
ಕಲಬುರಗಿ,ಮೇ.15: ದಕ್ಷಿಣ ಮತಕ್ಷೇತ್ರದಲ್ಲಿ 21 ಸಾವಿರ ಮತಗಳ ಅಂತರದಿಂದ ಗೆದ್ದಿರುವ ಹಾಗೂ ಸರಾಸರಿ ಶೇಕಡಾವಾರು 54.74ರಷ್ಟು ಮತಗಳಿಕೆಯಲ್ಲಿ ಜಿಲ್ಲೆಯಲ್ಲಿಯೇ ಎಲ್ಲಕ್ಕಿಂತ ಹೆಚ್ಚಿನ ಸಾಧನೆ ಮಾಡಿ ಗಮನಸೆಳೆದಿರುವ ನೂತನ ಶಾಸಕ ಅಲ್ಲಮಪ್ರಭು ಪಾಟೀಲ್ ಅವರಿಗೆ ಕಾಂಗ್ರೆಸ್ ವರಿಷ್ಠರು ಹಾಗೂ ಎಐಸಿಸಿ ಅಧ್ಯಕ್ಷ ಡಾ. ಮಲ್ಲಿಕಾರ್ಜುನ್ ಖರ್ಗೆ ಅವರು ಬೆನ್ನು ಚಪ್ಪರಿಸಿ ಶುಭ ಕೋರಿದ್ದಾರೆ.
ಅಲ್ಲಮಪ್ರಭು ಪಾಟೀಲ್ ಅವರು ಶಾಸಕಾಂಗ ಪಕ್ಷದ ಸಭೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ತೆರಳಲಿರುವುದರಿಂದ ಮೊದಲು ಸದಾಶಿವನಗರದಲ್ಲಿರುವ ಖರ್ಗೆಯವರ ನಿವಾಸಕ್ಕೆ ಭೇಟಿ ನೀಡಿ ಅಲ್ಲಿ ಖರ್ಗೆಯವರನ್ನು ಕಂಡು ಗೌರವಿಸಲು ಹೋದಾಗ ಖರ್ಗೆಯವರೇ ತಾವೇ ಮುಂದಾಗಿ ಅಲ್ಲಮಪ್ರಭು ಪಾಟೀಲ್ ಅವರಿಗೆ ಹಾರ ಹಾಕುತ್ತ ಶುಭವಾಗಲಿ ಎಂದರು.
ಪಕ್ಷ ಸಂಘಟನೆಗೆ ಕೆಲಸ ಮಾಡಿದ್ದೀರಿ. ನಿಮಗೆ ಜನ ಆಶೀರ್ವಾದ ಮಾಡಿದ್ದಾರೆ. ಜನರ ಕೆಲಸಗಳನ್ನೇ ಸದಾಕಾಲ ಮಾಡುತ್ತಿರುವ ನಿಮಗೆ ಸದಾಕಾಲ ಒಳ್ಳೆಯದೇ ಆಗುತ್ತದೆ ಎಂದು ಇದೇ ಸಂದರ್ಭದಲ್ಲಿ ಖರ್ಗೆಯವರು ಅಲ್ಲಮಪ್ರಭು ಪಾಟೀಲ್ ಅವರಿಗೆ ಹೇಳಿದರು. ಇದೇ ಸಂದರ್ಭದಲ್ಲಿ ಚಿತ್ತಾಪುರ ಕ್ಷೇತ್ರದ ಶಾಸಕ ಪ್ರಿಯಾಂಕ್ ಖರ್ಗೆ ಅವರನ್ನೂ ಸಹ ಅಲ್ಲಮಪ್ರಭು ಪಾಟೀಲ್ ಹಾಗೂ ಅವರ ಬೆಂಬಲಿಗರು ಭೇಟಿ ಮಾಡಿದರು.
ಜನರ ಋಣ ತೀರಿಸಲಾಗದು: ದಕ್ಷಿಣ ಮತಕ್ಷೇತ್ರದಲ್ಲಿ ಏಕಾಏಕಿ ಎದ್ದಿರುವ ಕಾಂಗ್ರೆಸ್ ಅಲೆಗೆ ಬಿಜೆಪಿ ಕೊಚ್ಚಿ ಹೋಗಿದೆ. ಜನರೇ ಕೈ ಹಿಡಿದಿದ್ದಾರೆ. ಪ್ರೀತಿಯಿಂದ ಬಂದು ಮತ ಹಾಕಿ ಗೆಲ್ಲಿಸಿದ್ದಾರೆ. ಶಾಸಕನಾಗಿ ಜನರ ಕೆಲಸ ಮಾಡಬೇಕೆಂಬ ನನ್ನ ಬಯಕೆ ಇತ್ತು. ಜನ ಮತ ಹಾಕಿ ಅದನ್ನು ಈಡೇರಿಸಿದ್ದಾರೆ. ಜನರ ಋಣವನ್ನು ಅವರು ಬಯಸಿದಂತೆ ಪ್ರಗತಿಪರ ಕೆಲಸಗಳನ್ನು ಮಾಡುವ ಮೂಲಕ ತೀರಿಸುವೆ ಎಂದು ಇದೇ ಸಂದರ್ಭದಲ್ಲಿ ಶಾಸಕ ಅಲ್ಲಮಪ್ರಭು ಪಾಟೀಲ್ ಅವರು ಹೇಳಿದರು.
