ಕಲಬುರಗಿ,ಜೂ.16: ಜೂನ್ 25ರಿಂದ ಜುಲೈ 2ರವರೆಗೆ ಇಂಗ್ಲೆಂಡ್ ದೇಶದ ದಂಡಿ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಅಂತಾರಾಷ್ಟ್ರೀಯ ಬಹುಶಿಸ್ತೀಯ ಸಂಶೋಧನಾ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ಕಲಬುರಗಿಯ ಶ್ರೀ ಶರಣಬಸವೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಕಾಲೇಜಿನ ಐವರು ವಿದ್ಯಾರ್ಥಿಗಳು ಆಯ್ಕೆಗೊಂಡಿದ್ದಾರೆ ಎಂದು ಗುಲ್ಬರ್ಗ ವಿವಿ ಉಪಕುಲಪತಿ ಪ್ರೊ.ದಯಾನಂದ ಅಗಸರ್ ತಿಳಿಸಿದರು.
ಮಹಾದಾಸೋಹಿ ಶ್ರೀ ಶರಣಬಸವೇಶ್ವರ ಸಂಸ್ಥಾನದಲ್ಲಿ ಎಂಟನೇ ಪೀಠಾಧಿಪತಿಗಳು ಹಾಗೂ ಶರಣಬಸವ ವಿಶ್ವವಿದ್ಯಾಲಯದ ಕುಲಾಧಿಪತಿಗಳಾದ ಡಾ.ಶರಣಬಸವಪ್ಪ ಅಪ್ಪಾ ಅವರ ಸಾನ್ನಿಧ್ಯದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಡಾ.ಅಗಸರ್ ಮಾತನಾಡುತ್ತಾ ಈ ಮಾಹಿತಿ ಹಂಚಿಕೊಂಡರು. ಎಸ್.ಬಿ. ಸೈನ್ಸ್ ವಿಭಾಗದ ವಿದ್ಯಾರ್ಥಿಗಳಾದ ಅವಿನಾಶ್ ಎಂ., ಮೋನಿಕಾ ಪಂಚಾಳ್, ಸಂಜನಾ ಹಿಬಾರೆ, ಕಲಾ ವಿಭಾಗದ ವಿದ್ಯಾರ್ಥಿ ಶ್ರವಣಕುಮಾರ್ ದೇವೀಂದ್ರಕುಮಾರ್ ಮತ್ತು ವಾಣಿಜ್ಯ ವಿಭಾಗದ ಆರತಿ ಚವ್ಹಾಣ್ ಈ ತಂಡದಲ್ಲಿದ್ದಾರೆ ಎಂದರು.
ಗುಲ್ಬರ್ಗ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಡಾ.ಚಂದ್ರಕಾಂತ ಕೆಳಮನಿ ನೇತೃತ್ವದ ತಂಡದೊಂದಿಗೆ ಈ ವಿದ್ಯಾರ್ಥಿಗಳು ಇದೇ ಜೂನ್ 22ರಂದು ರಾತ್ರಿ ಗ್ರೇಟ್ ಬ್ರಿಟನ್ ದೇಶದ ದಂಡಿ ವಿವಿಗೆ ಪ್ರಯಾಣ ಬೆಳೆಸಲಿದ್ದಾರೆ ಎಂದು ಡಾ.ಅಗಸರ್ ಹೇಳಿದರು.
