ದಯಾಗುಣವೆ ಧರ್ಮಕ್ಕೆ ಆಧಾರ

ಕೆಂಭಾವಿ:ಜ.9:ದಯಾಗುಣವೆ ಧರ್ಮಕ್ಕೆ ಆಧಾರ ಸ್ವರೂಪವಾಗಿದೆ. ದಯೆಯಿಲ್ಲದ ಧರ್ಮವನ್ನು ಕಲ್ಪಿಸಿಕೊಳ್ಳುವುದೂ ಸಾಧ್ಯವಿಲ್ಲ ಎಂದು ಸಾಹಿತಿ ಶರಣಬಸಯ್ಯ ಹಿರೇಮಠ ಹೇಳಿದರು.
ಪಟ್ಟಣದ ಹಿರೇಮಠ ಸಂಸ್ಥಾನದಲ್ಲಿ ಶುಕ್ರವಾರ ನಡೆದ ಶಿವಾನುಭವ ಚಿಂತನದಲ್ಲಿ ಉಪನ್ಯಾಸ ನೀಡಿದ ಅವರು ದಯೆ ಇಲ್ಲದ ಧರ್ಮವು ಏನು ತಾನೆ ಮಾಡಬಲ್ಲುದು. ಇತರರ ದುಃಖಗಳನ್ನು ಕಂಡು ಸಂತಸಪಡುವುದು ಮನಸ್ಸಿನ ಮಾಲಿನ್ಯದ ಸಂಕೇತವಾಗಿದೆ. ಈ ರೀತಿಯ ಮನಸ್ಥಿತಿಯಿಂದ ಮಾನಸಿಕ ನೆಮ್ಮದಿ ಹೊಂದಲು ಸಾಧ್ಯವಿಲ್ಲ. ಇತರರ ದುಃಖಗಳನ್ನು ಕಂಡು ಮನಸ್ಸು ಕರಗಬೇಕು ಮತ್ತು ಇತರರ ಸುಖವನ್ನು ಕಂಡು ಮನಸ್ಸು ಪ್ರಸನ್ನವಾಗಬೇಕು. ಮನುಷ್ಯನಾದ ಬಳಿಕ ಸಂಕುಚಿತ ಮನೋಭಾವನೆ ದೂರ ಮಾಡಬೇಕು. ವೈರತ್ವವನ್ನು ಸಾಧಿಸದೇ ಜೀವಿಗಳಲ್ಲಿ ದಯಾಭಾವವುಳ್ಳವರಾಗಬೇಕು ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಅಟಲ್ ಜೀ ಜನಸ್ನೇಹಿ ದಶಮಾನೋತ್ಸವದಲ್ಲಿ ಪುರಸ್ಕøತರಾದ ಪಟ್ಟಣದ ನಾಡ ಕಛೇರಿಯ ಕಂಪ್ಯೂಟರ್ ಅಪರೇಟರ್ ಶಿವಾನಂದ ದಿಂಡವಾರ ರವರನ್ನು ಸನ್ಮಾನಿಸಿ ಗೌರವಿಸಲಾಯಿತು ಹಾಗೂ ಶ್ರೀ ಮಠದಿಂದ 2023 ರ ದಿನದರ್ಶಿಕೆ ಬಿಡುಗಡೆಯಾಯಿತು. ಹಿರೇಮಠದ ಪೀಠಾದಿಪತಿ ಚನ್ನಬಸವ ಶಿವಾಚಾರ್ಯರು ಆಶೀರ್ವಚನ ನೀಡಿದರು. ಕಾರ್ಯಕ್ರಮವನ್ನು ಹಳ್ಳೆಪ್ಪಗೌಡ ಪಾಟೀಲ್ ಪರಸನಳ್ಳಿ ಉದ್ಘಾಟಿಸಿದರು, ರಮೇಶ ಸೊನ್ನದ್, ಗುಡದಯ್ಯ ದಾವಣಗೇರಿ ಅತಿಥಿಗಳಾಗಿ ಭಾಗವಹಿಸಿದ್ದರು. ಅನ್ನದಾತ ಟ್ರೇಡಿಂಗ್ ವತಿಯಿಂದ ಭಕ್ತಜನಕೆ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಸೋಮಶೇಖರ ಯಾಳಗಿ, ಹಳ್ಳೇರಾವ್ ಕುಲ್ಕರ್ಣಿ, ಯಮುನೇಶ ಹೆಗ್ಗಣದೊಡ್ಡಿ, ವಾದಿರಾಜ್ ಕುಲ್ಕರ್ಣಿ ಸಂಗೀತ ಸೇವೆ ನೀಡಿದರು

ಪ್ರಮುಖರಾದ ಡಾ. ಎಜಿ ಹಿರೇಮಠ, ನರಸಿಂಹ ವಡ್ಡೆ, ಡಾ. ಯಂಕನಗೌಡ ಪಾಟೀಲ್, ನಿಜಗುಣಿ ಬಡಿಗೇತ, ಹಣಮಂತ ಶಹಾಪೂರ್, ಶರಣಪ್ಪ ಕೀಲಿ, ಸಿದ್ದಣ್ಣ ಆಲಗೂರ, ಅಭಿಷೇಕ ಪಾಟೀಲ್ ಸೇರಿದಂತೆ ಸತ್ಸಂಗದ ಬಳಗ ಭಾಗವಹಿಸಿದ್ದರು