ದಮ್ಮೂರಿನಲ್ಲಿ ವಿದ್ಯುತ್ ಹರಿದು ವ್ಯಕ್ತಿ ಸಾವು


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಆ.31: ಜಿಲ್ಲೆಯ ಕುರುಗೋಡು ತಾಲೂಕಿನ ದಮ್ಮೂರು ಗ್ರಾಮದಲ್ಲಿ ಇಂದು ಬೆಳಿಗ್ಗೆ ವ್ಯಕ್ತಿಯೋರ್ವ ವಿದ್ಯುತ್ ಕಂಬ ಏರಿ ದುರಸ್ಥಿ ಮಾಡುವಾಗ ವಿದ್ಯುತ್ ಪ್ರವಹಿಸಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಜೆಸ್ಕಾಂ ಸಿಬ್ಬಂದಿ ಗಮನಕ್ಕೆ ಬಾರದೆ ದಮ್ಮೂರು ಗ್ರಾಮದ ವ್ಯಕ್ತಿ ವೀರಭದ್ರ(27) ಎನ್ನಯವಾತ ಬೆಳಿಗ್ಗೆ 6 ಗಂಟೆ ಸಮಯದಲ್ಲಿ ತಮ್ಮ ಮಾವನ ಹೊಲದಲ್ಲಿನ ವಿದ್ಯುತ್ ಕಂಬ ಏರಿ ಲೈನ್ ಬದಲಾವಣೆ ಮಾಡಲು ಹೋಗಿದ್ದನಂತೆ. ಇದೇ ಸಮಯದಲ್ಲಿ ವಿದ್ಯುತ್ ಹರಿದು ಆತ ಕಂಬದ ಮೇಲೆಯೇ ಜೀವ ಬಿಟ್ಟಿದ್ದಾನೆ.
ಅನಧಿಕೃತವಾಗಿ ಹೊಲದ ನೀರಾವರಿ ಪಂಪ್ ಸೆಟ್ ಗೆ  ವಿದ್ಯುತ್ ಪಡೆಯುವ ಪ್ರಯತ್ನವೇ ಈ ಅವಘಡಕ್ಕೆ ಕಾರಣ ಎನ್ನಲಾಗುತ್ತಿದೆ. ಈ ಬಗ್ಗೆ ಕುರುಗೋಡು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವ್ಯಕ್ತಿ ಹೆಣವಾಗಿ ವಿದ್ಯುತ್ ಕಂಬದ ಮೇಲೆ ಜೋತಾಡುತ್ತಿದ್ದುದನ್ನು ನೋಡಿ ಸಂಬಂಧಿಕರು, ಕುಟುಂಬದವರ ದುಖಃ ಮಡುಗಟ್ಟಿತ್ತು.