ದಡಾರ ಹಾಗೂ ರುಬೆಲ್ಲಾ ರೋಗ ಮುಕ್ತ ಜಿಲ್ಲೆಯನ್ನಾಗಿಸಲು ಎಲ್ಲರ ಸಹಕಾರ ಅಗತ್ಯ; ಜಿಲ್ಲಾಧಿಕಾರಿ ಸ್ನೇಹಲ್.ಆರ್

ಯಾದಗಿರಿ : ಮೇ 23 : ದಡಾರ ಹಾಗೂ ರುಬೆಲ್ಲಾ ರೋಗವು ಮುಖ್ಯವಾಗಿ ಮಕ್ಕಳಲ್ಲಿ ಕಂಡುಬರುವ ರೋಗವಾಗಿದ್ದು, ಈ ರೋಗ ಮುಕ್ತ ಜಿಲ್ಲೆಯನ್ನಾಗಿ ಮಾಡುವ ನಿಟ್ಟಿನಲ್ಲಿ ಆರೋಗ್ಯ ಮತ್ತು ವಿವಿಧ ಇಲಾಖೆಗಳ ಸಹಕಾರ ಅಗತ್ಯವಾಗಿದೆ ಎಂದು ಜಿಲ್ಲಾಧಿಕಾರಿ ಸ್ನೇಹಲ್.ಆರ್ ಅವರು ಹೇಳಿದರು

 ಜಿಲ್ಲಾಧಿಕಾರಿ ಕಚೇರಿಯ ಸಭಾಂಗಣದಲ್ಲಿ ಹಮ್ಮಿಕೊಂಡ ದಡಾರ ಮತ್ತು ರುಬೆಲ್ಲಾ ರೋಗದ ನಿರ್ಮೂಲನೆ ಹಾಗೂ ತಾಯಿ ಮರಣ ಮತ್ತು ಶಿಶುಮರಣ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
 ರುಬೆಲ್ಲಾ ರೋಗ ಗರ್ಭಿಣಿಯರಲ್ಲಿ ಕಾಣಿಸಿಕೊಂಡಾಗ ಹುಟ್ಟುವ ಮಕ್ಕಳಲ್ಲಿ ಗ್ಲುಕೋಮ, ಕಣ್ಣಿನ ಪೆÇರೆ, ಕಿವುಡುತನ, ಮೆದುಳುಜ್ವರ, ಮಾನಸಿಕ ಅಸ್ವಸ್ಥತೆ, ಬುದ್ದಿಮಾಂದ್ಯತೆ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಆದ್ದರಿಂದ ಈ ಬಗ್ಗೆ ವಿಶೇಷ ಗಮನ ಹರಿಸುವುದು ಅಗತ್ಯವಾಗಿದೆ ಎಂದು ಹೇಳಿದರು.
 ದಡಾರ ಮತ್ತು ರುಬೆಲ್ಲಾ ರೋಗವು ವೈರಾಣುವಿನಿಂದ ಬರುವ ಕಾಯಿಲೆಯಾಗಿದ್ದು, ಕೆಮ್ಮು ಮತ್ತು ಸೀನುವುದರ ಮೂಲಕ ಇತರರಿಗೆ ಹರಡುತ್ತದೆ. ದಡಾರದಿಂದ ನ್ಯುಮೋನಿಯಾ, ಅತಿಸಾರ ಭೇದಿ, ಮೆದುಳಿನ ಸೋಂಕಿನಂತಹ ಕಾಯಿಲೆಗಳಿಗೆ ತುತ್ತಾಗುವ ಸಾಧ್ಯತೆ ಇದೆ. ಹಾಗೆಯೇ ತುರಿಕೆ, ವಿಪರೀತ ಜ್ವರ, ಕೆಮ್ಮು, ನೆಗಡಿ ಮತ್ತು ಕೆಂಗಣ್ಣು ದಡಾರದ ಮುಖ್ಯ ಲಕ್ಷ ಣವಾಗಿದ್ದು, ಇದು ಬರದಂತೆ ಎಚ್ಚರಿಕೆ ವಹಿಸುವುದು ಬಹಳ ಮುಖ್ಯವಾಗಿದೆ ಎಂದು ತಿಳಿಸಿದರು.
 ಅಂಗನವಾಡಿ ಕೇಂದ್ರಗಳಿಗೆ ಬರುವ ಯಾವುದೇ ಮಗುವಿಗೆ ಜ್ವರ, ದದ್ದು ಇನ್ನಿತರ ಲಕ್ಷಣಗಳು ಕಂಡುಬಂದರೆ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಪಕ್ಕದ ಪ್ರಾಥಮಿಕ, ಸಮುದಾಯ ಆರೋಗ್ಯ ಕೇಂದ್ರಗಳಿಗೆ ಮಾಹಿತಿ ನೀಡಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಸೂಚಿಸಿದರು.

