ದಬದಭಿ ಪ್ರವಾಸ ತಾಣ ಅಭಿವೃದ್ದಿಗೆ ಒತ್ತು: ಬಸಣ್ಣಗೌಡ

ಗುರುಮಠಕಲ್:ಜ.1: ನಜಾರಪೂರ ಗ್ರಾಮದಲ್ಲಿ ಇರುವ ಮಿನಿ ಜೋಗಜಲಪಾತ ಎಂದೇ ಪ್ರಖ್ಯಾತಗೊಂಡಿರುವ ದಬದಭಿ ಜಲಪಾತ ತಾಣವನ್ನು ಅಭಿವೃದ್ದಿಗೊಳಿಸಿ ಪ್ರವಾಸಿಗರನ್ನು ಆಕರ್ಷಿಸುವಂತೆ ಅಂದಚಂದ ಕಾಮಗಾರಿಗಳನ್ನು ಮಾಡಲು ಪ್ರಮಾಣೀಕವಾಗಿ ಪ್ರಯತ್ನಿಸುತ್ತೇನೆ ಎಂದು ಯಾದಗಿರಿ ಜಿಲ್ಲಾ ಪಂಚಾಯತ ಅಧ್ಯಕ್ಷ ಬಸಣ್ಣಗೌಡ ಪಾಟೀಲ್, ಯಡಿಯಾಪೂರ್ ಅವರು ತಿಳಿಸಿದರು.

ತಾಲೂಕಿನ ನಜಾರಪೂರ್ ಗ್ರಾಮದಲ್ಲಿರುವ ದಭದಭಿ ಪ್ರವಾಸ ತಾಣಕ್ಕೆ ತನ್ನ ನೇತೃತ್ವದಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷರು ಜತೆಗೆ ಗುರುವಾರ ಬೇಟಿ ನೀಡಿ ವೀಕ್ಷಿಸಿ, ರಸ್ತೆ ಸಂಪರ್ಕ, ವಿದ್ಯುತ್ ವ್ಯವಸ್ಥೆ ಮತ್ತು ಕಂಪೌಂಡ್ ಕಟ್ಟಲು ಹಾಗೂ ಮೂಲಭೂತ ಸೌಲಭ್ಯಗಳು ಕಲ್ಪಿಸಲು ಅಂದಾಜು 6 ಕೋಟಿ ರೂಪಾಯಿಗಳ ಅನುದಾನ ಬೇಕಾಗುತ್ತದೆ. ಇದರಿಂದ ಜ.4ರಂದು ಜಿಲ್ಲಾ ಪಂಚಾಯತಿಯಲ್ಲಿ ಸಾಮಾನ್ಯ ಸಭೆ ನಡೆಯಲಿದ್ದು, ಜಿಲ್ಲಾಧಿಕಾರಿ, ಕ್ಷೇತ್ರದ ಶಾಸಕರು ಮತ್ತು ಸಂಸದರ ಗಮನಕ್ಕೆ ತಂದು ಚರ್ಚಿಸಿ ಅಭಿವೃದ್ದಿಗೆ ಹೆಚ್ಚಿನ ಒತ್ತು ನೀಡುತ್ತೇನೆ ಎಂದು ಅವರು ಭರವಸೆ ನೀಡಿದರು.

ಜಿಲ್ಲಾ ಪಂಚಾಯತಿ ಸದಸ್ಯೆ ರಾಜಶ್ರೀ ರಘುನಾಥರೆಡ್ಡಿ ನಜಾರಪೂರ ಅವರು ಜಿಲ್ಲಾ ಪಂಚಾಯತಿಯಲ್ಲಿ ಚರ್ಚಿಸಿದ ಹಿನ್ನಲೆಯಲ್ಲಿ ಸ್ಥಳವನ್ನು ವೀಕ್ಷಿಸಲು ನಮ್ಮ ಸ್ಥಾಯಿ ಸಮಿತಿ ಅಧ್ಯಕ್ಷರು ಜತೆಗೆ ಬಂದಿದ್ದೇವೆ. ಇನ್ನು ನಾಲ್ಕು ತಿಂಗಳಲ್ಲಿ ಅಭಿವೃದ್ದಿ ಕಾಮಗಾರಿ ಅನುದಾನ ಬಿಡುಗಡೆ ಮಾಡಲು ಶತಪ್ರಯತ್ನಿಸುತ್ತೇನೆ ಎಂದರು.

ಮಾಜಿ ಸಚಿವ ಪ್ರಿಯಾಂಕ ಖರ್ಗೆ 1.47 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಅದರ ಜೊತೆಗೆ ಇನ್ನಷ್ಟು ಅನುದಾನ ಅನುಮೊದನೆಗೊಳಿಸಿ ದಬದಭಿಯನ್ನು ಉತ್ತಮ ಪ್ರವಾಸ ತಾಣವಾಗಿ ಮಾರ್ಪಡಿಸಲು ಪ್ರವಾಸ ಇಲಾಖೆ, ಅರಣ್ಯ ಇಲಾಖೆ, ಕೆಇಬಿ ಮತ್ತು ಪಿಡಬ್ಲುಡಿ ಮುಂತಾದ ಇಲಾಖೆಯವರ ಸಹಾಯ ಪಡೆಯುತ್ತೇನೆ ಎಂದು ಅವರು ವಿವರಿಸಿದರು.

ಇದೇ ಸಂದರ್ಭದಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರಾದ ರಾಜಶ್ರೀ ರಘುನಾಥರೆಡ್ಡಿ ನಜಾರಪೂರ್, ಆರೋಗ್ಯ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ಅಮರದೀಪ್, ಆಗ್ರಿಕಲ್ಚರಲ್ ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದಲಿಂಗಪ್ಪ ಪುಟುಗಿ,ಮಾಜಿ ಎಪಿಎಂಸಿ ಅಧ್ಯಕ್ಷ ಭೀಮಣಗೌಡ ಕ್ಯಾತನಾಳ್, ಯಾದಗಿರಿಯ ಡಿಎಫ್‍ಓ ಎಂ.ಎಲ್.ಭಾವಿಕಟ್ಟಿ, ನರಸರೆಡ್ಡಿ ಗಡ್ಡೆಸೂಗೂರ್, ಲಕ್ಷ್ಮೀರೆಡ್ಡಿ,ಮಲ್ಲಿಕಾರ್ಜುನ ಅಡಕಿ, ಶರಣು ಸೇರಿದಂತೆ ಅರಣ್ಯ ಇಲಾಖೆ ,ಪ್ರವಾಸ ಇಲಾಖೆ ಹಾಗೂ ಪಿಡಬ್ಲುಡಿ ಅಧಿಕಾರಿಗಳು ಹಾಗೂ ಗ್ರಾಮಸ್ಥರು ಇದ್ದರು.