ದತ್ತು ಮಗನ ಕೊಲೆ ತಾಯಿ ಸೇರಿ ನಾಲ್ವರು ಸೆರೆ

ಬಾಗಲಕೋಟೆ, ಆ.೬- ಆಸ್ತಿಯನ್ನು ಕೇಳಿದ ಎಂಬ ಕಾರಣಕ್ಕೆ ಆಕ್ರೋಶಗೊಂಡು ದತ್ತು ಮಗನ ಎದೆ ಮೇಲೆ ಕಲ್ಲು ಎತ್ತಿ ಹಾಕಿ, ಕತ್ತು ಮರ್ಮಾಂಗ ಹಿಸುಕಿ ಪಾಪಿ ತಾಯಿಯೊಬ್ಬಳು ಕೊಲೆಗೈದ ದಾರುಣ ಘಟನೆ ಮುಧೋಳ ತಾಲೂಕಿನ ನಾಗಣಾಪುರದಲ್ಲಿ ನಡೆದಿದೆ. ಮೃತ ದತ್ತು ಮಗನನ್ನು ವಸಂತ ಮಾಲಿಂಗಪ್ಪ ಕುರಬಳ್ಳಿ(೨೪) ಎಂದು ಗುರುತಿಸಲಾಗಿದೆ.
ಮೊದಲು ತಾಯಿ ನನ್ನ ಮಗ ನಾಪತ್ತೆಯಾಗಿದ್ದಾನೆ ಎಂದು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು. ಈ ಸಂಬಂಧ ಪೊಲೀಸರು ತನಿಖೆ ನಡೆಸಿದಾಗ ಸತ್ಯ ಬೆಳಕಿಗೆ ಬಂದಿದೆ.
ದತ್ತು ಮಗ ಶವವಾಗಿ ಚೀಲದಲ್ಲಿ ಪತ್ತೆಯಾಗಿದ್ದ. ಕೂಡಲೇ ಪೊಲೀಸರು ತಾಯಿಯನ್ನು ವಿಚಾರಣೆ ನಡೆಸಿದಾಗ ಆಗ ಆಕೆ ಅನೈತಿಕ ಸಂಬಂಧಕ್ಕೆ ಅಡ್ಡಿ ಹಾಗೂ ಆಸ್ತಿ ಕೇಳಿದ್ದಕ್ಕೆ ಅಳಿಯಂದಿರು, ಪ್ರಿಯಕರನ ಜೊತೆ ಸೇರಿ ಕೊಲೆ ಮಾಡಿಸಿರುವುದಾಗಿ ಬಾಯ್ಬಿಟ್ಟಿದ್ದಾಳೆ.
ಕಳೆದ ಜೂ. ೧೯ ರಂದು ಮುಂಜಾನೆ ೪ ಗಂಟೆಗೆ ತಾಯಿ ಕಮಲವ್ವ, ಅಳಿಯಂದಿರಾದ ಭೀಮಪ್ಪ ಮಳಲಿ, ಸಿಂಧೂರ ಬೀರಣ್ಣ ಹಾಗೂ ಪ್ರಿಯಕರ ನಿಂಗಪ್ಪ ಸೇರಿ ವಸಂತನ ಎದೆ ಮೇಲೆ ಕಲ್ಲು ಎತ್ತಿ ಹಾಕಿ ನಂತರ ಕತ್ತು ಹಾಗೂ ಮರ್ಮಾಂಗವನ್ನು ಹಿಸುಕಿ ಕೊಲೆ ಮಾಡಿ ಶವವನ್ನು ಚೀಲದಲ್ಲಿ ತುಂಬಿದ್ದಾರೆ.
ಶವ ತುಂಬಿದ ಚೀಲವನ್ನು ಬೆಳಗಾವಿ ಜಿಲ್ಲೆ ಸವದತ್ತಿ ತಾಲೂಕಿನ ಮುರಗೋಡ ಪೊಲೀಸ್ ಠಾಣಾ ವ್ಯಾಪ್ತಿಯ ದಾಸನಾಳ ಸೀಮೆಯ ಕಾಲುವೆಯಲ್ಲಿ ಬಿಸಾಕಿದ್ದರು.
ಇತ್ತ ಜುಲೈ ೬ ರಂದು ತಾಯಿ ಕಮಲವ್ವ, ಮಗ ನಾಪತ್ತೆಯಾದ್ದಾನೆ ಎಂದು ಲೋಕಾಪುರ ಠಾಣೆಯಲ್ಲಿ ದೂರು ನೀಡಿದ್ದರು.
ಪೊಲೀಸ್ ತನಿಖೆ ವೇಳೆ ತಾಯಿ ಹಾಗೂ ಅಳಿಯಂದಿರ ಬಣ್ಣ ಬಯಲಾಗಿದೆ. ವಯಸ್ಸಲ್ಲದ ವಯಸ್ಸಲ್ಲಿ ಕಮಲವ್ವಳ ಅನೈತಿಕ ಸಂಬಂಧ ಬೆಳೆಸಿದ್ದಾಳೆ. ಮಗಳ ಮಾವನ(ಮಗಳ ಗಂಡನ ತಂದೆ) ನಿಂಗಪ್ಪ ಜೊತೆಗೆ ಕಮಲವ್ವ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಳು. ಸದ್ಯ ಆರೋಪಿಗಳನ್ನು ಲೋಕಾಪುರ ಠಾಣೆ ಪೊಲೀಸರು ಬಂಧಿಸಿದ್ದಾರೆ.