ಥೆಲಸೀಮಿಯಾ ರೋಗಿಗೆ ಅಸ್ಥಿಮಜ್ಜೆ ಕಸಿ

ಬಾಗಲಕೋಟೆ, ಜೂ 11 : ನಗರದ ಬಿ.ವಿ.ವಿ.ಸಂಘದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯ ಚಿಕ್ಕಮಕ್ಕಳ ವಿಭಾಗದಲ್ಲಿ ಥೆಲಸೀಮಿಯಾ ರೋಗದಿಂದ ಬಳಲುತ್ತಿರುವ ರೋಗಿಗಳ ಚಿಕಿತ್ಸೆಗಾಗಿ “ಥೆಲಸೀಮಿಯಾ ಮತ್ತು ಹಿಮೊಫಿಲಿಯಾ ಸಂಸೆ”್ಥಯನ್ನು ಸ್ಥಾಪಿಸಲಾಗಿದೆ. ಬಾಗಲಕೋಟ ಜಿಲ್ಲೆಯಲ್ಲಿ ಥೆಲಸೀಮಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಅಗತ್ಯದ ಚಿಕಿತ್ಸೆಯನ್ನು ನೀಡಲೆಂದು ಶಾಸಕರು ಮತ್ತು ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ ಅವರ ಇಚ್ಛಾಶಕ್ತಿಯ ಮೇರೆಗೆ 2017 ರಲ್ಲಿ ಈ ಸರ್ಕಾರೇತರ ಸಂಸ್ಥೆ ಸ್ಥಾಪನೆಯಾಯಿತು.
ಡಾ.ವೀರಣ್ಣ ಚರಂತಿಮಠ ಅವರು ಅಧ್ಯಕ್ಷರಾಗಿರುವ ಶ್ರೀ ಬಿಳೂರು ಗುರುಬಸವ ಪತ್ತಿನ ಸಹಕಾರ ಸಂಘದಿಂದ ಪ್ರತಿವರ್ಷ ಈ ಥೆಲಸಿಮೀಯಾ ಸಂಸ್ಥೆಗೆ 25 ಲಕ್ಷ ರೂಪಾಯಿಗಳನ್ನು ದೇಣಿಗೆಯಾಗಿ ನೀಡುತ್ತಿರುವರು. ಈ ಸಂಸ್ಥೆಯಡಿ ಥೆಲಸೀಮಿಯಾ ರೋಗಿಗಳಿಗೆ ಉಚಿತ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಮತ್ತು ಉಚಿತ ಔಷಧಿ ವಿತರಿಸಲಾಗುತ್ತಿದೆ.
ಥೆಲಸೀಮಿಯಾ ರೋಗದಿಂದ ಬಳಲುವ ಮಕ್ಕಳು ಸಂಪೂರ್ಣ ರೋಗ ಮುಕ್ತರಾಗಲು ಅಸ್ಥಿಮಜ್ಜೆ (ಬೋನ್ ಮ್ಯಾರೋ) ಕಸಿ ಒಂದೇ ಏಕೈಕ ಪರಿಹಾರ. ಆದರೆ ಅಸ್ಥಿಮಜ್ಜೆ ಕಸಿ ಮಾಡುವುದು ಸುಲಭವಲ್ಲ. ರೋಗಿಯ ಅಂಗಸತ್ವ (ಎಚ್.ಎಲ್.ಎ) ದಾನಮಾಡುವ ವ್ಯಕ್ತಿಯ ಅಂಗಸತ್ವದೊಂದಿಗೆ (ಎಚ್.ಎಲ್.