ದಕ್ಷ ಹಾಗೂ ಉತ್ತಮ ರಾಜಕಾರಣಿ ಬಾಬು ಜಗಜೀವನರಾವ್

ವಿಜಯಪುರ:ಎ.7: ದಕ್ಷ ಹಾಗೂ ಉತ್ತಮ ರಾಜಕಾರಣಿ ಅಷ್ಟೇ ಅಲ್ಲದೆ ಮತ್ಸದ್ದಿ ಆಡಳಿತಗಾರರು, ಪರರಿಗಾಗಿ ಸೇವೆ ಸಲ್ಲಿಸುವುದು ಹೇಗೆ ಎನ್ನುವುದನ್ನು ತಮ್ಮ ಜೀವನ ಶೈಲಿಯಿಂದ ತಿಳಿಸಿಕೊಟ್ಟವರು ಬಾಬು ಜಗಜೀವನರಾವ್ ಎಂದು ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಕುಲಸಚಿವ ಪ್ರೊ.ಬಿ.ಎಸ್.ನಾವಿ ಹೇಳಿದರು.

ನಗರದ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರ ಹಾಗೂ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಘಟಕ ಇವರ ಸಹಯೋಗದಲ್ಲಿ ಆಯೋಜಿಸಿದ್ದ ಡಾ.ಬಾಬು ಜಗಜೀವನ್ ರಾವ್‍ರವರ 116ನೇ ಜಯಂತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಇದೇ ಸಂದರ್ಭದಲ್ಲಿ ವಿವಿಯ ಮೌಲ್ಯಮಾಪನ ಕುಲಸಚಿವ ಪ್ರೊ.ಎಚ್.ಎಮ್ ಚಂದ್ರಶೇಕರ ಮಾತನಾಡಿ, ದೇಶದ ರಾಜಕೀಯ, ಸಾಮಾಜಿಕ. ಆರ್ಥಿಕ ಬದಲಾವಣೆಗೆ ಬಾಬು ಜಗಜೀವನರಾವ್ ಮೂಲ ಕಾರಣರಾಗಿದ್ದಾರೆ. ದಿನ ದಲಿತರ ಏಳಿಗೆಗಾಗಿ ಸದಾ ಶ್ರಮಿಸುತ್ತಿದ್ದರು. ಸಾಮಾಜಿಕ ಕಳಕಳಿ ಹೊಂದಿದ್ದ ವ್ಯಕ್ತಿಯಾಗಿದ್ದರು. ಅವರ ತತ್ವಗಳನ್ನು ವಿದ್ಯಾರ್ಥಿನಿಯರು ಪಾಲಿಸುವ ಮೂಲಕ ದೇಶದ ಅಭಿವೃದ್ಧಿಗಾಗಿ ಶ್ರಮಿಸಬೇಕು ಎಂದು ಹೇಳಿದರು.

ಸಮಾರಂಭದಲ್ಲಿ ವಿವಿಯ ಇಂಗೀಷ್ ವಿಭಾಗದ ಮುಖ್ಯಸ್ಥ ಪ್ರೊ.ಪಿ.ಕಣ್ಣನ್ ಮಾತನಾಡಿ, ಸುಭಾಸಚಂದ್ರ ಭೋಸ್, ಮಹಾತ್ಮ ಗಾಂಧಿ ಇವರ ತತ್ವಗಳಿಂದ ಪ್ರಭಾವಿತರಾದ ಬಾಬು ಜಗಜೀವನರಾವ್ ಇವರು ಅತ್ಯಂತ ದಕ್ಷ ಆಡಳಿತಗಾರರಾಗಿದ್ದರು. ದೇಶದ ರಾಜಕೀಯದಲ್ಲಿ ಅತ್ಯಂತ ಉನ್ನತ ಅಧಿಕಾರ ಸ್ಥಾನಗಳನ್ನು ಪಡೆದಿದ್ದರು. ರೇಲ್ವೆ ಇಲಾಖೆಯಲ್ಲಿ ಸಾಕಷ್ಟು ಬದಲಾವಣೆಗಳನ್ನು ತಂದಂತವರು. ಸದಾ ಸಾಮಾಜಿಕ ಚಿಂತನೆ ನಡೆಸಿ ಸುಧಾರಣೆ ತಂದಂತವರು. ಪ್ರಥಮ ಉಪಪ್ರಧಾನಿಯಾಗಿ ಹಾಗೂ ಹಸಿರು ಕ್ರಾಂತಿಯ ಹರಿಕಾರರಾಗಿ ಕಾರ್ಯನಿರ್ವಹಿಸಿ ಸೈ ಎನ್ನಿಸಿಕೊಂಡವರು ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕತೆಯನ್ನು ವಹಿಸಿದ್ದ ವಿವಿಯ ಕುಲಪತಿ ಪ್ರೊ. ಬಿ.ಕೆ.ತುಳಸಿಮಾಲ ಮಾತನಾಡಿ, ಸಮತಾ ದಿವಸ ಎಂದು ಈ ದಿನವನ್ನು ಆಚರಿಸಲಾಗುತ್ತದೆ. ಡಾ. ಬಾಬು ಜಗಜೀವನರಾವ್ ಅವರ ಜೀವನ ಹಲವಾರು ಆಯಾಮಗಳ ವ್ಯಕ್ತಿತ್ವವನ್ನು ಹೊಂದಿರುವಂತದ್ದಾಗಿತ್ತು. ಸಮಾಜಕ್ಕೆ ಸಮಾನತೆಯ ಸಂದೇಶವನ್ನು ಸಾರಿದ ಸಂಪನ್ನ ರಾಜಕಾರಣಿ. ಸುಮಾರು 40 ವರ್ಷಗಳ ಕಾಲ ಸಂಸತ್‍ನಲ್ಲಿ ಹಲವಾರು ಮಹತ್ತರ ಇಲಾಖೆಗಳ ನಿರ್ವಹಣೆಯನ್ನು ಮಾಡಿದ ಏಕೈಕ ರಾಜಕಾರಣಿ ಡಾ. ಬಾಬು ಜಗಜೀವನರಾವ್. ಡಾ.ಬಾಬು ಜಗಜೀವನರಾವ್ ಅವರ ವಿಚಾರಗಳನ್ನು, ನೀತಿಗಳನ್ನು ಪ್ರಸ್ತುತ ದಿನಮಾನಗಳಿಗೆ ಅಳವಡಿಸಿಕೊಳ್ಳುವುದರ ಮುಖಾಂತರ ದೇಶದ ಅಭಿವೃದ್ಧಿಯನ್ನು ಸಮಗ್ರ ಸಾಧಿಸಲು ಅತ್ಯಂತ ಸಹಕಾರಿಯಾಗಿದೆ ಎಂದು ಹೇಳಿದರು.

