ರಾಯಚೂರು,ಮಾ.೨೪- ಹಲ್ಲುಗಳು ದೇಹದ ಅತಿ ಸೂಕ್ಷ್ಮ ಭಾಗಗಳಾಗಿದ್ದು, ಶಸ್ತ್ರಚಿಕಿತ್ಸೆ, ಲೇಸರ್ ಚಿಕಿತ್ಸೆ, ರೂಟ್ ಕೆನಾಲ್, ಫಿಲ್ಲಿಂಗ್ ಸೇರಿದಂತೆ ಹಲ್ಲು ಹುಳುಕು, ಬಾಯಿಯಿಂದ ದುರ್ವಾಸನೆ ತಡೆಹಿಡಿಯುವ ನಿಟ್ಟಿನಲ್ಲಿ ದಂತ ಚಿಕಿತ್ಸೆ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸಬೇಕು. ಪ್ರತಿಯೊಬ್ಬರ ಆರೊಗ್ಯದಲ್ಲಿ ಸುಧಾರಣೆ ಕಾಣಬೇಕು ಎಂದು ನವೋದಯ ಶಿಕ್ಷಣ ಸಂಸ್ಥೆ ಕುಲಸಚಿವ ಡಾ.ಟಿ.ಶ್ರೀನಿವಾಸ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಾಯಚೂರು ವಿಶ್ವವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನೆ ಹಾಗೂ ನವೋದಯ ದಂತ ವೈದ್ಯಕೀಯ ಮಹಾವಿದ್ಯಾಲಯ ಇವರ ಸಹಯೋಗದಲ್ಲಿ ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ ದಂತ ತಪಾಸಣೆ ಹಾಗೂ ಆರೋಗ್ಯ ಶಿಕ್ಷಣ ಕಾರ್ಯಕ್ರಮವನ್ನು ರಾಯಚೂರು ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ಗುರುವಾರ ಆಯೋಜಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ರಾಯಚೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ವಿಶ್ವನಾಥ ಎಂ., ಮಾತನಾಡಿ, ಸಾರ್ವಜನಿಕರು ತಮ್ಮ ಹಲ್ಲಿನ ಬಗ್ಗೆ ಕಾಳಜಿ ವಹಿಸುವುದು ಮುಖ್ಯವಾಗಿದೆ. ಇತ್ತೀಚೆಗೆ ವಯಸ್ಸಾದವರಿಗಿಂತ ಯುವಕರಲ್ಲಿ ಹೆಚ್ಚಾಗಿ ಹಲ್ಲಿನ ತೊಂದರೆ ಕಾಣಿಸಿಕೊಳ್ಳುತ್ತಿರುವುದಕ್ಕೆ ತಂಬಾಕು, ಗುಟಕಾ, ನಸಿ, ಪಾನ್, ಅಡಿಕೆ ಇವೆಲ್ಲಾ ಕಾರಣವಾಗಿದ್ದು, ಇವೆಲ್ಲವನ್ನು ತಿರಸ್ಕರಿಸಿದಾಗ ಮಾತ್ರ ನಿಮ್ಮ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಸಣ್ಣ ಪುಟ್ಟ ಕಾಯಿಲೆಗಳು ನಮಗೇ ಅರಿವಿಲ್ಲದಂತೆ ದೊಡ್ಡ ಪ್ರಮಾಣದ ಹಲ್ಲಿನ ತೊಂದರೆಗಳಾಗಬಹುದು. ಇದನ್ನು ತಪ್ಪಿಸಲು ಪ್ರತಿಯೊಬ್ಬ ವಿದ್ಯಾರ್ಥಿಯು ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಸಲಹೆ ನೀಡುವುದರೊಂದಿಗೆ ಈ ಒಂದು ಹಲ್ಲಿನ ತಪಾಸಣೆ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಲು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನವೋದಯ ದಂತ ವೈದೈಕೀಯ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ.ಗಿರೀಶ್ ಕಟ್ಟಿ, ಪ್ರಾಸ್ತಾವಿಕವಾಗಿ ಮಾತನಾಡಿದ ಅವರು, ಬಾಯಿ ಮತ್ತು ಹಲ್ಲುಗಳ ಬಗ್ಗೆ ಸಾಕಷ್ಟು ಅರಿವು ಜನರಲ್ಲಿ ಇಲ್ಲ. ಈ ಕಾರ್ಯಕ್ರಮದ ಮುಖ್ಯ ಉದ್ದೇಶ ಹಲ್ಲುಗಳನ್ನು ಸಂರಕ್ಷಿಸುವುದರೊಂದಿಗೆ ಬಹಳಷ್ಟು ರೋಗಗಳನ್ನು ತಡೆಯುವುದಾಗಿದೆ ಎಂದು ಸಲಹೆ ಕೊಟ್ಟರು.
ಈ ಸಂದರ್ಭದಲ್ಲಿ ಕುಲಸಚಿವ (ಮೌಲ್ಯಮಾಪನ) ಪ್ರೊ.ಯರಿಸ್ವಾಮಿ ಎಂ., ಎನ್.ಎಸ್.ಎಸ್ ಸಂಯೋಜನಾಧಿಕಾರಿ ಮತ್ತು ವಿದ್ಯಾರ್ಥಿ ಕಲ್ಯಾಣಾಧಿಕಾರಿಗಳಾದ ಡಾ.ಜಿ.ಎಸ್.ಬಿರಾದಾರ, ನವೋದಯ ದಂತ ವೈದೈಕೀಯ ಮಹಾವಿದ್ಯಾಲಯದ ಮುಖ್ಯಸ್ಥರಾದ ಡಾ.ಸುರೇಶ ಬಾಬು ಅವರು ಬಾಯಿ ಮತ್ತು ಹಲ್ಲುಗಳ ಹಲವು ಸಮಸ್ಯೆಗಳನ್ನು ತಡೆಗಟ್ಟಲು ಹಾಗೂ ನಿವಾರಣೆ ವಿಧಗಳನ್ನು ತಿಳಿಸಿದರು, ಡಾ.ಝಹೀರ್ ಅಹ್ಮದ್, ಡಾ.ಸೋಮನಾಥ್ ರೆಡ್ಡಿ ವೇದಿಕೆ ಮೇಲೆ ಉಪಸ್ಥಿತರಿದ್ದರು.
ವಾಣಿಜ್ಯ ವಿಭಾಗದ ವಿದ್ಯಾರ್ಥಿ ದೀಪಾ ಸಂಗಡಿಗರು ಪ್ರಾರ್ಥಿಸಿದರು, ಇತಿಹಾಸ ವಿಭಾಗದ ವಿದ್ಯಾರ್ಥಿ ತೈಮದ್ ಪಾಷ ಸ್ವಾಗತಿಸಿದರು, ಸುಶ್ಮಾ ನಿರೂಪಿಸಿದರು. ಸಮಾಜಶಾಸ್ತ್ರ ವಿಭಾಗದ ವಿದ್ಯಾರ್ಥಿನಿ ಶಮೀಮ್ ವಂದಿಸಿದರು. ರಾಷ್ಟ್ರೀಯ ಸೇವಾ ಯೋಜನೆ ಘಟಕದ ಪ್ರತಿನಿಧಿ ಡಾ.ಪದ್ಮಜಾ ದೇಸಾಯಿ, ಬಜಾರಪ್ಪ, ವಿವಿಧ ವಿಭಾಗಗಳ ಅತಿಥಿ ಉಪನ್ಯಾಸಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.