ಕರ್ನಾಟಕ ಉನ್ನತ ಶಿಕ್ಷಣ ಪರಿಷತ್ತು ಮತ್ತು ಬ್ರಿಟಿಷ್ ಕೌನ್ಸಿಲ್ ಮಧ್ಯೆ ಏರ್ಪಟ್ಟ ಒಡಂಬಡಿಕೆಯ ಆಧಾರದ ಮೇಲೆ ಗುಲ್ಬರ್ಗ ವಿಶ್ವವಿದ್ಯಾಲಯ ವ್ಯಾಪ್ತಿಯ ಐವರು ಪದವಿ ಹಂತದ ವಿದ್ಯಾರ್ಥಿಗಳನ್ನು ಈ ಸ್ಪರ್ಧೆಗೆ ಆಯ್ಕೆ ಮಾಡಲಾಗಿದೆ. ಕಲಬುರಗಿ ಜಿಲ್ಲೆಯ ಬುಡಕಟ್ಟು ಜನರ (ಲಂಬಾಣಿ) ಕರುಳಿನ ಆರೋಗ್ಯದಲ್ಲಿ ಪ್ರಧಾನ ಪಾತ್ರ ವಹಿಸುವ ಪೌಷ್ಠಿಕಾಂಶಗಳು, ರೋಗ ನಿರೋಧಕ ಶಕ್ತಿಯ ನಿರ್ವಹಣೆ ಕುರಿತಂತೆ ಈ ವಿದ್ಯಾರ್ಥಿಗಳು ತಮ್ಮ ಸಂಶೋಧನಾ ಪ್ರಬಂಧ ಮಂಡಿಸಲಿದ್ದು, ಕಳೆದ ನಾಲ್ಕು ತಿಂಗಳಿಂದ ಈ ವಿದ್ಯಾರ್ಥಿಗಳು ಸಂಶೋಧನಾ ಅಧ್ಯಯನದಲ್ಲಿ ನಿರತರಾಗಿದ್ದಾರೆ ಎಂದು ಮಾಹಿತಿ ಹಂಚಿಕೊಂಡರು.
ಐದು ತಾಂಡಾಗಳಲ್ಲಿ ಅಧ್ಯಯನ:
ಮಡಕಿ ತಾಂಡಾ, ಕುಸನೂರ್ ತಾಂಡಾ, ಸಣ್ಣೂರ್ ತಾಂಡಾ ಮತ್ತು ಕಿಣ್ಣಿ ತಾಂಡಾ ಸೇರಿದಂತೆ ಐದು ತಾಂಡಾಗಳಲ್ಲಿ ಅಧ್ಯಯನ ಕೈಗೊಳ್ಳಲಾಗಿದೆ. ವೈಜ್ಞಾನಿಕವಾಗಿ ಸಂಶೋಧನಾ ಅಧ್ಯಯನಕ್ಕೆ ಪೂರಕವಾಗಿ ಓರ್ವ ವಯಸ್ಕ ಮತ್ತು ಒಂದು ಮಗುವಿನ ಮಲ ಮಾದರಿಯನ್ನು ಸಂಗ್ರಹಿಸಿ ಅಧ್ಯಯನ ಕೈಗೊಳ್ಳಲಾಗಿದೆ ಎಂದು ಪದವಿ ಹಂತದ ವಿದ್ಯಾರ್ಥಿಗಳ ಸ್ಪರ್ಧಾ ತಂಡದ ಮುಂದಾಳತ್ವ ವಹಿಸಿರುವ ಗುಲ್ಬರ್ಗ ವಿವಿ ಜೈವಿಕ ತಂತ್ರಜ್ಞಾನ ವಿಭಾಗದ ಡಾ.ಚಂದ್ರಕಾಂತ ಕೆಳಮನಿ ವಿವರಿಸಿದರು.
ಸಂಶೋಧನಾ ಅಧ್ಯಯನದ ಭಾಗವಾಗಿರುವ ಐವರು ವಿದ್ಯಾರ್ಥಿಗಳ ಪೈಕಿ ಕಲಾ ವಿಭಾಗದ ವಿದ್ಯಾರ್ಥಿಗಳು ಅಧ್ಯಯನದ ಸಾಮಾಜಿಕ ಪ್ರಯೋಜನ ಮತ್ತು ಆರೋಗ್ಯದ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರೆ, ಕಾಮರ್ಸ್ ವಿದ್ಯಾರ್ಥಿಗಳು ಉದ್ಯಮಶೀಲತೆಗೆ ಒತ್ತು ನೀಡುವ ನಿಟ್ಟಿನಲ್ಲಿ ಅಧ್ಯಯನದ ಲಾಭಗಳ ಕುರಿತು ಅವಲೋಕಿಸಲಿದ್ದು, ಜೊತೆಗೆ, ಅಗತ್ಯ ದತ್ತಾಂಶಗಳನ್ನು ಒದಗಿಸಿದ್ದಾರೆ. ಇನ್ನುಳಿದಂತೆ ತಂಡದಲ್ಲಿರುವ ವಿಜ್ಞಾನ ವಿಭಾಗದ ಮೂವರು ವಿದ್ಯಾರ್ಥಿಗಳು ಸಂಶೋಧನೆಯ ವೈಜ್ಞಾನಿಕ ಅಧ್ಯಯನ ಕೈಗೊಂಡಿದ್ದಾರೆ ಎಂದರು.