ತಮ್ಮ ಗೆಲುವನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಗೆ ಮತ್ತು ಜನರಿಗೆ ಅರ್ಪಿಸಿದ ಅವರು, ಜನರೇ ಪ್ರೀತಿಯಿಂದ ಮುಂದೆ ಬಂದು ತಮಗೆ ಹೆಚ್ಚಿನ ಬಹುಮತದೊಂದಿಗೆ ಶಾಸಕರನ್ನಾಗಿ ಮಾಡಿದ್ದಾರೆ. ಅವರ ಪ್ರೀತಿಗೆ ತಾವು ಸದಾ ಋಣಿ ಎಂದರು.
ಮುಂಬರುವ ದಿನಗಳಲ್ಲಿ ಪ್ರಾಮಾಣಿಕವಾಗಿ ದಕ್ಷಿಣ ಮತಕ್ಷೇತ್ರದ ಜನರಿಗಾಗಿ ಸೇವೆ ಸಲ್ಲಿಸುವೆ. ಯಾರನ್ನೂ ಟೀಕಿಸುವುದಿಲ್ಲ. ಹಿಂದಿನ ಶಾಸಕರು ಅಭಿವೃದ್ಧಿ ಮಾಡುವಲ್ಲಿ ಎಡವಿದ್ದಾರೆ. ತಾವು ಅದನ್ನು ಸುಧಾರಿಸಿ ಹೆಚ್ಚಿನ ಅಭಿವೃದ್ಧಿ ಮಾಡುವುದಾಗಿ ಅವರು ಹೇಳಿದರು.
ದಕ್ಷಿಣದಲ್ಲಿ ಕಳೆದ ಎರಡು ದಶಕಗಳಿಂದ ಗೆಲ್ಲುತ್ತ ಹೊರಟಿದ್ದ, ಶಾಸಕರಾಗಿ ಅಧಿಕಾರದಲ್ಲಿದ್ದ ರೇವೂರ್ ಕುಟುಂಬಕ್ಕೆ ಈ ಬಾರಿ ಸೋಲಾಗಿದೆ. ಸಾಕಷ್ಟು ಬಾರಿ ಇಡೀ ಕ್ಷೇತ್ರ ಸುತ್ತುತ್ತಿರುವೆ. ಎಲ್ಲೆಲ್ಲಿ ಏನೆಲ್ಲ ಕೊರತೆಗಳಿವೆ ಎನ್ನುವುದು ನನಗೆ ಗೊತ್ತಿದೆ. ಕ್ಷೇತ್ರದಲ್ಲಿ ಮೂಲ ಸೌಲತ್ತಿನ ಕೊರತೆ ನನ್ನ ಗಮನದಲ್ಲಿದೆ. ಒಳ ಚರಂಡಿ ಇಲ್ಲದೇ ಅನೇಕ ಬಡಾವಣೆಗಳಲ್ಲಿ ಸಮಸ್ಯೆ ಕಾಡುತ್ತಿದೆ. ಇಂತಹ ಸಮಸ್ಯೆಗಳ ಕುರಿತು ಸಂಪೂರ್ಣ ಅರಿವಿದೆ. ಅವನ್ನೆಲ್ಲ ಪರಿಹರಿಸುವ ದಿಸೆಯಲ್ಲಿ ಕೆಲಸ ಮಾಡುವೆ ಎಂದು ಅವರು ಭರವಸೆ ನೀಡಿದರು.
ಜನರೇ ಪ್ರೀತಿಯಿಂದ ನಾನು ನಿರೀಕ್ಷೆ ಮಾಡಿದ್ದಕ್ಕಿಂತ ಹೆಚ್ಚಿನ ಮತಗಳನ್ನು ಕೊಟ್ಟು ಗೆಲ್ಲಿಸಿದ್ದಾರೆ. ಹೀಗಾಗಿ ಜನರ ಋಣ ತೀರಿಸುವ ಜವಾಬ್ದಾರಿ ನನ್ನ ಮೇಲಿದೆ. ನಮ್ಮ ಪಕ್ಷವೇ ಬಹುಮತದ ಸರ್ಕಾರ ಬಂದಿರುವುದರಿಂದ ಹಿಂದೆಂದಿಗಿಂತಲೂ ಹೆಚ್ಚಿನ ಕೆಲಸಗಳು ಈ ಬಾರಿ ಆಗಲಿವೆ. ಕಾಂಗ್ರೆಸ್ ವರಿಷ್ಠರಾದ ಡಾ. ಖರ್ಗೆ ಅವರ ಮಾರ್ಗದರ್ಶನವಿರಲಿದೆ. ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಉಸ್ತುವಾರಿಯಲ್ಲಿ ಕಲಬುರ್ಗಿ ಸೇರಿದಮತೆ ರಾಜ್ಯದಲ್ಲಿ ಹೆಚ್ಚಿನ ಪ್ರಗತಿಪರ ಕೆಲಸಗಳು ಆಗಲಿವೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.