ದನಗಳ ಅಕ್ರಮ  ಸಾಗಾಟ.
 20ದನಗಳ ವಶ, ಲಾರಿ ಕಾರು ಜಪ್ತಿ ನಾಲ್ವರ ಬಂಧನ.


ಸಂಜೆವಾಣಿ ವಾರ್ತೆ
ಕೂಡ್ಲಿಗಿ.ಜ. 14 :- ಅಕ್ರಮವಾಗಿ ದನಗಳನ್ನು ಕೇರಳಕ್ಕೆ ಸಾಗಾಟಮಾಡಲು ಲಾರಿಯಲ್ಲಿ ತುಂಬುತ್ತಿರುವಾಗ ಮಾಹಿತಿ ಪಡೆದುಕೊಂಡ ಹೊಸಹಳ್ಳಿ ಪೊಲೀಸರು ದಾಳಿ ನಡೆಸಿ 20ದನಗಳನ್ನು ವಶಕ್ಕೆ ಪಡೆದುಕೊಂಡು ದನಗಳ ಸಾಗಾಟಕ್ಕೆ ಬಳಸಿದ್ದ ಲಾರಿ ಹಾಗೂ ಕಾರೊಂದನ್ನು ಜಪ್ತಿಮಾಡಿ ನಾಲ್ವರು ಆರೋಪಿಗಳನ್ನು ಬಂಧಿಸಿರುವ ಘಟನೆ ತಾಲೂಕಿನ ಬಣವಿಕಲ್ ಗ್ರಾಮದ ಸಮೀಪ  ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಜರುಗಿದೆ.
ಕೇರಳದ ಪೆರಂದೂರ್ ಎರ್ನಾಕುಲಂ ನ ಅಲಿಮೋನ್ ಸಿಬಿ, ಮುಜೀಬ್ ಹಾಗೂ ಕೂಡ್ಲಿಗಿ ತಾಲೂಕಿನ ಮಹಮದ್ ಹುಸೇನ್ ಹಾಗೂ ಈತನ ಮಗ ರಹಿಮತ್ ಉಲ್ಲಾ ಬಂಧಿತ ನಾಲ್ವರು ಆರೋಪಿಗಳಾಗಿದ್ದಾರೆ ಇವರನ್ನು  ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿರುವುದಾಗಿ ತಿಳಿದಿದೆ
ಈ ಆರೋಪಿಗಳು ಕಳೆದ ರಾತ್ರಿ 11 ಗಂಟೆ ಸುಮಾರಿಗೆ ಬಣವಿಕಲ್ ಗ್ರಾಮದ ಹೊರವಲಯದಲ್ಲಿ ಅಕ್ರಮವಾಗಿ ದನಗಳನ್ನು ಕೇರಳಕ್ಕೆ ಸಾಗಾಟಮಾಡಲು ಮುಂದಾಗಿರುವ ಬಗ್ಗೆ ಖಚಿತ ಮಾಹಿತಿ ಆಧಾರಿಸಿದ ಹೊಸಹಳ್ಳಿ ಪಿಎಸ್ಐ ಎರಿಯಪ್ಪ ಅಂಗಡಿ ಅವರು ಕೂಡ್ಲಿಗಿ ಡಿವೈಎಸ್ ಪಿ, ಕೊಟ್ಟೂರು ಸಿಪಿಐ ಮಾರ್ಗದರ್ಶನದಲ್ಲಿ ತಮ್ಮ ಸಿಬ್ಬಂದಿಯೊಂದಿಗೆ ದಾಳಿ ನಡೆಸಲಾಗಿ   ಕಾರ್ ಕೆಎಲ್ 07, ಸಿಆರ್ 7038 ನಲ್ಲಿ ಬಂದಿದ್ದ ಇಬ್ಬರು ಕೇರಳಿಗರು  ಹಾಗೂ ಬಣವಿಕಲ್ ಗ್ರಾಮದ ಇಬ್ಬರು  ಅಕ್ರಮದಂದೆಯಲ್ಲಿ ತೊಡಗಿ  ದನಗಳನ್ನುಅಕ್ರಮವಾಗಿ  ಸಾಗಾಟ ಮಾಡಲು ಮುಂದಾದಾಗ ಬಳಸಿದ್ದ  ಕೆಎ53, 9175ನ ಲಾರಿಯಲ್ಲಿ 20ದನಗಳು ಇದ್ದು ದಾಳಿ ನಡೆಸಿದ ಪೊಲೀಸರು ಕಾರು – ಲಾರಿ   ಜಪ್ತಿ ಮಾಡಿ ನಾಲ್ವರನ್ನು ಬಂಧಿಸಿ ಅದರಲ್ಲಿದ್ದ 20 ದನಗಳನ್ನು ವಶಕ್ಕೆ ಪಡೆದುಕೊಂಡು ಇಂದು ಅವುಗಳನ್ನು ಹೊಸಪೇಟೆ ಗೋಶಾಲೆಗೆ ಕಳುಹಿಸಲಾಗಿದೆ ಎಂದು ತಿಳಿದಿದೆ.ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.