ಮಾಹಿತಿ ನೀಡಿದರು.
ಬಂಧಿತರ ವಿರುದ್ಧ ಕರ್ನಾಟಕ ಹಾಗೂ ಆಂಧ್ರಪ್ರದೇಶದಲ್ಲಿ ೧೧೦ಕ್ಕೂ ಹೆಚ್ಚಿನ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದು ರಾಜ್ಯದ ವಿವಿಧ ಠಾಣೆಗಳಲ್ಲಿ ದಾಖಲಾಗಿರುವ ೯೮ ಪ್ರಕರಣಗಳಲ್ಲಿ ಆರೋಪಿಗಳು ಬೇಕಾಗಿದ್ದು ಮುಂದಿನ ತನಿಖೆಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಾರ್ವಜನಿಕರ ಗಮನ ಬೇರೆಡೆ ಸೆಳೆದು ಮೋಸ ಹಾಗೂ ಸರಗಳ್ಳತನ ಮಾಡಿ ಇರಾನಿ ಗ್ಯಾಂಗ್ ಸದಸ್ಯರು ತರುತ್ತಿದ್ದಂತಹ ಚಿನ್ನದ ಒಡವೆಗಳನ್ನು ಖರೀದಿ ಮಾಡುತ್ತಿದ್ದಂತಹ ಆಂಧ್ರಪ್ರದೇಶದ ಗುಂತಕಲ್‌ನ ವಾಸಿ ಶೇಖ್ ಖಾಜಾವಲಿ ಎಂಬಾತನನ್ನು ಪೊಲೀಸರು ಬಂಸಿದ್ದು ಸುಮಾರು ೧೨.೫೦ ಲಕ್ಷ ಮೌಲ್ಯದ ೨೫೦ ಚಿನ್ನದ ಒಡವೆಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಕಾರಿಗಳು ತಿಳಿಸಿದರು.
ಜಿಲ್ಲಾ ಪೊಲೀಸರು ಸತತ ೩೦ ದಿನಗಳ ನಿರಂತರ ಪರಿಶ್ರಮ ಹಾಗೂ ಕೋಲಾರಮ್ಮ ದೇವಿಯ ಆಶೀರ್ವಾದದಿಂದಾಗಿ ಇರಾನಿ ಗ್ಯಾಂಗ್ ಸದಸ್ಯರನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.