ದಕ್ಷಿಣ ವಲಯ ಶಿಬಿರದಿಂದ ಯಶಸ್ವಿಯಾಗಿ ಮರಳಿದ ಕರ್ನಾಟಕ ಎನ್‌ಎಸ್‌ಎಸ್ ತಂಡ:ಅದ್ದೂರಿ ಸ್ವಾಗತ

ರಾಯಚೂರು.ನ.೨೪- ೨೦೨೩ ರ ಜನೇವರಿ ೨೬ ರಂದು ದೆಹಲಿಯ ಕರ್ತವ್ಯಪಥದಲ್ಲಿ ಜರುಗಲಿರುವ ೭೪ ನೇ ಗಣರಾಜ್ಯೋತ್ಸವದ ಪ್ರತಿಷ್ಠಿತ ಪಥಸಂಚಲನಕ್ಕೆ ಪೂರ್ವಭಾವಿಯಾಗಿ ಆಯೋಜಿಸಲಾಗಿದ್ದ ದಕ್ಷಿಣ ವಲಯ ಪ್ರೀ ಆರ್ ಡಿ ಶಿಬಿರವನ್ನು ಯಶಸ್ವಿಯಾಗಿ ಪೂರೈಸಿದ ಕರ್ನಾಟಕದ ಎನ್ ಎಸ್ ಎಸ್ ತಂಡ ಮರಳಿ ಬೆಂಗಳೂರಿಗೆ ಆಗಮಿಸಿದ ಸಂದರ್ಭದಲ್ಲಿ ಭಾರತ ಸರಕಾರದ ಯುವಜನ ವ್ಯವಹಾರ ಮತ್ತು ಕ್ರೀಡಾ ಇಲಾಖೆಯ ರಾಷ್ಟ್ರೀಯ ಸೇವಾ ಯೋಜನೆಯ ಪ್ರಾದೇಶಿಕ ನಿರ್ದೇಶಕರ ಕಚೇರಿ ಅಧಿಕಾರಿಗಳು ಹಾಗೂ ರಾಜ್ಯ ಯುವ ಅಧಿಕಾರಿಯವರು ರೈಲು ನಿಲ್ದಾಣದಲ್ಲಿ ಹೂ ಮಾಲೆಯನ್ನು ಅರ್ಪಿಸುವುದರ ಮೂಲಕ ಅದ್ದೂರಿಯಾಗಿ ಸ್ವಾಗತಿಸಿದರು.
ಕರ್ನಾಟಕ, ಕೇರಳ, ತಮಿಳುನಾಡು ಹಾಗೂ ಪುದುಚೇರಿ ಒಳಗೊಂಡಂತೆ ನಾಲ್ಕು ರಾಜ್ಯಗಳ ದಕ್ಷಿಣ ವಲಯದ ಪೂರ್ವ ಗಣರಾಜ್ಯೋತ್ಸವ ಪಥಸಂಚಲನ ಶಿಬಿರವು ದಿನಾಂಕ ೯ ರಿಂದ ೧೮ ನೇ ನವೆಂಬರ್ ವರೆಗೆ ಕೇರಳದ ಎರ್ನಾಕುಲಂ ನಲ್ಲಿ ಆಯೋಜಿತಗೊಂಡಿತ್ತು. ಕರ್ನಾಟಕದ ೩೪ ವಿದ್ಯಾರ್ಥಿ ಸ್ವಯಂಸೇವಕರು ಹಾಗೂ ೩೪ ವಿದ್ಯಾರ್ಥಿನಿ ಸ್ವಯಂಸೇವಕಿಯರನ್ನು ಒಳಗೊಂಡ ೬೮ ಶಿಬಿರಾರ್ಥಿಗಳ ತಂಡವು ಸದರಿ ಶಿಬಿರದಲ್ಲಿ ಭಾಗವಹಿಸಿತ್ತು. ರಾಯಚೂರಿನ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ಡಾ. ಸಂತೋಷಕುಮಾರ ರೇವೂರ್ ಅವರ ಉಸ್ತುವಾರಿಯಲ್ಲಿ ಹಾಸನದ ಹಿಮ್ಸ್ ಕಾಲೇಜಿನ ಕಾರ್ಯಕ್ರಮ ಅಧಿಕಾರಿ ನಿಚಿತಾ ಕುಮಾರಿ ಹಾಗೂ ಹುಬ್ಬಳ್ಳಿಯ ಜೈನ್ ಕಾಲೇಜಿನ ಕಾರ್ಯಕ್ರಮ ಅಧಿಕಾರಿ ಎಮ್ ಎಸ್ ಹುಲ್ಗೂರ್ ರವರನ್ನು ಒಳಗೊಂಡ ೩ ಕಾರ್ಯಕ್ರಮ ಅಧಿಕಾರಿಗಳು ತಂಡದ ನೇತೃತ್ವವನ್ನು ವಹಿಸಿದ್ದರು.