ದತ್ತ ಪೀಠದಿಂದ ವಿಶೇಷಚೇತನರಿಗೆ ಉಪಕರಣ ವಿತರಣೆ

ಸಂಜೆವಾಣಿ ನ್ಯೂಸ್
ಮೈಸೂರು.ಮೇ.26:- ಅವಧೂತ ದತ್ತಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರು 82ನೇ ವರ್ಧಂತಿ ಪ್ರಯುಕ್ತ ಶನಿವಾರ ವಿಶೇಷಚೇತನರಿಗೆ ಅಗತ್ಯ ಉಪಕರಣಗಳನ್ನು ವಿತರಿಸಲಾಯಿತು.
ದತ್ತಪೀಠದ ನಾದಮಂಟಪದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿಶೇಷಚೇತನರ ಆರೋಗ್ಯ ವಿಚಾರಿಸಿ, ಅವರುಗಳಿಗೆ ಅಗತ್ಯವಿರುವ ಸಲಕರಣೆಗಳನ್ನು ವಿತರಿಸಿದರು. ಕಾರ್ಯಕ್ರಮದಲ್ಲಿ 40 ಗಾಲಿಕುರ್ಚಿ , 8 ವಾಕರ್ಸ್,
10 ಕ್ರಚರ್ಸ್, 5 ಸ್ಟಿಕ್ಗಳು ಸೇರಿದಂತೆ ಒಟ್ಟು 82 ಮಂದಿಗೆ ವಿವಿಧ ಉಪಕರಣಗಳನ್ನು ಶ್ರೀಗಳು ವಿತರಣೆ ಮಾಡಿದರು.
ಈ ವೇಳೆ ಮಾತನಾಡಿದ ಸಚ್ಚಿದಾನಂದ ಸ್ವಾಮೀಜಿ, ವಿಶೇಷಚೇತನರನ್ನು ನೋಡಿಕೊಳ್ಳುವುದು ಪುಣ್ಯದ ಕೆಲಸವಾಗಿದ್ದು, ಅವರ ಸೇವೆಯನ್ನು ಎಷ್ಟು ಶ್ಲಾಘಿಸಿದರೂ ಸಾಲದು. ಅವರನ್ನು ಇನ್ನೂ ಚೆನ್ನಾಗಿ ನೋಡಿಕೊಳ್ಳುವ ಶಕ್ತಿಯನ್ನು ದೇವರು ನೀಡಲಿ ಎಂದು ಆಶೀರ್ವದಿಸಿದರು.
ಇದಕ್ಕೂ ಮುನ್ನ ನಾದಮಂಟಪದ 26ನೇ ವಾರ್ಷಿಕೋತ್ಸವ ಮತ್ತು ಗಣಪತಿ ಸಚ್ಚಿದಾನಂದ ಸ್ವಾಮೀಜಿ ಅವರ 82ನೇ ಜನ್ಮದಿನೋತ್ಸವದ ಪ್ರಯುಕ್ತ ಅವಧೂತ ದತ್ತ ಪೀಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಸ್ವಾಮೀಜಿ ಅವರು ಶ್ರೀ ಚಕ್ರಪೂಜೆ ಮತ್ತು ಹೋಮ ನೆರವೇರಿಸಿ, ತಾಯಿ ರಾಜರಾಜೇಶ್ವರಿ ದೇವಿ ಸೇರಿದಂತೆ ಎಲ್ಲ ದೇವರುಗಳಿಗೆ ಪೂಜೆ ಸಲ್ಲಿಸಿ ಹೋಮ ಕಾರ್ಯದಲ್ಲಿ ಪಾಲ್ಗೊಂಡರು. ನಾದಮಂಟಪದಲ್ಲಿ ಲೋಕಕಲ್ಯಾರ್ಥವಾಗಿ ದತ್ತ ವೆಂಕಟೇಶ್ವರ ಸ್ವಾಮಿಯ ಶಾಂತಿ ಕಲ್ಯಾಣ ನೆರವೇರಿತು.
ಈ ಸಂದರ್ಭದಲ್ಲಿ ಅವಧೂತ ದತ್ತಪೀಠದ ಕಿರಿಯ ಶ್ರೀಗಳಾದ ದತ್ತ ವಿಜಯಾನಂದ ಸ್ವಾಮೀಜಿ ಹಾಗೂ ಇನ್ನಿತರರು ಪೂಜಾ ಕಾರ್ಯದಲ್ಲಿ ಪಾಲ್ಗೊಂಡರು.