ದಟ್ಟ ಮಂಜು ವಿಮಾನ ಹಾರಾಟ ವಿಳಂಬ

ನವದೆಹಲಿ, ಜ.೨೧- ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ದಟ್ಟ ಮಂಜು ಮುಂದುವರೆದಿದ್ದು, ಇದರ ಪರಿಣಾಮ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಬೇಕಿದ್ದ ಹಲವಾರು ವಿಮಾನಗಳು ವಿಳಂಬವಾಗಿವೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.
ಇಂದು ಬೆಳಿಗ್ಗೆ ೭ ಗಂಟೆಯವರೆಗೆ ಯಾವುದೇ ವಿಮಾನದ ಸಂಚಾರ ಆರಂಭವಾಗಿರಲಿಲ್ಲ. ಈ ವೇಳೆ ಪ್ರಯಾಣಿಕರೊಬ್ಬರು ಪ್ರತಿಕ್ರಿಯಿಸಿ ನಾನು ಪಂಜಾಬ್‌ನಿಂದ ಬಂದಿದ್ದು, ಲಂಡನ್‌ಗೆ ಹೋಗುತ್ತಿದ್ದೇನೆ. ಆದರೆ, ವಿಮಾನವು ಬೆಳಿಗ್ಗೆ ೧೦.೫೦ ಕ್ಕೆ ಹೊರಡಬೇಕಿತ್ತು ಮಂಜಿನಿಂದಾಗಿ ವಿಳಂಬವಾಗಿ ಸಂಚರಿಸಿದೆ ಎಂದರು.
ಭಾರತದ ಹವಾಮಾನ ಇಲಾಖೆ ಪ್ರಕಾರ, ದೆಹಲಿಯಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ೨೩ ಡಿಗ್ರಿ ಮತ್ತು ೧೦ ಡಿಗ್ರಿ ಸೆಲ್ಸಿಯಸ್‌ನಲ್ಲಿ ದಾಖಲಾಗಿದ್ದು, ಇಂದು ಬೆಳಿಗ್ಗೆ ರಾಷ್ಟ್ರ ರಾಜಧಾನಿಯಲ್ಲಿ ಮಂಜಿನ ವಾತಾವರಣ ಕಂಡು ಬಂದಿತು.
ವರದಿಗಳ ಪ್ರಕಾರ, ಜನವರಿ ೨೩ ರಂದು ಪಂಜಾಬ್, ಹರಿಯಾಣ ಮತ್ತು ಚಂಡೀಗಢ, ಉತ್ತರ ರಾಜಸ್ಥಾನ ಮತ್ತು ಪಶ್ಚಿಮ ಉತ್ತರ ಪ್ರದೇಶದಲ್ಲಿ ಸ್ವಲ್ಪ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.