ದತ್ತಿ ಉಪನ್ಯಾಸ ಕಾರ್ಯಕ್ರಮ

(ಸಂಜೆವಾಣಿ ವಾರ್ತೆ)
ಲಕ್ಷ್ಮೇಶ್ವರ,ಜು26: “ಕನ್ನಡ ಭಾಷೆ, ಕನ್ನಡ ಸಂಸ್ಕೃತಿ ಹಾಗೂ ಕನ್ನಡತನವನ್ನು ಶಾಲಾ ಕಾಲೇಜು ಹಂತದಿಂದಲೇ ವಿದ್ಯಾರ್ಥಿಗಳಲ್ಲಿ ಕರಗತವಾಗಿಸಬೇಕು. ಅಂತರ್ಗತಗೊಳಿಸಬೇಕು. ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ತಾಲೂಕ ಘಟಕ ಉತ್ತಮ ಕಾರ್ಯ ಮಾಡುತ್ತಿದೆ” ಎಂದು ತಾಲೂಕ ಪಂಚಾಯತ್ ಮಾಜಿ ಸದಸ್ಯ ಸಿ.ಎಸ್.ಜಗಲಿ ಅಭಿಪ್ರಾಯಪಟ್ಟರು. ಅವರು ಲಕ್ಷ್ಮೇಶ್ವರದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ತಾಲೂಕ ಘಟಕ ಹಮ್ಮಿಕೊಂಡ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ ಕ.ಸಾ.ಪ ಕಾಲೇಜು ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿದ ದತ್ತಿ ದಾನಿ ಮಹೇಶ ಸೋಮಕ್ಕನವರ “ವಿದ್ಯಾರ್ಥಿಗಳು ವಿದ್ಯಾರ್ಜನೆಯ ಜೊತೆಗೆ ಸಂಸ್ಕೃತಿ ಹಾಗೂ ಸಾಹಿತ್ಯವನ್ನು ಅರಿತು ಅಳವಡಿಸಿಕೊಳ್ಳಬೇಕು. ಜನಪದವು ಶಿಷ್ಟ ಸಾಹಿತ್ಯದ ಬೇರು” ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಲಕ್ಷ್ಮೇಶ್ವರ ತಾಲೂಕ ಘಟಕದ ಅಧ್ಯಕ್ಷ ಈಶ್ವರ ಮೆಡ್ಲೇರಿ “ರಾಜ್ಯದಲ್ಲಿಯೇ ವಿಶಿಷ್ಟ ಹಾಗೂ ಪ್ರಪ್ರಥಮ ಪ್ರಯತ್ನವಾದ ಶಾಲಾ ಕಾಲೇಜು ಘಟಕ ಸ್ಥಾಪನೆ ಮಾಡಿ ಅವುಗಳಿಂದ ರಚನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದು ಉತ್ತಮ ಫಲ ನೀಡುತ್ತಿದೆ” ಎಂದರು.
ಉದ್ಯಮಿಗಳಾದ ಶಿವಣ್ಣ ಕೋಳಿವಾಡ ಇವರು ನೀಡಿದ ದತ್ತಿಯ ವಿಷಯ ‘ಜನಪದ ಸಾಹಿತ್ಯದಲ್ಲಿ ಮಹಿಳೆ’ ಕುರಿತು ಪ್ರತಿಮಾ ಮಹಾಜನಶೆಟ್ಟರ ಉಪನ್ಯಾಸ ನೀಡಿದರು. ದಿ.ಫಕೀರಪ್ಪ ಪ. ಸೋಮಕ್ಕನವರ ಇವರು ನೀಡಿದ ದತ್ತಿಯ ವಿಷಯ ‘ಬಸವ ವಿಚಾರಗಳ ಚಿಂತನ ಮಂಥನ’ ಕುರಿತು ಸಾಹಿತಿ ಮೈತ್ರಾದೇವಿ ಹಿರೇಮಠ ಉಪನ್ಯಾಸ ನೀಡಿದರು. ಕಾಲೇಜಿನ ಪ್ರಾಚಾರ್ಯ ಕುಬೇರಪ್ಪ ಸಿದ್ರಾಮಣ್ಣವರ, ಕಾಲೇಜಿನ ಅಭಿವೃದ್ಧಿ ಸಮಿತಿಯ ಸದಸ್ಯ ಗಂಗಾಧರ ಮೆಣಸಿನಕಾಯಿ ಮಾತನಾಡಿದರು.
ವೇದಿಕೆಯಲ್ಲಿ ದುಂಡೇಶ ಕೊಟಗಿ,ಉಪನ್ಯಾಸಕ ನಾಗಪ್ಪ ಸಾತಪುತೆ ಉಪಸ್ಥಿತರಿದ್ದರು. ಕ.ಸಾ.ಪ ಲಕ್ಷ್ಮೇಶ್ವರ ತಾಲೂಕು ಘಟಕದಿಂದ ನೂತನವಾಗಿ ರಚನೆಯಾದ ಸರಕಾರಿ ಪದವಿ ಪೂರ್ವ ಕಾಲೇಜಿನ ಕ.ಸಾ.ಪ ಘಟಕದ ಪದಾಧಿಕಾರಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಉಪನ್ಯಾಸಕರ ಸಂಘದ ಅಧ್ಯಕ್ಷ ಮಂಜುನಾಥ ಕೊಕ್ಕರಗುಂದಿ ಸ್ವಾಗತಿಸಿದರು.ಕಾಲೇಜಿನ ವಿದ್ಯಾರ್ಥಿನಿಯರು ಪ್ರಾರ್ಥಿಸಿದರು. ಕ.ಸಾ.ಪ ಸಂಘಟನಾ ಕಾರ್ಯದರ್ಶಿ ನಾಗರಾಜ ಮಜ್ಜಿಗುಡ್ಡ ನಿರೂಪಿಸಿದರು. ಸಂಚಾಲಕ ಈರಣ್ಣ ಗಾಣಿಗೇರ ಘಟಕ ರಚನೆ ನಡೆಸಿಕೊಟ್ಟರು. ಎನ್.ಪಿ. ಪ್ಯಾಟಿಗೌಡ್ರು ವಂದಿಸಿದರು. ಭಾಗ್ಯಲಕ್ಷ್ಮಿ, ಎಸ್.ವಾಯ್.ಹೂಗಾರ, ಬಡಿಗೇರ್ ಹಾಗೂ ಕಾಲೇಜಿನ ಇತರ ಉಪನ್ಯಾಸಕರು,ರಾಜು ಜನಿವಾರದ ಉಪಸ್ಥಿತರಿದ್ದರು. ಇನ್ನೂರಕ್ಕೂ ಅಧಿಕ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಭಾಗವಹಿಸಿದ್ದರು.