ದತ್ತ ಜಯಂತಿ ಕಾಫಿನಾಡು ಕೇಸರಿ ಮಯ

ಚಿಕ್ಕಮಗಳೂರು,ಡಿ,೨೬- ದತ್ತ ಜಯಂತಿಯ ಹಿನ್ನೆಲೆ ವಿಶ್ವ ಹಿಂದೂ ಪರಿಷತ್ ಹಾಗೂ ಭಜರಂಗದಳ ನೇತೃತ್ವದಲ್ಲಿ ನಗರದಲ್ಲಿ ನಡೆಸಿದ ಬೃಹತ್ ಶೋಭಾಯಾತ್ರೆ ೨೫ ಸಾವಿರಕ್ಕೂ ಅಧಿಕ ಭಕ್ತರು ಭಾಗಿಯಾಗಿದ್ದರು. ಈ ಹಿನ್ನೆಲೆಯಲ್ಲಿ ಕಾಫಿನಾಡು ಚಿಕ್ಕಮಗಳೂರು ಅಕ್ಷರಶಃ ಕೇಸರಿ ಮಯವಾಗಿತ್ತು. ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಾತ್ರೇಯನಿಗೆ ವಿಶೇಷ ಪೂಜೆ ಸಲ್ಲಿಸಿ ಶೋಭಾಯಾತ್ರೆ ಆರಂಭಗೊಂಡಿತು. ಬಸವನಹಳ್ಳಿ ಮುಖ್ಯ ರಸ್ತೆ, ಹನುಮಂತಪ್ಪ ವೃತ್ತ, ಎಂ.ಜಿ.ರಸ್ತೆ ಮೂಲಕ ಸಾಗಿದ ಶೋಭಾಯಾತ್ರೆ ಆಜಾದ್ ವೃತ್ತದಲ್ಲಿ ಕೊನೆಗೊಂಡಿತು.
ಶೋಭಾಯಾತ್ರೆಯಲ್ಲಿ ೨೦ ರಿಂದ ೨೫ ಸಾವಿರ ದತ್ತ ಭಕ್ತರು ಪಾಲ್ಗೊಂಡಿದ್ದರು ವೀರಭದ್ರ ವೇಷಧಾರಿಗಳ ಜೊತೆ ವೀರಗಾಸೆ ಕತ್ತಿ ಹಿಡಿದು ಮಾಡಿದ ನೃತ್ಯ ಎಲ್ಲರ ಗಮನ ಸೆಳೆಯಿತು. ಮೂರು ಡಿಜೆ ಶಬ್ಧಕ್ಕೆ ಯುವಜನತೆ ಯುವಕ ಯುವತಿಯರು ಎನ್ನದೆ ಎಲ್ಲರೂ ಒಂದೆಡೆ ಸೇರಿ ಮನಸ್ಸೋ ಇಚ್ಛೆ ಕುಣಿದು ಕುಪ್ಪಳಿಸಿದರು. ಈ ಮನಮೋಹಕ ದೃಶ್ಯ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಈ ಮಧ್ಯೆ ದತ್ತಪೀಠವನ್ನ ಹಿಂದೂಗಳಿಗೆ ವಹಿಸಿಕೊಡಬೇಕು ಎಂಬ ಘೋಷಣೆ ಮೊಳಗಿತು. ಭಜನೆ, ವೀರಗಾಸೆ ಶೋಭಾಯಾತ್ರೆಗೆ ಮತ್ತಷ್ಟು ಮೆರಗು ತಂದವು. ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷತ್‌ನ ಸಾವಿರಾರು ಕಾರ್ಯಕರ್ತರು ಬ್ಯಾಂಡ್ ವಾದ್ಯಕ್ಕೆ ಹೆಜ್ಜೆ ಹಾಕಿದರು, ಡಿಜೆಯ ಮ್ಯೂಸಿಕ್‌ಗೆ ಯುವಜನತೆ ನರ್ತಸಿದರು. ಯಾತ್ರೆಯಲ್ಲಿ ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಭಾವಚಿತ್ರದ ಬ್ಯಾನರ್ ರಾರಾಜಿಸುತ್ತಿತ್ತು. ಶೋಭಾಯಾತ್ರೆ ಸಾಗೋ ಮಾರ್ಗದುದ್ದಕ್ಕೂ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿತ್ತು. ಹೆಜ್ಜೆಗೊಬ್ಬರಂತೆ ೩ ಸಾವಿರ ಪೊಲೀಸರು ಶೋಭಾಯಾತ್ರೆ ಮೇಲೆ ಹದ್ದಿನ ಕಣ್ಣಿಟ್ಟಿದ್ದರು.
ದತ್ತಜಯಂತಿಯ ೩ನೇ ದಿನವಾದ ಇಂದು ರಾಜ್ಯದ ೨೫ ಸಾವಿರಕ್ಕೂ ಅಧಿಕ ದತ್ತಭಕ್ತರು ದತ್ತಪೀಠಕ್ಕೆ ತೆರಳಲಿದ್ದಾರೆ. ಮುಂಜಾನೆಯಿಂದಲೇ ದತ್ತಭಕ್ತರು ದತ್ತಪೀಠಕ್ಕೆ ತೆರಳಿ ಹೋಮ, ಹವನ ನಡೆಸುವುದರ ಜೊತೆಗೆ ಗುಹೆಯಲ್ಲಿನ ದತ್ತಪಾದುಕೆ ದರ್ಶನ ಮಾಡಲಿದ್ದಾರೆ. ಈ ಮಧ್ಯೆ ನಾಗೇನಹಳ್ಳಿ ದರ್ಗಾದಲ್ಲಿ ದತ್ತ ಜಯಂತಿ ಆಚರಿಸುತ್ತೇವೆ ಎಂದು ಹೇಳಿದ ಶ್ರೀರಾಮ ಸೇನೆಯ ನಡೆಯಾಗಿದೆ. ಈ ಮೂಲಕ ಮೂರು ದಿನಗಳ ಕಾಲ ನಡೆದ ದತ್ತಜಯಂತಿ ಸಮಾಪನಗೊಳ್ಳಲಿದೆ.