ದಡ ಸೇರುವ ಮುನ್ನ ಮೃತ್ಯು ಮನೆ ಸೇರಿದ ಯುವಕ

ಕಲಬುರಗಿ,ಜೂ.3: ಈಜುವಾಗ ತಲೆಗೆ ಬಲವಾದ ಪೆಟ್ಟು ಬಿದ್ದ ಪರಿಣಾಮ ನೀರಿನಿಂದ ಮೇಲೇಳಾಗದ ಯುವಕನೋರ್ವ ತನ್ನ ಗೆಳೆಯರ ಕಣ್ಮುಂದೆಯೇ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆಯು ನಗರದ ಹೊರವಲಯದಲ್ಲಿ ವರದಿಯಾಗಿದೆ.
ನಗರದ ಹೊರವಲಯದ ರುಕ್ಮೋದ್ದೀನ್ ತೋಲಾ ದರ್ಗಾದ ಹತ್ತಿರದ ಕಲ್ಲಿನ ಖಣಿಯಲ್ಲಿ ದುರ್ಘಟನೆ ಸಂಭವಿಸಿದೆ. ಖಾಜಾ ಬಂದೇ ನವಾಜ್ ದರ್ಗಾ ಪ್ರದೇಶದಲ್ಲಿನ ಮಿಜಗುರಿ ಬಡಾವಣೆಯ ನಿವಾಸಿ ಜಾಫರ್ ಅಯ್ಯುಬ್ (27) ಎಂಬಾತನೇ ಮೃತಪಟ್ಟ ದುರ್ದೈವಿ.
ಜಾಫರ್ ಅಯ್ಯುಬ್ ತನ್ನ ಗೆಳೆಯೊಂದಿಗೆ ಸೇಋಇ ಕಲ್ಲಿನ ಕಣಿವೆಯಲ್ಲಿ ಈಜಾಡಲು ಹೋಗಿದ್ದ. ಅದೇ ನೀರಿನಲ್ಲಿ ಕೆಲ ಮಹಿಳೆಯರು ಬಟ್ಟೆಗಳನ್ನೂ ಸಹ ತೊಳೆಯುತ್ತಿದ್ದರು. ಈಜುವಾಗ ತಲೆಗೆ ಗಂಭೀರವಾಗಿ ಪೆಟ್ಟು ಬಿದ್ದ ಪರಿಣಾಮ ನೀರಿನಿಂದ ಮೇಲೆ ಬಾರಲು ಆಗದೇ ಮೃತಪಟ್ಟಿದ್ದಾನೆ ಎಂದು ಹೇಳಲಾಗಿದೆ.
ಮೊದಲು ತನ್ನ ಗೆಳೆಯ ನೀರಿನ ಮಡುವಿನಲ್ಲಿ ಜಿಗಿದು ಈಜಿ ಹೊರಬಂದ ನಂತರ ಜಾಫರ್ ಸಹ ನೀರಿಗೆ ಜಿಗಿದು ಈಜಲು ಆರಂಭಿಸಿದ್ದ. ದಡ ತಲುಪುವ ಹಂತದಲ್ಲಿಯೇ ಒಂದೆರಡು ಬಾರಿ ಮುಳುಗುವುದು, ಏಳುವುದು ಮಾಡುತ್ತಿದ್ದ. ಆತನ ಗೆಳೆಯ ದಡದಲ್ಲಿ ನಿಂತು ಬರುತ್ತಾನೆಂದು ಆತನ ಕೈ ಹಿಡಿಯಲು ಪ್ರಯತ್ನಿಸುತ್ತಿದ್ದ. ಮೂರನೇ ಬಾರಿ ಮುಳುಗಿದಾಗ ಗೆಳೆಯ ಸಾಕಷ್ಟು ಒದರಿದರೂ ಸಹ ಜಾಫರ್ ನೀರಿನಿಂದ ಮೇಲೆ ಬರಲಿಲ್ಲ. ಸುದ್ದಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕದಳದವರು ಸ್ಥಳಕ್ಕೆ ಧಾವಿಸಿ ಮೃತ ಯುವಕನ ಶವವನ್ನು ಪತ್ತೆ ಹಚ್ಚಿದರು. ಈ ಕುರಿತು ಗ್ರಾಮೀಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.