ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೋವಿಡ್ ಹೆಲ್ಪ್‌ಲೈನ್ ಸಭೆ

ಮಂಗಳೂರು, ಎ.೩೦- ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಕೋವಿಡ್ ೧೯ ಹೆಲ್ಪ್‌ಲೈನ್ ಸಭೆಯು ಸಂಚಾಲಕರಾದ ಶ್ರೀ ಐವನ್ ಡಿ ಸೋಜರವರ ನೇತೃತ್ವದಲ್ಲಿ ಇಂದು ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆಯಿತು. ಈ ಸಭೆಯಲ್ಲಿ ಈ ಕೆಳಗಿನ ಪ್ರಮುಖ ತೀರ್ಮಾನಗಳನ್ನು ಕೈಗೊಳ್ಳಲಾಯಿತು.
ಮಾರುಕಟ್ಟೆಗಳಲ್ಲಿ ಅವಶ್ಯ ವಸ್ತುಗಳ ಬೆಲೆ ದುಪ್ಪಟ್ಟು ಆಗಿದ್ದು, ನಿಗದಿತ ಬೆಲೆಗಿಂತ ಹೆಚ್ಚಿಗೆ ಮಾರುವ ಬಗ್ಗೆ ಹೆಲ್ಪ್‌ಲೈನ್ ಗಮನಕ್ಕೆ ಬಂದಿದ್ದು, ಈ ಬಗ್ಗೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಯವರಿಗೆ ಒತ್ತಾಯಿಸಲು ತೀರ್ಮಾನಿಸಲಾಯಿತು.
ಕಾರ್ಮಿಕರು ವಲಸೆ ಹೋಗಲು ಪ್ರಾರಂಭಿಸಿದ್ದು, ಇದನ್ನು ತಡೆಯಲು ಕಾರ್ಮಿಕರಿಗೆ ಮೂಲಭೂತ ಸೌಕರ್ಯವನ್ನು ಒದಗಿಸುವ ಜೊತೆಗೆ ಊಟ-ತಿಂಡಿ ವ್ಯವಸ್ಥೆ ಮಾಡಲು ಕಾರ್ಮಿಕ ಇಲಾಖೆ ಸರಕಾರ ಕ್ರಮ ಕೈಗೊಳ್ಳಬೇಕೆಂದು ಸರಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.
ಕೋವಿಡ್ ಲಸಿಕೆಯ ಅಭಾವದಿಂದ ಜನರು ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಅಲೆದಾಡುತ್ತಿದ್ದು, ರಾಜ್ಯ ಸರಕಾರ ಕೋವಿಡ್ ಲಸಿಕೆಯನ್ನು ಕೂಡಲೇ ಜಿಲ್ಲೆಗೆ ಪೂರೈಸಲು ಜಿಲ್ಲಾ ಉಸ್ತುವಾರಿ ಮಂತ್ರಿಗಳಿಗೆ ಒತ್ತಾಯಿಸಲು ತೀರ್ಮಾನಿಸಲಾಯಿತು.
ಜಿಲ್ಲೆಯಲ್ಲಿ ಆಕ್ಸಿಜನ್ ಬೆಡ್‌ಗಳ ಕೊರತೆಯಿದ್ದು, ಕೂಡಲೇ ತಾತ್ಕಲಿಕ ನೆಲೆಯಲ್ಲಿ ಆಕ್ಸಿಜನ್ ಪೂರೈಕೆಯುಳ್ಳ ಬೆಡ್‌ಗಳನ್ನು ಆಸ್ಪತ್ರೆಯನ್ನಾಗಿ ಪರಿವರ್ತಿಸಿ, ಕನಿಷ್ಠ ೫೦೦ ಬೆಡ್‌ಗಳನ್ನು ನಿರ್ಮಿಸಲು ಸರಕಾರ ಕ್ರಮ ಕೈಗೊಳ್ಳಬೇಕೆಂದು ಮುಖ್ಯ ಮಂತ್ರಿಯನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.
ಕರ್ಫ್ಯೂ ವೇಳೆಯಲ್ಲಿ ನಿರ್ಗತಿಕರಿಗೆ ವಸತಿ ಮತ್ತು ಜೌಷಧ ಪೂರೈಸುವ ಬಗ್ಗೆ ಇಲಾಖೆಯು ಕ್ರಮ ಕೈಗೊಳ್ಳಲು ಸಂಬಂಧಪಟ್ಟ್ಟ ಅದಿಕಾರಿಗಳನ್ನು ವಿನಂತಿಸಲು ತೀರ್ಮಾನಿಸಲಾಯಿತು.
