ದತ್ತಿ ಉಪನ್ಯಾಸಗಳು ವಿದ್ಯಾರ್ಥಿಗಳಲ್ಲಿ
ನೈತಿಕತೆ ತುಂಬಲು ಸಹಕಾರಿ


(ಸಂಜೆವಾಣಿ ವಾರ್ತೆ)
ಬಳ್ಳಾರಿ, ಜ.21: ನಗರದ ವೀ.ವಿ ಸಂಘದ ಸ್ವತಂತ್ರ ಪ.ಪೂ ಕಾಲೇಜಿನಲ್ಲಿ  ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದಿಂದ  ಮಹಾಮನೆ ದತ್ತಿ ಕಾರ್ಯಕ್ರಮ ನಿನ್ನೆ ನಡೆಯಿತು.
ಕಾರ್ಯಕ್ರಮ ಉದ್ಘಾಟಿಸಿದ ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಅಣ್ಣಾ ವಿರೂಪಾಕ್ಷಪ್ಪ  ಮಾತನಾಡಿ,    ಜೋಳದರಾಶಿ ದೊಡ್ಡನಗೌಡರು ಬಳ್ಳಾರಿಯ ಹೆಮ್ಮೆಯ ಶಿಖರ ಅವರ ಆದರ್ಶ ನಮಗೆಲ್ಲಾ ದಾರಿದೀಪ ಇಂತಹ  ದತ್ತಿ ಕಾರ್ಯಕ್ರಮಗಳು ವಿದ್ಯಾರ್ಥಿಗಳಿಗೆ ನೈತಿಕ ಮೌಲ್ಯಗಳನ್ನು ರೂಢಿಸಿಕೊಳ್ಳಲು ಸಹಕಾರಿಯಾಗಿದೆ ಎಂದರು.
ಶರಣರ  ಸಾಮಾಜಿಕ ನಿಲುವುಗಳು ಈ ವಿಷಯ ಕುರಿತು ವಿಶೇಷ ಉಪನ್ಯಾಸ ನೀಡಿದ ನಗರದ  ಸರಳಾದೇವಿ ಪ್ರಥಮ ದರ್ಜೆ ಕಾಲೇಜಿನ‌ ಕನ್ನಡ ವಿಭಾಗದ ಮುಖ್ಯಸ್ಥ ಡಾ.ದಸ್ತಗಿರಿ ಸಾಬ್ ದಿನ್ನಿ ಅವರು,  ವಚನ ಸಾಹಿತ್ಯ ನೊಂದ ಮನಕ್ಕೆ ನೆಮ್ಮದಿ ನೀಡುವ ಔಷದಿ ಇದ್ದಂತೆ ವಿದ್ಯಾರ್ಥಿಗಳು ವಚನಗಳನ್ನು ಓದುವುದರ ಜೊತೆಗೆ ಅದರಲ್ಲಿನ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು ಮೊಬೈಲ್ ಪ್ರೀತಿಸದಷ್ಟು ಪುಸ್ತಕ ಪ್ರೀತಿಸಿ ಕಂಡಿತ ನೀವು ಸಮಾಜದಲ್ಲಿ ಆದರ್ಶ ವ್ಯಕ್ತಿಗಳಾಗುತ್ತೀರಿ ಎಂದರು.
ಶರಣ ಸಾಹಿತ್ಯ ಪರಿಷತ್ತಿನ  ಜಿಲ್ಲಾ ಘಟಕದ ಅದ್ಯಕ್ಷ ಕೆ.ಬಿ ಸಿದ್ದಲಿಂಗಪ್ಪ ಪ್ರಸ್ತಾವಿಕ ನುಡಿಯಲ್ಲಿ ದತ್ತಿ ದಾನಿಗಳನ್ನು ಪರಿಚಯಿಸಿ ಕಾರ್ಯಕ್ರಮದ ಉದ್ದೇಶ ಹಾಗು ಮಹತ್ವವನ್ನು ವಿವರಿಸಿದರು.  ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ.ಕೆ.ಎಂ ದೇವೇಂದ್ರಯ್ಯ ಮಾತನಾಡಿ,  ಈ ತರದ ಕಾರ್ಯಕ್ರಮ ಇಂದಿನ ವಿದ್ಯಾರ್ಥಿಗಳಿಗೆ ಅಗತ್ಯವಾಗಿ ಬೇಕಾಗಿದೆ. ಶರಣರ ತತ್ವಗಳನ್ನು ನಮ್ಮ‌ಮಕ್ಕಳು ರೂಢಿಸಿಕೊಂಡು  ಸಮಾಜದಲ್ಲಿ ಕೀರ್ತಿವಂತರಾಗಿ ಬಾಳಲಿ ಎಂದು ಹಾರೈಸಿದರು.
ಕಾಲೇಜಿನ ಆಡಳಿತ ಮಂಡಳಿಯ ಸದಸ್ಯ ಕೆ ಮುದ್ದನಗೌಡ ಹಾಗು ದತ್ತಿ ದಾಸೋಹಿಗಳಾದ ಕೆ ಪಂಪನಗೌಡ  ಉಪಸ್ಥಿತರಿದ್ದರು. ವಿದ್ಯಾರ್ಥಿನಿಯರಾದ ಶರಣ್ಯ ಹಾಗು ಸ್ನೇಹ ಇವರು ಪ್ರಾರ್ಥನೆ,  ಎ.ಸ್ನೇಹಾ ಸ್ವಾಗತ ಸಿಂಧು ವಂದನೆ ಸಲ್ಲಿಸಿದರೆ ಸೌಜನ್ಯ ಕಾರ್ಯಕ್ರಮ ನಿರೂಪಿಸಿದರು.