ಎ) ಹೊಂದಾಣಿಕೆಯಾದಾಗ ಮಾತ್ರ ಚಿಕಿತ್ಸೆ ಸಾಧ್ಯವಾಗುತ್ತದೆ. ಈ ಚಿಕಿತ್ಸೆಗೆ 18 ರಿಂದ 20 ಲಕ್ಷ ರೂಪಾಯಿಗಳು ವೆಚ್ಚವಾಗುವುದರಿಂದ ಆರ್ಥಿಕವಾಗಿ ಬಹಳ ದುಬಾರಿಯಾಗಿದ್ದು ಬಡ ಪಾಲಕರಿಗೆ ಹೊರೆಯಾಗುತ್ತದೆ. ಈ ಸಮಸ್ಯೆಯನ್ನರಿತು ಆರ್ಥಿಕವಾಗಿ ಹಿಂದುಳಿದ ಕುಟುಂಬಗಳಿಗೆ ನೆರವಾಗುವ ದೃಷ್ಟಿಯಿಂದ ಹಾನಗಲ್ಲ ಶ್ರೀ ಕುಮಾರೇಶ್ವರ ಆಸ್ಪತ್ರೆಯಲ್ಲಿನ ಥೆಲಸೀಮಿಯಾ ಮತ್ತು ಹಿಮೊಫಿಲಿಯಾ ಸಂಸ್ಥೆಯು ಬೆಂಗಳೂರಿನ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಸಹಯೋಗದೊಂದಿಗೆ ಅತೀ ಕಡಿಮೆ ವೆಚ್ಚದಲ್ಲಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆಯ ಸೌಲಭ್ಯವನ್ನು ರೋಗಿಗಳಿಗೆ ಕಲ್ಪಿಸಿಕೊಟ್ಟಿದೆ. ಪರಿಣಾಮವಾಗಿ ಬಡ ರೋಗಿಗಳು ಕೈಗೆಟಕುವ ದರದಲ್ಲಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆಯನ್ನು ಪಡೆಯಲು ಸಾಧ್ಯವಾಗುತ್ತಿದೆ.
ಥೆಲಸೀಮಿಯಾ ರೋಗದಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಚಿಕಿತ್ಸೆ ನೀಡುವುದರೊಂದಿಗೆ ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕೈಗೆಟಕುವ ದರದಲ್ಲಿ ಅಸ್ಥಿಮಜ್ಜೆ ಕಸಿ ಚಿಕಿತ್ಸೆಯ ನೆರವು ನೀಡುತ್ತಿರುವ ಥೆಲಸೀಮಿಯಾ ಮತ್ತು ಹಿಮೊಫಿಲಿಯಾ ಸಂಸ್ಥೆಯ ಮುಖ್ಯಸ್ಥರಾದ ಡಾ.ಭುವನೇಶ್ವರಿ ಯಳಮಲಿ, ಚಿಕ್ಕಮಕ್ಕಳ ವಿಭಾಗದ ಮುಖ್ಯಸ್ಥರಾದ ಡಾ.ಅಶೋಕ ಬಡಕಲಿ ಮತ್ತು ನಾರಾಯಣ ಮಲ್ಟಿಸ್ಪೆಷಾಲಿಟಿ ಆಸ್ಪತ್ರೆಯ ಡಾ.ಶೋಭಾ ಬಡಿಗೇರ ಹಾಗೂ ಅವರ ತಂಡದ ತಜ್ಞವೈದ್ಯರನ್ನು ಶಾಸಕರು ಮತ್ತು ಬಿ.ವಿ.ವಿ.ಸಂಘದ ಕಾರ್ಯಾಧ್ಯಕ್ಷರಾದ ಡಾ.ವೀರಣ್ಣ ಚರಂತಿಮಠ, ವೈದ್ಯಕೀಯ ಆಡಳಿತ ಮಂಡಳಿ ಕಾರ್ಯಾಧ್ಯಕ್ಷರಾದ ಅಶೋಕ ಸಜ್ಜನ (ಬೇವೂರ) ಮತ್ತು ಮೆಡಿಕಲ್ ಕಾಲೇಜ್ ಪ್ರಾಚಾರ್ಯರಾದ ಡಾ.ಅಶೋಕ ಮಲ್ಲಾಪೂರ ಅಭಿನಂದಿಸಿರುವರು.