ದಕ್ಷಿಣ ಸಮುದ್ರದಲ್ಲಿ ಚೀನಾದ ತಡೆಗೋಡೆ ಕಿತ್ತೆಸೆದ ಫಿಲಿಪ್ಪೀನ್ಸ್!

ಮನಿಲಾ (ಫಿಲಿಪ್ಪೀನ್ಸ್), ಸೆ.೨೬- ದಕ್ಷಿಣ ಚೀನಾ ಮಹಾಸಾಗರದಲ್ಲಿ ನೆರೆಯ ರಾಷ್ಟ್ರಗಳಿಗೆ ತೊಂದರೆ ನೀಡುತ್ತಿರುವ ಚೀನಾಗೆ ಇದೀಗ ಫಿಲಿಪ್ಪೀನ್ಸ್ ತಿರುಗೇಟು ನೀಡಿದೆ. ಮೀನುಗಾರಿಕಾ ಬೋಟ್‌ಗಳು ದಕ್ಷಿಣ ಚೀನಾ ಸಮುದ್ರದಲ್ಲಿ ವಿವಾದಿತ ಪ್ರದೇಶಕ್ಕೆ ಪ್ರವೇಶಿಸುವುದನ್ನು ತಡೆಯಲು ಚೀನಾ ಹಾಕಿದ್ದ ತೇಲುವ ತಡೆಗೋಡೆಯನ್ನು ಇದೀಗ ಫಿಲಿಪ್ಪೀನ್ಸ್ ತೆರವುಗೊಳಿಸಿದೆ. ಈ ಮೂಲಕ ಚೀನಾಗೆ ತಕ್ಕ ಎದಿರೇಟು ನೀಡಿದೆ.
ಇಡೀ ದಕ್ಷಿಣ ಚೀನಾ ಮಹಾಸಾಗರವೇ ತನ್ನದೆಂದು ವಾದಿಸುವ ಚೀನಾ, ತನ್ನ ನೆರೆ ಹೊರೆಯ ದೇಶಗಳಿಗೆ ಕೀಟಲೆ ನೀಡುತ್ತಲೇ ಬಂದಿದೆ. ಅಲ್ಲದೆ ಚೀನಾ ಮಹಾಸಾಗರಕ್ಕೆ ಪ್ರವೇಶಿಸುವ ಮೀನುಗಾರಿಕೆ ಸೇರಿದಂತೆ ಇತರೆ ಬೋಟ್‌ಗಳಿಗೆ ಹಾನಿ ಮಾಡುವ ಪ್ರಕ್ರಿಯೆಯನ್ನು ಕೂಡ ಮುಂದುವರೆಸಿದೆ. ಅದರಲ್ಲೂ ಮುಖ್ಯವಾಗಿ ಚೀನಾವು ದಕ್ಷಿಣ ಚೀನಾ ಸಮುದ್ರದ ೯೦ಕ್ಕಿಂತ ಹೆಚ್ಚು ಪ್ರತಿಶತ ಹಕ್ಕು ಸಾಧಿಸಿದ್ದು, ೨೦೧೨ ರಲ್ಲಿ ಶೋಲ್ ಅನ್ನು ಕೂಡ ವಶಪಡಿಸಿಕೊಂಡಿತ್ತು. ಚೀನಾದ ಈ ಕುಟಿಲ ನೀತಿಯಿಂದ ಫಿಲಿಪ್ಪೀನ್ಸ್ ಸೇರಿದಂತೆ ನೆರೆಯ ದೇಶಗಳು ಕೂಡ ತನ್ನ ವ್ಯಾಪ್ತಿಯ ಪ್ರದೇಶದಲ್ಲೂ ಸಮರ್ಪಕ ರೀತಿಯಲ್ಲಿ ಮೀನುಗಾರಿಕೆ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಸದ್ಯ ಇದರಿಂದ ಆಕ್ರೋಶಿತಗೊಂಡಿರುವ ಫಿಲಿಪ್ಪೀನ್ಸ್ ಇದೀಗ ಚೀನಾ ಹಾಕಿದ್ದ ತೇಲುವು ತಡೆಗೋಡೆಯನ್ನು ತೆರವುಗೊಳಿಸುವ ಮೂಲಕ ಚೀನಾಗೆ ಸವಾಲು ಹಾಕಿದೆ. ಮುಖ್ಯವಾಗಿ ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ಜೂನಿಯರ್ ಅವರ ಆದೇಶದ ಮೇರೆಗೆ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಫಿಲಿಪೈನ್ಸ್ ಕೋಸ್ಟ್ ಗಾರ್ಡ್ ಹೇಳಿದೆ. ಅಲ್ಲದೆ ಸ್ಕಾರ್ಬರೋ ಶೋಲ್‌ನಲ್ಲಿ ೩೦೦ ಮೀ ತಡೆಗೋಡೆಯೊಂದಿಗೆ ಚೀನಾ ನಮ್ಮ ಮೀನುಗಾರಿಕೆ ಹಕ್ಕುಗಳನ್ನು ಉಲ್ಲಂಘಿಸಿದೆ ಎಂದು ಫಿಲಿಪ್ಪೀನ್ಸ್ ಆರೋಪಿಸಿದೆ. ತಡೆಗೋಡೆಯು ನ್ಯಾವಿಗೇಷನ್‌ಗೆ ಅಪಾಯವನ್ನುಂಟು ಮಾಡಿದೆ. ಅಲ್ಲದೆ ಇದು ಅಂತಾರಾಷ್ಟ್ರೀಯ ಕಾನೂನಿನ ಸ್ಪಷ್ಟ ಉಲ್ಲಂಘನೆಯಾಗಿದೆ. ಇದು ಫಿಲಿಪಿನೋ ಮೀನುಗಾರರ ಮೀನುಗಾರಿಕೆ ಮತ್ತು ಜೀವನೋಪಾಯದ ಚಟುವಟಿಕೆಗಳಿಗೆ ಅಡ್ಡಿಪಡಿಸುತ್ತದೆ. ಶೋಲ್ ನಮ್ಮ ಷ್ಟ್ರೀಯ ಪ್ರದೇಶದ ಅವಿಭಾಜ್ಯ ಅಂಗ ಎಂದು ಫಿಲಿಪ್ಪೀನ್ಸ್ ಕೋಸ್ಟ್ ಗಾರ್ಡ್ ಹೇಳಿಕೆಯಲ್ಲಿ ತಿಳಿಸಿದೆ.