ಸುದ್ದಿಗೋಷ್ಠಿಯಲ್ಲಿ ಹಾಜರಿದ್ದ ಎಲ್ಲ ಐವರು ವಿದ್ಯಾರ್ಥಿಗಳು ಸಂಶೋಧನಾ ಅಧ್ಯಯನದ ಕುರಿತು ತಮ್ಮ ಅನುಭವ ಹಂಚಿಕೊಂಡರು.
ಶ್ರೀ ಶರಣಬಸವೇಶ್ವರ ಸಂಸ್ಥಾನದ ಡಾ.ದಾಕ್ಷಾಯಿಣಿ ಅವ್ವಾಜಿ, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವೇಶ್ವರ ಕಾಲೇಜಿನ ಮೂರೂ ವಿಭಾಗಗಳ ಪ್ರಾಚಾರ್ಯರು, ಉಪನ್ಯಾಸಕರು ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.
ವಿದೇಶದಲ್ಲಿ ವ್ಯಾಸಂಗಕ್ಕೆ ಅವಕಾಶ
ಕಲಬುರಗಿ ಜಿಲ್ಲೆಯ ಲಂಬಾಣಿ ತಾಂಡಾಗಳ ಜನರ ಕರುಳಿನ ಆರೋಗ್ಯದಲ್ಲಿ ಪ್ರಧಾನ ಪಾತ್ರ ವಹಿಸುವ ಪೌಷ್ಠಿಕಾಂಶಗಳು, ರೋಗ ನಿರೋಧಕ ಶಕ್ತಿಯ ನಿರ್ವಹಣೆ ಕುರಿತಂತೆ ಸಂಶೋಧನಾ ಅಧ್ಯಯನ ಕೈಗೊಂಡಿರುವ ಎಲ್ಲ ಐವರು ವಿದ್ಯಾರ್ಥಿಗಳಿಗೆ ಗ್ರೇಟ್ ಬ್ರಿಟನ್ನಿನ ದಂಡಿ ವಿಶ್ವವಿದ್ಯಾಲಯದಲ್ಲಿ ಭವಿಷದಲ್ಲಿ ತಮ್ಮ ಸ್ನಾತಕೋತ್ತರ ವ್ಯಾಸಂಗ ಕೈಗೊಳ್ಳಲು ನಿಶುಲ್ಕ ಅವಕಾಶ ಲಭಿಸಲಿದೆ ಎಂದು ಗುಲ್ಬರ್ಗ ವಿವಿ ಉಪಕುಲಪತಿ ಪ್ರೊ.ದಯಾನಂದ ಅಗಸರ್ ತಿಳಿಸಿದರು.
ಪ್ರಸ್ತುತ ದಂಡಿ ವಿವಿಗೆ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿರುವ ಐವರು ವಿದ್ಯಾರ್ಥಿಗಳ ತಂಡ ಒಟ್ಟು ಐದು ದಿನಗಳ ಕಾಲ ಅಲ್ಲಿದ್ದು, ತಮ್ಮ ಅಧ್ಯಯನ ಮಂಡಿಸಲಿದ್ದಾರೆ ಎಂದರು.
ಗ್ರೇಟ್ ಬ್ರಿಟನ್ ದೇಶದ ದಂಡಿ ವಿಶ್ವವಿದ್ಯಾಲಯದಲ್ಲಿ ನಡೆಯಲಿರುವ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ನಮ್ಮ ಹೆಮ್ಮೆಯ ಶರಣಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನ ಐವರು ವಿದ್ಯಾರ್ಥಿಗಳು ಆಯ್ಕೆಗೊಂಡಿರುವುದು ನಿಜಕ್ಕೂ ಖುಷಿ ತಂದಿದೆ. ಇಂದಿನ ಯುವಪೀಳಿಗೆಗೆ ಈ ವಿದ್ಯಾರ್ಥಿಗಳು ಮಾದರಿಯಾಗಿ ಹೊರಹೊಮ್ಮಿದ್ದಾರೆ.
– ಬಸವರಾಜ ದೇಶಮುಖ,ಕಾರ್ಯದರ್ಶಿಗಳು,ಶರಣಬಸವೇಶ್ವರ ವಿದ್ಯಾವರ್ಧಕ ಸಂಘ