ಅವರ ವಿಚಾರಗಳನ್ನು ಕುರಿತು ಸಂಶೋದನಾತ್ಮಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮುಖಾಂತರ ಇವರ ತತ್ವಗಳನ್ನು ಪ್ರಸಾರ ಮಾಡಬೇಕು. ಭಾರತದಲ್ಲಿ ಕೃಷಿಯೇ ಅಭಿವೃದ್ಧಿಯ ಮೂಲಾಧಾರವಾಗಿದೆ. ಈ ದೃಷ್ಟಿಯಿಂದ ಡಾ. ಬಾಬು ಜಗಜೀವನರಾವ್ ದೇಶದ ಭೀಕರ ಬರಗಾಲದ, ಕ್ಷಾಮದ ಪರಿಸ್ಥಿತಿಯಲ್ಲಿ ಕೈಗೊಂಡ ಕ್ರಮಗಳು ದೇಶದ ಆಹಾರ ಕೊರತೆಯನ್ನು ನೀಗಿಸಿ ಸುಸ್ಥಿರ ಅಭಿವೃದ್ಧಿಗೆ ಸಹಾಯಕಾರಿಯಾಗುವ ರೀತಿಯಲ್ಲಿ ಕೃಷಿಯನ್ನು ಅಭಿವೃದ್ಧಿ ಪಡಿಸಲು ಸಹಾಯಕಾವಾಗಿದೆ. ನೀತಿಗಳು, ಸಾಂಸ್ಥಿಕ ವ್ಯವಸ್ಥೆಗಳನ್ನು ಸಮರ್ಪಕವಾಗಿ ವಿವರಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಿದ ಮುತ್ಸದ್ಧಿ ರಾಜಕಾರಣಿಯಾಗಿದ್ದರು ಎಂದರು.

ಕೃಷಿ ವಿಜ್ಞಾನ ಕೇಂದ್ರಗಳ ಸ್ಥಾಪನೆ, ಬೀಜ-ಜಮೀನುಗಳ ಕೃಷಿ ಯೋಗ್ಯವಾಗಿ ಪರಿಣಮಿಸುವದು. ಕೃಷಿ ನೀತಿಗಳನ್ನು ರೂಪಿಸಿದರು. ಹೊಸ ಕೃಷಿ ತಳಿಗಳು, ಕೃಷಿ ತಂತ್ರಜ್ಞಾನ ನಿರ್ವಹಣೆ, ಕೃಷಿ ಉತ್ಪಾದನೆಗಳ ನಿರ್ವಹಣೆ ಹೀಗೆ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಅಳವಡಿಸಿಕೊಂಡ ದೂರದೃಷ್ಟಿಯನ್ನು ಹೊಂದಿದ ದಕ್ಷ ಆಡಳಿತಗಾರರಾಗಿದ್ದರು.

ಕಾರ್ಯಕ್ರಮದಲ್ಲಿ ಪರಿಶಿಷ್ಟ ಜಾತಿ/ ಪರಿಶಿಷ್ಟ ಕೋಶದ ನಿರ್ದೇಶಕಿ ಪ್ರೊ.ಲಕ್ಷ್ಮೀದೇವಿ ವೈ, ವಿವಿಧ ವಿಭಾಗಗಳ ಮುಖ್ಯಸ್ಥರು, ಅತಿಥಿ ಉಪನ್ಯಾಸಕರು, ಸಂಶೋಧನಾ ವಿದ್ಯಾರ್ಥಿನಿಯರು, ಸ್ನಾತಕ ಮತ್ತು ಸ್ನಾತಕೋತ್ತರ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು. ಡಾ.ಬಿ.ಆರ್ ಅಂಬೇಡ್ಕರ್ ಅಧ್ಯಯನ ಕೇಂದ್ರದ ನಿರ್ದೇಶಕಿ ಪ್ರೊ.ಶಾಂತಾದೇವಿ ಟಿ. ಪ್ರಾಸ್ತಾವಿಕ ನುಡಿಗಳನ್ನಾಡಿ ಸ್ವಾಗತಿಸಿದರು. ಸಹಾಯಕ ನಿರ್ದೇಶಕ ಡಾ.ಕೆ.ಪಿ. ಸುರೇಶ ವಂದಿಸಿದರು. ಸುನಿತಾ ನಿರೂಪಿಸಿದರು.