ಖಾಸಗಿ ಆಸ್ಪತ್ರೆಗಳಲ್ಲಿಯೂ ಲಸಿಕೆ ನೀಡಲು ಆರೋಗ್ಯ ಇಲಾಖೆಯಿಂದ ಕ್ರಮ ಕೈಗೊಳ್ಳಬೇಕೆಂದು ಮತ್ತು ಇದಕ್ಕೆ ತಗಲುವ ವೆಚ್ಚವನ್ನು ಸರಕಾರವೇ ಭರಿಸಬೇಕೆಂದು ಆರೋಗ್ಯ ಸಚಿವರಿಗೆ ಒತ್ತಾಯಿಸಲು ತೀರ್ಮಾನಿಸಲಾಯಿತು.
ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಲಸಿಕೆ ನೀಡುವ ಬಗ್ಗೆ ಅರಿವು ಮೂಡಿಸಲು ಮತ್ತು ಲಸಿಕೆ ನೀಡುವ ಶಿಬಿರಗಳನ್ನು ಏರ್ಪಡಿಸಿ, ಲಸಿಕೆ ಕಡ್ಡಾಯವಾಗಿ ಪಡೆಯಬೇಕೆಂದು ಜಾಗೃತಿ ಆಂದೋಲನ ನಡೆಸಲು ತೀರ್ಮಾನಿಸಲಾಯಿತು.
ಸರಕಾರದಿಂದ ಕಾರ್ಮಿಕರಿಗೆ ಮತ್ತು ಕಡು ಬಡವರಿಗೆ ೧೦ಕೆ.ಜಿ ಅಕ್ಕಿಯ ಜೊತೆಗೆ ದಿನಸಿ ಕಿಟ್ ಗಳನ್ನು ನೀಡಬೇಕೆಂದು ಸರಕಾರವನ್ನು ಒತ್ತಾಯಿಸಲು ತೀರ್ಮಾನಿಸಲಾಯಿತು.
ರಿಕ್ಷಾ, ಕಾರು, ಟೆಂಪೋ ವಾಹನ ಚಾಲಕರುಗಳಿಗೆ ಕನಿಷ್ಠ ರೂ.೧೦,೦೦೦ ಸರಕಾರದಿಂದ ನೀಡಲು ಕ್ರಮ ಕೈಗೊಳ್ಳಬೇಕೆಂದು ಸರಕಾರಕ್ಕೆ ಒತ್ತಾಯಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಕೈಗೊಂಡ ನಿರ್ಣಯಗಳನ್ನು ಜಿಲ್ಲಾಧಿಕಾರಿಯವರ ಮುಖಾಂತರ ಸರಕಾರಕ್ಕೆ ಕಳುಹಿಸಿ ಕೊಡಲು ತೀರ್ಮಾನಿಸಲಾಯಿತು. ಕೋವಿಡ್ ಹೆಲ್ಪ್ ಲೈನ್ ಸದಸ್ಯರುಗಳಾದ ಶ್ರೀ ಮೊಹಮ್ಮದ್ ಕುಂಜತ್ತ್ ಬೈಲ್, ಶ್ರೀ ಸಂತೋಷ್ ಕುಮಾರ್ ಶೆಟ್ಟಿ ಉಳ್ಳಾಲ್, ಶ್ರೀ ಗಣೇಶ್ ಪೂಜಾರಿ, ಶ್ರೀ ವಿವೇಕ್ ರಾಜ್ ಪೂಜಾರಿ, ಶ್ರೀ ಮಹೇಶ್ ಕುಮಾರ್, ಶ್ರೀ ಯೂಸೂಫ್ ಉಚ್ಛಿಲ್, ಶ್ರೀ ಸತೀಶ್ ಪೆಂಗಲ್ ಶ್ರೀ ಅಶೀತ್ ಪಿರೇರಾ, ಶ್ರೀ ಮಿಲಾಜ್ ಅತ್ತಾವರ, ಶ್ರೀ ಯೋಗಿಶ್ ಶೆಣೈ, ಶ್ರೀ ಪ್ರಕಾಶ್ ಸಾಲಿಯಾನ್ ಶ್ರೀ ಅಭಿಬುಲ್ಲ ಮುಂತಾದವರು ಉಪಸ್ಥಿತರಿದ್ದರು.