 ಹೆರಿಗೆ ಪೂರ್ವ ಮತ್ತು ನಂತರದಲ್ಲಿ ವಿಶೇಷ ಆರೋಗ್ಯ ಕಾಳಜಿ ವಹಿಸಿ ತಾಯಿ ಮರಣ ಪ್ರಮಾಣ  'ಶೂನ್ಯ' ಆಗಿರುವಂತೆ ನಿಗಾವಹಿಸಲು ಪರಿಣಾಮಕಾರಿ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾಧಿಕಾರಿ ಅವರು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಪ್ರತಿಯೊಬ್ಬ ಆಶಾ ಕಾರ್ಯಕರ್ತೆಯರು ತಮ್ಮ ವ್ಯಾಪ್ತಿಯ ಗರ್ಭಿಣಿಯರ ಕುರಿತು ಪ್ರತಿ ತಿಂಗಳು ತಪಾಸಣೆಯನ್ನು ನಿಯಮಿತವಾಗಿ ಮಾಡಿ, ವಿಶೇಷ ಆರೋಗ್ಯ ಕಾಳಜಿ ವಹಿಸಿ  ಪ್ರತಿದಿನ ಮನೆಗೆ ಭೇಟಿನೀಡಿ ಆರೋಗ್ಯದ ಕುರಿತು ತಿಳುವಳಿಕೆ ನೀಡಿ ನಿಮ್ಮ ಜವಾಬ್ದಾರಿಗಳನ್ನು ಅರಿತು ಕಾರ್ಯನಿರ್ವಹಿಸಬೇಕು  ಎಂದು ಜಿಲ್ಲಾಧಿಕಾರಿ ಸೂಚಿಸಿದರು.
 ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗರಿಮಾ ಪನ್ವಾರ,  ಪ್ರಭಾರಿ ಡಿಹೆಚ್‍ಓ ಡಾ.ಸಂಜೀವಕುಮಾರ ರಾಯಚೂರಕರ್, ಆರ್‍ಹೆಚ್‍ಓ ಡಾ.ಮಲ್ಲಪ್ಪ ಕಣಜಿಕರ್, ಡಿಎಸ್‍ಓ ಡಾ.ಸಾಜಿದ್, ಐಎಮ್‍ಎ ಅಧ್ಯಕ್ಷ ಡಾ.ಭಗವಂತ ಅನ್ವರ, ಯಾದಗಿರಿ ವೈದ್ಯಾಧಿಕಾರಿ ಡಾ.ಹಣಮಂತರೆಡ್ಡಿ,  ಶಹಾಪುರ ವೈದ್ಯಾಧಿಕಾರಿ ರಮೇಶ ಗುತ್ತೇದಾರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕ ಆರ್ ಎಸ್ ರತ್ನಾಕರ್  ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಮತ್ತು ವಿವಿಧ ಇಲಾಖೆಯ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.