ದಂಡ ವಿಧಿಸಿ ವಾಹನಗಳ ಬಿಡುಗಡೆ


ಬೆಂಗಳೂರು,ಜೂ.೯-ಮಹಾಮಾರಿ ಕೊರೊನಾ ನಿಯಂತ್ರಣಕ್ಕಾಗಿ ಜಾರಿ ಮಾಡಿರುವ ಲಾಕ್?ಡೌನ್ ನಿಯಮಗಳನ್ನು ಉಲ್ಲಂಘಿಸಿ ರಸ್ತೆಗಿಳಿದು ಜಪ್ತಿಯಾಗಿರುವ ವಾಹನಗಳನ್ನು ದಂಡ ವಿಧಿಸಿ ಬಿಡುಗಡೆ ಮಾಡಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿದ ಬೆನ್ನಲ್ಲೇ ನಗರ ಪೊಲೀಸರು ದಂಡವನ್ನು ನಿಗಧಿಪಡಿಸಿ ವಶಪಡಿಸಿಕೊಂಡ ವಾಹನಗಳ ಬಿಡುಗಡೆ ಮಾಡಲು ಮುಂದಾಗಿದ್ದಾರೆ.
ಕೊರೊನಾ ಎರಡನೇ ಅಲೆಯ ಲಾಕ್ ಡೌನ್ ಜಾರಿಯಾದ ಬಳಿಕ ಮಾರ್ಗ ಸೂಚಿಗಳನ್ನು ಉಲ್ಲಂಘಿಸಿ ರಸ್ತೆಗಿಳಿದ ಸಾವಿರಾರು ವಾಹನಗಳನ್ನು ಜಪ್ತಿ ಮಾಡಲಾಗಿತ್ತು.
ಪೊಲೀಸ್ ಠಾಣೆಯ ಆವರಣ ಅಲ್ಲದೇ ಇನ್ನಿತರ ನಿಗಧಿ ಪಡಿಸಿದ ಜಾಗದಲ್ಲಿ ನಿಲ್ಲಿಸಿದ ವಾಹನಗಳನ್ನು ಬಿಡುಗಡೆ ಮಾಡಲು ದ್ವಿಚಕ್ರ ವಾಹನಕ್ಕೆ ೫೦೦ರೂ ತ್ರಿಚಕ್ರ ವಾಹನಗಳಿಗೆ ೭೫೦ರೂ ಹಾಗೂ ನಾಲ್ಕು ಚಕ್ರದ ವಾಹನಗಳಿಗೆ ೧೦೦೦ರೂ ಗಳ ದಂಡ ನಿಗಧಿ ಪಡಿಸಲಾಗಿದೆ.
ಅದರಂತೆ ದಂಡ ಪಾವತಿಸಿ ವಾಹನಗಳ ಮಾಲೀಕರು ಜಪ್ತಿ ಮಾಡಿದ ವಾಹನಗಳನ್ನು ಕೊರೊನಾ ನಿಯಮಗಳನ್ನು ಪಾಲನೆಮಾಡಿ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಕೋವಿಡ್ ನಿರ್ವಹಣೆ ಮತ್ತು ಚಿಕಿತ್ಸೆಗೆ ಸಂಬಂಧಿಸಿದಂತೆ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳನ್ನು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎ.ಎಸ್ ಓಕಾ ನೇತೃತ್ವದ ವಿಭಾಗೀಯ ಪೀಠ ಕೊರೊನಾ ನಿಯಂತ್ರಣಕ್ಕಾಗಿ ಜಾರಿ ಮಾಡಿರುವ ಲಾಕ್?ಡೌನ್ ನಿಯಮಗಳನ್ನು ಉಲ್ಲಂಘಿಸಿ ರಸ್ತೆಗಿಳಿದು ಜಪ್ತಿಯಾಗಿರುವ ವಾಹನಗಳನ್ನು ದಂಡ ವಿಧಿಸಿ ಬಿಡುಗಡೆ ಮಾಡಲು ರಾಜ್ಯ ಸರ್ಕಾರಕ್ಕೆ ಅನುಮತಿ ನೀಡಿತ್ತು.
ವಿಚಾರಣೆ ವೇಳೆ ಈ ಮೊದಲೇ ಸಲ್ಲಿಸಿದ್ದ ಮಧ್ಯಂತರ ಅರ್ಜಿ ಕುರಿತು ಪ್ರಸ್ತಾಪಿಸಿದ ಸರ್ಕಾರದ ಪರ ವಕೀಲರು, ಲಾಕ್?ಡೌನ್ ಉಲ್ಲಂಘಿಸಿದ ಆರೋಪದಡಿ ದ್ವಿಚಕ್ರ, ತ್ರಿಚಕ್ರ ಮತ್ತು ನಾಲ್ಕು ಚಕ್ರ ವಾಹನ ಸೇರಿದಂತೆ ಒಂದೂವರೆ ಲಕ್ಷಕ್ಕೂ ಹೆಚ್ಚು ವಾಹನಗಳನ್ನು ಜಪ್ತಿ ಮಾಡಲಾಗಿದೆ. ಈ ಎಲ್ಲಾ ವಾಹನಗಳ ಬಿಡುಗಡೆ ಕೋರಿ ಮಾಲಿಕರು ಮ್ಯಾಜಿಸ್ಟ್ರೇಟ್ ಕೋರ್ಟ್ ಮುಂದೆ ಸೇರಿದರೆ ಜನಜಂಗುಳಿ ಸೃಷ್ಟಿಯಾಗುತ್ತದೆ. ಹಾಗೆಯೇ ಬೃಹತ್ ಸಂಖ್ಯೆಯ ವಾಹನಗಳನ್ನು ನಿಲುಗಡೆ ಮಾಡಲು ಸ್ಥಳಾವಕಾಶದ ಕೊರತೆಯೂ ಎದುರಾಗಿದೆ. ಆದ್ದರಿಂದ, ದಂಡ ಪಾವತಿಸಿಕೊಂಡು ವಾಹನಗಳನ್ನು ಬಿಡುಗಡೆ ಮಾಡಲು ಅನುಮತಿ ನೀಡಬೇಕು ಎಂದು ಕೋರಿದ್ದರು.
ಈ ಹಿಂದೆ ಪೊಲೀಸರು ವಶಪಡಿಸಿಕೊಂಡಿದ್ದ ವಾಹನಗಳ ಬಿಡುಗಡೆಗೆ ೨೦೨೦ರ ಏ.೩೦ರಂದು ಹೈಕೋರ್ಟ್ ಆದೇಶಿಸಿತ್ತು. ಆ ಆದೇಶವನ್ನು ವಿಸ್ತರಿಸಬೇಕು ಎಂದು ಕೋರಿದರು. ಮನವಿ ಪುರಸ್ಕರಿಸಿದ ಪೀಠ, ದಂಡ ಪಾವತಿಸಿಕೊಂಡು ವಾಹನ ಬಿಡುಗಡೆ ಮಾಡಲು ಅನುಮತಿ ನೀಡಿ ಆದೇಶಿಸಿತ್ತು.