ದಯವಿಟ್ಟು ಮಗು ಪೋಟೋ ತೆಗೆಯಬೇಡಿ ವಿರುಷ್ಕಾ ದಂಪತಿ ಮನವಿ

ಮುಂಬಯಿ,ಜ.೧೪-ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಹಾಗೂ ಬಾಲಿವುಡ್ ನಟಿ, ನಿರ್ಮಾಪಕಿ ಅನುಷ್ಕಾ ಶರ್ಮಾ ದಂಪತಿ ತಮ್ಮ ಮಗುವಿನ ಫೋಟೋ ತೆಗೆಯಬೇಡಿ ಎಂದು ಮಾಧ್ಯಮಗಳಿಗೆ ಮನವಿ ಮಾಡಿಕೊಂಡಿದ್ದಾರೆ.
ವಿರಾಟ್ ಅನುಷ್ಕಾ ದಂಪತಿಗೆ ಕಳೆದ ಜ.೧೧ರಂದು ಹೆಣ್ಣುಮಗು ಜನಿಸಿದ್ದು ಮಗುವಿನ ತಂದೆಯಾಗಿರುವ ವಿಚಾರವನ್ನು ಸ್ವತಃ ವಿರಾಟ್ ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗಪಡಿಸಿದ್ದರು. ತಾರಾ ದಂಪತಿಯಾಗಿರುವ ಕಾರಣ ಸಹಜವಾಗಿಯೇ ಈ ಸುದ್ದಿ ಹೆಚ್ಚು ಪ್ರಚಾರ ಪಡೆದಿತ್ತು.
ಆದರೆ ವಿರುಷ್ಕಾ ದಂಪತಿ ಮಗುವಿನ ಕುರಿತಂತೆ ವಿಶೇಷ ಮನವಿಯೊಂದನ್ನು ಮಾಧ್ಯಮಗಳಿಗೆ ಮಾಡಿಕೊಂಡು ನಮ್ಮ ಮಗುವಿನ ಖಾಸಗಿತನವನ್ನು ರಕ್ಷಿಸಬೇಕಿದೆ, ಅದಕ್ಕಾಗಿ ನಿಮ್ಮ ಸಹಕಾರ ಬೇಕಿದೆ. ಮಗುವಿನ ಫೋಟೋ ತೆಗೆಯಬೇಡಿ, ಸೂಕ್ತ ಸಂದರ್ಭದಲ್ಲಿ ನಾವೇ ಅದನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ ಎಂದು ಕೇಳಿಕೊಂಡಿದ್ದಾರೆ.
ಸೆಲೆಬ್ರಿಟಿಗಳು ಹೋದಲ್ಲಿ ಬಂದಲ್ಲಿ ಬೆಂಬಿಡದೆ ಕಾಡುವ ಪಾಪರಾಝಿಗಳಿಗೆ (ಫೋಟೊಗ್ರಾಫರ್‌ಗಳು) ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ವಿಶೇಷ ಮನವಿಯೊಂದನ್ನು ಮಾಡಿಕೊಂಡಿದ್ದಾರೆ.