
ರಾಯಚೂರು,ಏ.೦೨- ಸಾಹಿತ್ಯವನ್ನು ಗುರುತಿಸುವ ಸಂದರ್ಭದಲ್ಲಿ ಜೈನ್ ಸಾಹಿತ್ಯವನ್ನು, ವಚನ ಸಾಹಿತ್ಯವನ್ನು ಗುರುತಿಸುವ ರೀತಿಯಂತೆ, ದಾಸ ಸಾಹಿತ್ಯವನ್ನು ಸಾಹಿತ್ಯ ಅಂತ ಗುರುತಿಸಲಿಕ್ಕೆ ಚಿಂತಕರು ಹಿಂದೇಟು ಹಾಕಿದ್ದಾರೆ ಎಂದು ಶ್ರೀನಿವಾಸ್ ಸಿರನೂರಕರ್ ಹೇಳಿದರು.
ಅವರು ಇಂದು ನಗರದ ಶ್ರೀ ರಾಘವೇಂದ್ರ ಮಠದಲ್ಲಿ ರಾಯಚೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ಶ್ರೀ ರಾಘವೇಂದ್ರ ಮಠ ರಾಯಚೂರು ಇವರುಗಳ ಸಹಯೋಗದಲ್ಲಿ ನಡೆದ ದಿ. ಜಯಚಾರ್ಯ ಕೊಪ್ಪರ ದತ್ತಿ ಹಾಗೂ ಮಂದಾಕಿನಿ ದತ್ತಿ ಮತ್ತು ದಿ. ಪ್ರಹ್ಲಾದ್ ಜೋಶಿಯವರ ದತ್ತಿ, ಉಪನ್ಯಾಸ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ವಿಶೇಷ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.
ದಾಸ ಸಾಹಿತ್ಯ ಕೀರ್ತನ ಸಾಹಿತ್ಯ ಅಂತ ಪ್ರಾರಂಭವಾಗಿ, ಮಠಮಾನ್ಯಗಳಿಗೆ ಸೀಮಿತವಾಗಿದೆ ಎಂದು ಹೇಳುವ ಕೆಲಸ ಆಗಿದೆ. ಕೆಲ ಕಾಲದ ನಂತರ ಚಿಂತಕರು ದಾಸ ಸಾಹಿತ್ಯದ ಆಯಾಮಗಳನ್ನು ಗುರುತಿಸಿದ್ದಾರೆ ಎಂದರು.
ಆಧುನಿಕ ರಾಜಕೀಯ ಪರಿಭಾಷೆಯಲ್ಲಿ ಸೆಕ್ಯುಲರಿಸಂ ಪದ, ಯಾವ ಪರಿಭಾಷೆಯಾಗಿ ಮೂಡಿದೆ ಎಂದರೆ ಅಲ್ಪಸಂಖ್ಯಾತರನ್ನು ತುಷ್ಟಿಕರಣಕ್ಕೆ ಸೀಮಿತವಾಗಿಸಿದೆ. ಈ ಸೆಕ್ಯುಲರಿಸಂ ಅಂದ್ರೆ, ಮತ ನಿರಪೇಕ್ಷೆತೆ ಆಗಬೇಕು, ಜಾತ್ಯತೀತತೆ ಅಲ್ಲ ಧರ್ಮ ನಿರಪೇಕ್ಷತೆ ಅಲ್ಲ, ಹಿಂದೂ ಧರ್ಮ ಮಾತ್ರ ಮತ ನಿರಪೇಕ್ಷತೆ ಆಗುತ್ತದೆ. ಬೇರೆ ಬೇರೆ ಧರ್ಮಗಳಿಗೆ ಸ್ಥಾಪಕರಿದ್ದಾರೆ.
ಒ ಗ್ರಂಥಗಳು ಇವೆ, ಅವುಗಳೆಲ್ಲ ಮತಗಳಾಗಿವೆ. ಹಿಂದೂ ಎನ್ನುವುದು ಮತ ಅಲ್ಲ ಧರ್ಮ. ಧರ್ಮ ಬೇರೆ ಮತ ಬೇರೆ ಎಂದು ಹೇಳಿದರು. ವಚನಕಾರರು ವ್ಯವಸ್ಥೆಯನ್ನು ಧಿಕ್ಕರಿಸಿ ಪರ್ಯಾಯ ವ್ಯವಸ್ಥೆಗಾಗಿ ಹೋರಾಡಿದರು ಆದರೆ ಹರಿದಾಸರು ಸುಧಾರಣೆಗೆ ನಿಂತರು ಪರವರ್ತನೆಗೆ ಮಾಡಿದರು. ವೈಷ್ಣ ಮತ್ತು ಶೈವ ಪಂಥಗಳ ಮಧ್ಯೆ ಇಂದಿಗೂ ಕೂಡ ಸಂಘರ್ಷ ಇದೆ. ಆದರೆ ವಚನಕಾರರು ಹರಿಯನ್ನು ನೆನಪಿಸಿಲ್ಲ, ದಾಸರು ಶಿವನನ್ನು ಮರೆತಿಲ್ಲ ಎಂದು ಹೇಳಿದರು.
ಈ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಭಾಗವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ರಾಯಚೂರಿನ ಹಿರಿಯ ಸಾಹಿತಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಡಾ. ಜಯಲಕ್ಷ್ಮಿ ಮಂಗಳಮೂರ್ತಿಯವರು ಮಾತನಾಡುತ್ತಾ, ಹಿರಿಯರ ಸ್ಮರಣೆಯನ್ನು ಅವರ ಆದರ್ಶಗಳನ್ನು ನೆನಪಿಸುವಂಥ ಇಂಥ ಕಾರ್ಯಕ್ರಮಗಳು ತುಂಬಾ ಅರ್ಥಪೂರ್ಣವಾದ ಕಾರ್ಯಕ್ರಮಗಳಾಗಿವೆ. ನಮ್ಮ ತಂದೆಯವರಾದ ಜಯಚಾರ್ಯ ಕೊಪ್ಪರವರು ಆದರ್ಶ ವ್ಯಕ್ತಿತ್ವ ಹೊಂದಿದ್ದರು. ಅವರ ಹಾಕಿ ಕೊಟ್ಟ ದಾರಿಯಲ್ಲಿ ನಾವು ಹೋಗುತ್ತಿದ್ದೇವೆ. ಇಂದು ದಾಸ ಸಾಹಿತ್ಯವನ್ನು ಯುವಕರ ಮನದಾಳಕ್ಕೆ ಮುಟ್ಟುವಂತ ಕೆಲಸವನ್ನು ಮಾಡಬೇಕಾಗಿದೆ. ಆ ನಿಟ್ಟಿನಲ್ಲಿ ಸಾಹಿತ್ಯ ಪರಿಷತ್ತು ಉತ್ತಮ ಕೆಲಸ ಮಾಡುತ್ತಿದೆ ಎಂದರು.
ಈ ಸಂದರ್ಭದಲ್ಲಿ ಅಧ್ಯಕ್ಷತೆ ವಹಿಸಿದ್ದ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವೆಂಕಟೇಶ್ ಬೇವಿನಬೆಂಚಿ ಅವರು ಮಾತನಾಡುತ್ತಾ, ವಚನಕಾರರು ಜಾತಿ ಸಾಮರಸ್ಯವನ್ನು ಬೆಸೆಯಲು ತೀವ್ರ ಪ್ರಯತ್ನ ಮಾಡಿದರು. ದಾಸರು ಕೂಡ ಸಮಾಜದ ಹುಳುಕುಗಳನ್ನು ತೋರಿಸಿ ಅದರ ನಡುವೆ ಭಕ್ತಿಯನ್ನು ಹಬ್ಬಿಸಿದರು, ಆಧ್ಯಾತ್ಮಿಕ ಭಕ್ತಿಯನ್ನು ಮೂಡಿಸಿದರು. ಶೈವ ಮತ್ತು ವೈಷ್ಣವ ಪಂಥಗಳು ಸಂಘರ್ಷ ಹಿಂದೆ ಇತ್ತು ಮುಂದೆ ಕೂಡ ಇರುತ್ತದೆ. ನೋಡುವ ದೃಷ್ಟಿ, ಅರಿಯುವ ಮನಸ್ಸು ಒಳ್ಳೆಯದಿದ್ದರೆ ಎಲ್ಲವೂ ಸಮಾನವಾಗಿ ಕಾಣುತ್ತದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ದಿ. ಜಯಚಾರ್ಯ ಕೊಪ್ಪರ ದತ್ತಿ ಪ್ರಶಸ್ತಿಯನ್ನು, ಗುಲ್ಬರ್ಗದ ಹಿರಿಯ ಪತ್ರಕರ್ತರಾದ ಶ್ರೀ ಶ್ರೀನಿವಾಸ್ಕರ್ ಸಿರನೂರಕರ್ ಅವರಿಗೆ ನೀಡಿ ಗೌರವಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಡಿ.ಕೆ ಮುರಳಿ ಅವರು, ದತ್ತಿದಾನಿಗಳಾದ ತ್ರಿವಿಕ್ರಮ ಜೋಶಿ, ಜಿ.ಕಸಾಪ ಸಂಘಟನಾ ಕಾರ್ಯದರ್ಶಿ ನಾಗಪ್ಪ ಹೊರಪ್ಯಾಟಿ, ವೆಂಕಟೇಶ್ ನವಲಿ, ವೇದಿಕೆ ಮೇಲೆ ಇದ್ದರು.
ಈ ಸಂದರ್ಭದಲ್ಲಿ ವೀರ ಹನುಮಾನ, ರೇಖಾ ಬಡಿಗೇರ, ಬಿ.ನರಸಿಂಹರಾವ್ , ವಸುದೇಂದ್ರ ಸಿರವಾರ, ಸುರೇಶ್ ಕಲ್ಲೂರ್, ಜಿ.ಬಿ.ಕುಲಕರ್ಣಿ, ದೇವೇಂದ್ರ ಕಟ್ಟಿಮನಿ, ದೇವೇಂದ್ರಮ್ಮ, ರಾಜ ಶ್ರೀ ಕಲ್ಲೂರಕರ, ಭಾರತಿ ಕುಲಕರ್ಣಿ, ಶ್ರೀನಿವಾಸ ಕುಲಕರ್ಣಿ, ರಮಾ ಕುಲಕರ್ಣಿ, ಸೇರಿದಂತೆ ಸಾಹಿತಿಗಳು ರಾಘವೇಂದ್ರ ಸ್ವಾಮಿಗಳ ಭಕ್ತರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಮುರಳಿದಾರ ಕುಲಕರ್ಣಿ ನಿರೂಪಿಸಿದರು. ವಿಜಯ ರಾಜೇಂದ್ರ ಸ್ವಾಗತಿಸಿದರು. ರಾವುತ ರಾವ್ ಬರೂರ್ ವಂದಿಸಿದರು.